ಕನ್ನಡ ಮನಸ್ಸುಗಳ ಏಕೀಕರಣವಾಗಬೇಕು: ಕೆ.ರಾಘವೇಂದ್ರ ನಾಯರಿ

| Published : Nov 11 2024, 11:47 PM IST

ಸಾರಾಂಶ

ದಾವಣಗೆರೆ ಸಮೀಪದ ಮಿಟ್ಲಕಟ್ಟೆಯಲ್ಲಿ ವಿಬಿಪಿ ಫೌಂಡೇಶನ್ ವತಿಯಿಂದ ಕನ್ನಡ ರಾಜ್ಯೋತ್ಸವ ಆಚರಿಸಲಾಯಿತು.

ವಿಬಿಪಿ ಫೌಂಡೇಶನ್ ವತಿಯಿಂದ 69ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ ಕನ್ನಡಪ್ರಭ ವಾರ್ತೆ ದಾವಣಗೆರೆ

ಭೌಗೋಳಿಕವಾಗಿ, ಆಡಳಿತಾತ್ಮಕವಾಗಿ ಏಕೀಕರಣವಾದರೆ ಸಾಲದು. ಮೊದಲು ಕನ್ನಡ ಮನಸ್ಸುಗಳ ಏಕೀಕರಣವಾಗಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕೋಶಾಧ್ಯಕ್ಷ ಕೆ.ರಾಘವೇಂದ್ರ ನಾಯರಿ ಹೇಳಿದರು.

ದಾವಣಗೆರೆ ಸಮೀಪದ ಮಿಟ್ಲಕಟ್ಟೆ ಗ್ರಾಮದಲ್ಲಿ ವಿಬಿಪಿ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ 69ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ನಾಡಿನಲ್ಲಿರುವ ನಾವೆಲ್ಲರೂ ಒಂದೇ ಎಂಬ ಭಾವನೆ ಎಲ್ಲರಲ್ಲೂ ಬರಬೇಕು. ಸಂಗೀತ, ಸಾಹಿತ್ಯ, ಕಲೆ, ಶೈಕ್ಷಣಿಕ, ವಿಜ್ಞಾನ, ತಂತ್ರಜ್ಞಾನ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರವಾಗಿದೆ. ಕನ್ನಡ ಸಾಹಿತ್ಯಕ್ಕೆ ಸಿಕ್ಕ 8 ಜ್ಞಾನಪೀಠ ಪ್ರಶಸ್ತಿಗಳು ಕನ್ನಡ ಸಾಹಿತ್ಯದ ಶ್ರೀಮಂತಿಕೆಯ ದ್ಯೋತಕವಾಗಿದೆ ಎಂದು ನುಡಿದರು.

ಕನ್ನಡ ನಾಡು, ನುಡಿಗೆ ಮಹತ್ವ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಬೇಕು. ಕರ್ನಾಟಕ ರಾಜ್ಯೋತ್ಸವ ನವೆಂಬರ್ ತಿಂಗಳಿಗೆ ಮಾತ್ರ ಸೀಮಿತವಾಗದೇ ನಿತ್ಯೋತ್ಸವವಾಗಬೇಕು. ಹೃದಯದ ಭಾಷೆ ಎನ್ನಿಸಿಕೊಂಡ ಮಾತೃಭಾಷೆಯನ್ನು ಎಂದಿಗೂ ಮರೆಯಬಾರದು. ಕನ್ನಡ ನಾಡು, ನುಡಿ, ಸಾಹಿತ್ಯದ ಹಿರಿಮೆಯನ್ನು ಯುವ ಜನತೆಗೆ ತಲುಪಿಸಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ಆಶಾಕಿರಣ ಟ್ರಸ್ಟ್ ನ ಸಂಸ್ಥಾಪಕ ಪೋಪಟ್ ಲಾಲ್ ಜೈನ್, ವಿಬಿಪಿ ಫೌಂಡೇಶನ್‌ನ ಮುಖ್ಯಸ್ಥ ಶಿವಕುಮಾರ ಮೇಗಳಮನೆ, ಉದ್ಯಮಿ ಸುರೇಶ್, ನಗೆಕೂಟದ ರಾಮಚಂದ್ರ ಶೆಟ್ಟರ್, ಗಣಪತಿ ಕಾಗಲ್‌ಕರ್, ಫೌಂಡೇಶನ್‌ನ ಕಾರ್ಯದರ್ಶಿ ಎ.ಎನ್.ಪ್ರಭು, ಚೌಡಪ್ಪ ಹಾಗೂ ಸಂಸ್ಥೆಯ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.