ಸಾರಾಂಶ
ಮೈಸೂರು : ಜೀವನದಲ್ಲಿ ಮಾಡುವ ಕೆಲಸ ಪ್ರಾಮಾಣಿಕ ಮತ್ತು ಶುದ್ಧತೆಯಿಂದ ಕೂಡಿದ್ದರೆ ನರಕ ಎನ್ನುವುದು ಹತ್ತಿರಕ್ಕೂ ಬರುವುದಿಲ್ಲ. ಆದರೆ ಸ್ವರ್ಗ ಎನ್ನುವುದು ನಮ್ಮ ಮುಂದೆ ಬರುತ್ತದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.
ನಗರದ ನಟರಾಜ ಸಭಾಭವನದಲ್ಲಿ ಮೈಸೂರು ಶರಣ ಮಂಡಲಿಯು ಬುಧವಾರ ಆಯೋಜಿಸಿದ್ದ ಬಸವ ಜಯಂತಿ, ಬಸವರತ್ನ ಪ್ರಶಸ್ತಿ ಪ್ರದಾನ ಹಾಗೂ ವಾಟಾಳು ಶ್ರೀಗಳಿಗೆ ಗುರುವಂದನೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿಶ್ವ ಗುರು ಬಸವಣ್ಣನ ವಚನ ಪಾಲಿಸಿದರೆ ಈ ಭೂಮಿಯೇ ಸ್ವರ್ಗವಾಗುತ್ತದೆ. ನಮ್ಮ ಸುತ್ತಮುತ್ತಲಿನ ವಾತಾವರಣ ಒಳ್ಳೆಯ ರೀತಿಯಲ್ಲಿ ನಿರ್ಮಾಣ ಮಾಡಿಕೊಳ್ಳಬೇಕು. ಉತ್ತಮ ವ್ಯಕ್ತಿತ್ವ ರೂಪಿಸಿಕೊಂಡು ಸತ್ಯದ ಮಾರ್ಗದಲ್ಲಿ, ಜ್ಞಾನದ ಮಾರ್ಗದಲ್ಲಿ ಪ್ರಾಮಾಣಿಕತೆಯಿಂದ ನಡೆದರೇ ಸ್ವರ್ಗ ದರ್ಶನವಾಗುತ್ತದೆ. ದುಷ್ಟಕೂಟವನ್ನು ಕಟ್ಟಿಕೊಂಡು, ಅನ್ಯಾಯಮಾರ್ಗದಲ್ಲಿ ನಡೆದರೆ ನರಕ ಪ್ರಾಪ್ತಿಯಾಗುತ್ತದೆ ಎಂದು ಸುಲಭವಾಗಿ ಶರಣರು ಹೇಳಿದ್ದಾರೆ ಎಂದರು.
ಬಸವಣ್ಣನ ತತ್ತ್ವವನ್ನು ಜನರು ಸುಲಲಿತವಾಗಿ ಹೇಳುತ್ತಾರೆಯೇ ಹೊರತು, ಪಾಲಿಸುತ್ತಿಲ್ಲ. ಆದ್ದರಿಂದ ಬಸವೇಶ್ವರರ ವಚನಗಳನ್ನು ಹೇಳುವುದಷ್ಟೇ ಅಲ್ಲ ಆಚರಣೆಗೆ ತರುವುದು ಬಹಳ ಮುಖ್ಯ. ಬಸವಣ್ಣ 12ನೇ ಶತಮಾನದಲ್ಲಿ ವಚನಗಳನ್ನು ರಚಿಸಿದ್ದಾರೆ. ಅದು ಆ ಕಾಲಕ್ಕೆ ಅಷ್ಟೇ ಅಲ್ಲ ಈಗಲೂ ಪ್ರಸ್ತುತ. ಭಾರತೀಯ ಪರಂಪರೆಯಲ್ಲಿ, ತತ್ವಶಾಸ್ತ್ರದಲ್ಲಿ ಇರುವ ವಿಷಯವನ್ನು ಸಾಮಾನ್ಯರಿಗೂ ತಿಳಿಯುವಂತೆ ಆಡುಭಾಷೆಯಲ್ಲಿ ವಚನಗಳನ್ನು ಬರೆದಿದ್ದಾರೆ. ದೇವಲೋಕ, ಮರ್ತ್ಯಲೋಕ ಎಂಬುವು ಇಲ್ಲ. ಆಚಾರವೇ ಸ್ವರ್ಗ, ಅನಾಚರವೇ ನರಕ ಎಂದು ಸರಳವಾಗಿ ಎರಡು ಸಾಲಿನಲ್ಲಿ ಜೀವನವನ್ನು ತಿಳಿಸಿದ್ದಾರೆ ಎಂದರು.
