ಜೈನ ಶ್ರಾವಕ-ಶ್ರಾವಕಿಯರಿಗೆ ಪ್ರತಿ ಗ್ರಾಮ ಹಾಗೂ ನಗರಗಳಲ್ಲಿ ಜೈನ ಧರ್ಮದ ಸಂಸ್ಕಾರ ಶಿಬಿರಗಳಾಗಬೇಕು. ಜೈನ ಧರ್ಮದ ಸಂಸ್ಕಾರ, ಧರ್ಮ ಪ್ರಭಾವನೆ ಹಾಗೂ ಜೈನ ಧರ್ಮದ ಉಳಿವಿಗೆ ಈ ಶಿಬಿರಗಳ ಆಯೋಜನೆ ಅಗತ್ಯವಾಗಿದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಹೇಳಿದರು.
ಹಾವೇರಿ:ಜೈನ ಶ್ರಾವಕ-ಶ್ರಾವಕಿಯರಿಗೆ ಪ್ರತಿ ಗ್ರಾಮ ಹಾಗೂ ನಗರಗಳಲ್ಲಿ ಜೈನ ಧರ್ಮದ ಸಂಸ್ಕಾರ ಶಿಬಿರಗಳಾಗಬೇಕು. ಜೈನ ಧರ್ಮದ ಸಂಸ್ಕಾರ, ಧರ್ಮ ಪ್ರಭಾವನೆ ಹಾಗೂ ಜೈನ ಧರ್ಮದ ಉಳಿವಿಗೆ ಈ ಶಿಬಿರಗಳ ಆಯೋಜನೆ ಅಗತ್ಯವಾಗಿದೆ ಎಂದು ಚರ್ಯಾಶಿರೋಮಣಿ ಮುನಿಶ್ರೀ 108 ವಿದಿತಸಾಗರ ಮಹಾರಾಜರು ಹೇಳಿದರು.ನಗರದ ರಜನಿ ಸಭಾಂಗಣದಲ್ಲಿ ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವದ ಅಂಗವಾಗಿ ಗುರುವಾರ ಜರುಗಿದ ಜೈನ ಸರ್ಕಾರಿ ನೌಕರರ ಸಮಾವೇಶದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.ಶಿಬಿರ ನಡೆಸಲು ವಿವಿಧ ಸಾಧನಗಳ ಕೆಲವು ವ್ಯವಸ್ಥೆ ಮಾಡಬೇಕಾಗುತ್ತದೆ. ಹಾಗಾಗಿ ಎಲ್ಲ ಜೈನ ಸರ್ಕಾರಿ ನೌಕರರು ಪ್ರತಿ ವರ್ಷ 15 ದಿನಗಳ ಸಂಬಳ ನೀಡುವ ವಾಗ್ದಾನ ಮಾಡಬೇಕು. ಧಾರ್ಮಿಕ ಶಿಬಿರಗಳಿಗೆ ಸಮಾಜದ ಸಜ್ಜನರು ತನು-ಮನದಿಂದ ಸಹಾಯಮಾಡಬೇಕು. ಅದೇ ರೀತಿ ಬರುವ ದಿನಗಳಲ್ಲಿ ರಾಜ್ಯ ಮಟ್ಟದ ಜೈನ ಸಮಾವೇಶ ಹಮ್ಮಿಕೊಳ್ಳಲು ಚಿಂತನೆ ಮಾಡಲಾಗಿದೆ ಎಂದರು.