ಮೈಸೂರು ಅರಸರ ಪರಂಪರೆಯು ಬಸವಣ್ಣ ಅವರ ಕಾಯಕವೇ ಕೈಲಾಸ ಎಂಬ ತತ್ತ್ವವನ್ನು ಅನುಸರಿಸಿಕೊಂಡು ಅಭಿವೃದ್ಧಿ ಕೆಲಸವನ್ನು, ಜನಪರ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿದೆ. ಅದೇ ಪರಂಪರೆಯನ್ನು ಸಂಸದರಾಗಿ ನಾವು ಮುಂದುವರೆಸಿಕೊಂಡು ಹೋಗುತ್ತೇವೆ. ಹಿಂದಿನ ಪರಂಪರೆಗೂ ಧಕ್ಕೆಯಾಗದ ರೀತಿ, ಮುಂದಿನ ಅಭಿವೃದ್ಧಿ ಕೆಲಸಗಳನ್ನೂ ಮಾಡುತ್ತಾ ಜೊತೆಗೆ ಮೈಸೂರು ಮೈಸೂರಾಗಿಯೇ ಇರುವಂತೆ ನೋಡಿಕೊಳ್ಳುವ ಗುರುತರವಾದ ಜವಾಬ್ದಾರಿಯು ಇದೆ ಎಂದರು.
ಭಾರತದ ಸ್ವಚ್ಛನಗರಗಳ ಪಟ್ಟಿಯಲ್ಲಿ ಮೈಸೂರು ಮೇಲುಗೈ ಸಾಧಿಸಬೇಕು. ಇದಕ್ಕೆ ಸಾರ್ವಜನಿಕರು ಕೈ ಜೋಡಿಸಿ, ಸಮರ್ಪಕವಾಗಿ ಮೂಲದಲ್ಲಿಯೇ ಕಸ ಬೇರ್ಪಡಿಸಬೇಕು. ಎಲ್ಲೆಂದರಲ್ಲಿ ಕಸ ಎಸೆಯಬಾರದು. ನಾವು ಕಂಡ ಹಾಗೇ ಈ ಪ್ರವೃತ್ತಿಗೆ ವರ್ಗಬೇಧ ಎನ್ನುವುದೇ ಇಲ್ಲ. ಶ್ರೀಮಂತರು ಅದೇ ಕೆಲಸ ಮಾಡುತ್ತಾರೆ. ಬಡವರು ಅದನ್ನೇ ಮಾಡುತ್ತಾರೆ. ಆದ್ದರಿಂದ ಇದರ ಬಗ್ಗೆ ಜಾಗೃತಿ ಮೂಡಿಸಬೇಕು. ದೀರ್ಘಕಾಲದ ಯೋಜನೆಗಾಗಿ ಈಗಿನಿಂದಲೇ ಶಾಲಾ ಮಟ್ಟದಲ್ಲಿ ತ್ಯಾಜ್ಯ ವಿಲೇವಾರಿ, ಸ್ವಚ್ಛತೆ ಕುರಿತು ಅರಿವು ಮೂಡಿಸುವ ಅವಶ್ಯಕತೆಯೂ ಇದೆ ಎಂದು ಸಂಸದರು ಪರಿಸರದ ಜಾಗೃತಿಯ ಪಾಠ ಮಾಡಿದರು.