ಜೈನ ಯುವಕ ಮತ್ತು ಯುವತಿಯರು ಉತ್ತಮ ಸಂಸ್ಕಾರ ಹೊಂದುವ ಮೂಲಕ ಯೋಗ್ಯರಾಗಬೇಕು ಹಾಗೂ ಸಮಾಜದ ಭದ್ರತೆಗೆ ಸಂಕಲ್ಪ ಮಾಡಬೇಕು. ಜೈನ ಸಮಾಜದ ಉನ್ನತಿಗೆ ಎಲ್ಲರೂ ಒಗ್ಗಟ್ಟಾಗಬೇಕು ಎಂದರು.ಉದ್ಘಾಟನೆ ನೆರವೇರಿಸಿದ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ದಾನಮ್ಮನವರ ಮಾತನಾಡಿ, 10ನೇ ಶತಮಾನ ಜೈನ ಧರ್ಮದ ವೈಭವದ ಕಾಲವಾಗಿತ್ತು. ಆಗಿನ ರಾಜ-ಮಹಾರಾಜರು ಮುನಿಗಳನ್ನು ಪ್ರೋತ್ಸಾಹಿಸುತ್ತಿದ್ದರು. 12ನೇ ಶತಮಾನದಲ್ಲಿ ಕೊಪ್ಪಳ, ಹಾವೇರಿ ಜಿಲ್ಲೆಯ ಬಂಕಾಪುರ ಹಾಗೂ ಶ್ರವಣಬೆಳಗೋಳ ಜೈನ ಧರ್ಮದ ಮುಖ್ಯ ಕೇಂದ್ರಗಳಾಗಿದ್ದವು. ಜೈನ ಧರ್ಮ ಬಹಳ ಪ್ರಾಚೀನವಾಗಿದ್ದು, ತಮ್ಮದೇ ಆದ ಆಚಾರ ವಿಚಾರ ಹೊಂದಿದೆ. ಸರಿಯಾದ ನಂಬಿಕೆ, ಜ್ಞಾನ ಹಾಗೂ ನಡವಳಿಕೆ ಇದ್ದರೆ ಸಮಾಜದಲ್ಲಿನ ಶಾಂತಿ ಹಾಗೂ ಸಾಮರಸ್ಯ ಸಾಧ್ಯ. ಅಹಿಂಸೆ ಜೈನ ಧರ್ಮದ ಸಿದ್ಧಾಂತವಾಗಿದೆ ಹಾಗೂ ಭೂಮಿ ಮೇಲಿನ ಸಕಲ ಜೀವಿಗಳಿಗೂ ಬದುಕುವ ಹಕ್ಕಿದೆ ಎಂದು ಹೇಳಿದರು.ಜೈನ ಧರ್ಮದಲ್ಲಿ 24 ತೀರ್ಥಂಕರರಿದ್ದು, ಭಗವಂತರು ಅಹಿಂಸಾ ಮಾರ್ಗ ಅನುಸರಿಸುವ ಜೊತೆಗೆ ನಮಗೆ ಬೇಕಾದಷ್ಟು ಮಾತ್ರ ಆಸ್ತಿ ಮಾಡಬೇಕು, ಅವಶ್ಯಕತೆಗಿಂತ ಹೆಚ್ಚಗಿಗೆ ಆಸ್ತಿ ಮಾಡಬಾರದು ಎಂದು ಹೇಳಿದ್ದಾರೆ. ಇಂದು ಅಭಿವೃದ್ಧಿ ನಾಗಾಲೋಟದಲ್ಲಿ ಪರಿಸರ ನಾಶವಾಗುತ್ತಿದೆ. ಪರಿಸರ ಸಂರಕ್ಷಣೆ ಎಲ್ಲರ ಜವಾಬ್ದಾರಿಯಾಗಿದೆ ಎಂದರು.ಇಂದು ಜೈನ ಸರ್ಕಾರಿ ನೌಕರರ ಸಮಾವೇಶ ಆಯೋಜಿಸಿದ್ದು ಬಹಳ ಔಚಿತ್ಯವಾಗಿದೆ. ಅಧಿಕಾರಿಗಳು ಹಾಗೂ ನೌಕರರು ತಮ್ಮ ಕಚೇರಿಗೆ ಬರುವ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಕೆಲಸಗಳನ್ನು ಕಾಲಮಿತಿಯೊಳಗೆ ಪ್ರಾಮಾಣಿಕವಾಗಿ ಮಾಡಿದಾಗ ಅಧಿಕಾರಿಗಳ ಮೇಲೆ ನಂಬಿಕೆ ಬರುತ್ತದೆ ಹಾಗೂ ಸದೃಢ ಸಮಾಜ ಕಟ್ಟಲು ಸಾಧ್ಯ ಎಂದರು.