ಪ್ರಧಾನ ಭಾಷಣ ಮಾಡಿದ ನಟರಾಜ ಶಿಕ್ಷಣ ಸಂಸ್ಥೆಯ ವಿಶೇಷಾಧಿಕಾರಿ ಪ್ರೊ.ಎಸ್. ಶಿವರಾಜಪ್ಪ , ಬಸವಾದಿ ಶರಣರ ಒಂದೊಂದು ವಚನಗಳು ಬದುಕಿಗೆ ದೀವಟಿಗೆ ಇದ್ದಂತೆ. ಜೀವನದಲ್ಲಿ ಬರುವ ಕತ್ತಲನ್ನು ಓಡಿಸುವ ಬೆಳಕು. ಆದರೆ ಇಂದಿನ ದಿನಮಾನದಲ್ಲಿ ವಚನಗಳನ್ನು ಪಾಲಿಸುತ್ತಿಲ್ಲ. ಯುವ ಜನರು ಯಾವ ರೀತಿ ಮೋಸ, ಕಪಟ, ವಂಚನೆಗೆ ಒಳಗಾಗುತ್ತಿದ್ದಾರೆ.ಮಹಿಳೆಯರ ಮೇಲೆ ಶೋಷಣೆ ಯಾವ ರೀತಿ ನಡೆಯುತ್ತಿದೆ. ಇವುಗಳು ಸಮಾಜಕ್ಕೆ ಯಾವ ಸಂದೇಶವನ್ನು ಕೊಡುತ್ತಿವೆ ಎನ್ನುವುದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಕಾಲಘಟ್ಟದಲ್ಲಿ ನಾವು ಇದ್ದೇವೆ ಎಂದರು.
ಆಧ್ಯಾತ್ಮದ ಮೂಲಕ ಸರ್ವರಲ್ಲೂ ಸಮಾನತೆ, ಶಾಂತಿ ಬೋಧಿಸಬೇಕಿರುವ ದೇವಾಲಯಗಳು ಪ್ರಸ್ತುತ ವ್ಯಾಪಾರಿ ಕೇಂದ್ರಗಳಾಗಿವೆ. ಸಂಪಾದನೆಯ ಪೈಪೋಟಿಯಲ್ಲಿ ಸಾಮಾಜಿಕ ಕೆಲಸವನ್ನೇ ಮರೆತುಬಿಟ್ಟಿವೆ. ಹಿರಿಯರು, ಆಳುವವರೂ ಕೂಡಾ ಸ್ವಾರ್ಥಕ್ಕಾಗಿ ಪರಿವರ್ತನೆ ಆಗಿರುವುದು ದುರ್ದೈವದ ಸಂಗತಿ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಅಂಗವಾಗಿ ವಾಟಾಳು ಮಠದ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ ಅವರಿಗೆ ಬಸವರತ್ನ ಪ್ರಶಸ್ತಿ ಪ್ರದಾನ ಮಾಡಿ, ಗುರುವಂದನೆ ಸಲ್ಲಿಸಲಾಯಿತು. ವಿವಿಧ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಪ್ರೊ.ಎಂ. ಕೋಮಲಾ, ಎಚ್.ಜಿ. ಪವಿತ್ರ, ಜೆ. ಬಾಪೂಜಿ, ಜಯಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು.
ಹೊಸಮಠದ ಶ್ರೀಚಿದಾನಂದ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ನಿವೃತ್ತ ಐಎಫ್ಎಸ್ ಅಧಿಕಾರಿ ಆರ್. ರಾಜು ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಡಾ.ಡಿ. ತಿಮ್ಮಯ್ಯ, ಮೈಸೂರು ಕಲ್ಚರಲ್ ಅಸೋಸಿಯೇಷನ್ ಅಧ್ಯಕ್ಷ ಎಪಿಎನ್ ನಾಗೇಶ್, ಶರಣ ಮಂಡಲಿ ಅಧ್ಯಕ್ಷ ಮೂಗೂರು ನಂಜುಂಡಸ್ವಾಮಿ, ಉಪಾಧ್ಯಕ್ಷ ಎ.ಸಿ. ಜಗದೀಶ್, ಗೌರವಾಧ್ಯಕ್ಷ ಯು.ಎಸ್. ಶೇಖರ್ ಮೊದಲಾದವರು ಇದ್ದರು.