ಈ ಸಿದ್ಧ ಚಕ್ರ ಆರಾಧನೆ ಅತ್ಯಂತ ಶ್ರೇಷ್ಠವಾಗಿದ್ದು, ಕರ್ಮದಿಂದ ಮುಕ್ತರಾಗುವ ವಿಧಾನವಾಗಿದ್ದು, ಎಲ್ಲರೂ ಈ ಪುಣ್ಯದ ಲಾಭ ಪಡೆದುಕೊಳ್ಳಬೇಕು ಎಂದು ಶುಭ ಹಾರೈಸಿದರು. ಪದ್ಮಶ್ರೀ ಮಾತಾಜಿ, ಪ್ರತಿಷ್ಠಾಚಾರ್ಯರಾದ ಮಾಣಿಕ ಶ್ರೀಪಾಲ ಚಂದಗಡೆ ಮತ್ತು ಪ್ರತಿಮಾಧಾರಿಗಳಾದ ಸಿದ್ದಗೌಡ ಪಾಟೀಲ, ಬ್ರ. ಸಾಧನಾ ದೀದಿ, ಬಾಲ ಬ್ರಹ್ಮಚಾರಿ ಮಹಾವೀರ ಭಯ್ಯಾಜಿ ಹಾಗೂ ಬ್ರ. ಜಯಕುಮಾರ ಭಯ್ಯಾಜಿ, ಜಿನೇಂದ್ರ ಬಂಗ, ಸಾದನಾ ದಿದಿ, ಎಚ್.ಪಿ.ಅನಂತನಾಗ, ಬೃಹತ್ ಸಿದ್ಧಚಕ್ರ ಮಹಾಮಂಡಲ ವಿಧಾನ ಮಹೋತ್ಸವ ಸಮಿತಿ ಅಧ್ಯಕ್ಷ ಸುಭಾಸ ಪಾಟೀಲ, ಕಾರ್ಯದರ್ಶಿ ಎಸ್.ಎ.ವಜ್ರಕುಮಾರ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಡಾ. ಅಬ್ದುಲ್ ರಶೀದ ಮರ್‌ಜನ್ವರ್, ರೇಷ್ಮೆ ಇಲಾಖೆ ನಿವೃತ್ತ ನೌಕರ ಚಂದ್ರನಾಥ ಬೋಗಾರ ಸೇರಿದಂತೆ ಅನೇಕ ನೌಕರರು ಪಾಲ್ಗೊಂಡಿದ್ದರು. ಮಹಾವೀರ ಕಳಸೂರ ಸ್ವಾಗತಿಸಿದರು. ಶ್ರೀಮತಿ ಕುಮುದಾ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮಕ್ಕೂ ಮೊದಲು ಬೆಳಗ್ಗೆ ಜಿನಭಗವಂತರ ಜಲಾಭಿಷೇಕ, ಗಂಧಾಭಿಷೇಕ, ಪುಷ್ಪವೃಷ್ಟಿ, ಬೃಹತ್ ಶಾಂತಿಧಾರೆ, ನಿತ್ಯಪೂಜೆ, ದೇವಶಾಸ್ತçಗುರುಪೂಜೆ, ಬೃಹತ್ ಶ್ರೀ ಸಿದ್ಧಚಕ್ರ ಮಹಾಮಂಡಲ ವಿಧಾನ ಸೇರಿದಂತೆ ವಿಶೇಷ ಪೂಜಾ ಕಾರ್ಯಕ್ರಮಗಳು ಜರುಗಿದವು.