ಕೃಷಿಯನ್ನು ಲಾಭದಾಯಕವಾಗಿಸಲು ಸಮಗ್ರ ಕೃಷಿ ಕೈಕೊಳ್ಳುವುದು ಅಗತ್ಯ. ಬದುಗಳಲ್ಲಿ ಗಿಡ-ಮರ ನೆಡುವುದರಿಂದ ಮಳೆ ನೀರು ಹರಿದು ಹೋಗದೆ ಮಣ್ಣಿನ ಸಂರಕ್ಷಣೆಯ ಜತೆಗೆ ಅಂತರ್ಜಲ ಹೆಚ್ಚಿಸಲು ಸಹಾಯಕವಾಗುತ್ತದೆ.
ಧಾರವಾಡ:
ಹಳೆ ಬೇರು ಹೊಸ ಚಿಗುರು ಎಂಬಂತೆ ಸಾಂಪ್ರದಾಯಿಕ ಕೃಷಿ ಪದ್ಧತಿಯ ಜತೆಗೆ ರೈತರು ಹೊಸ ತಂತ್ರಜ್ಞಾನಗಳಾದ ಸೂಕ್ಷ್ಮ ನೀರಾವರಿ, ಕೃಷಿ ಹೊಂಡ, ಮಳೆ ನೀರು ಕೊಯ್ಲು ಅಳವಡಿಸಿಕೊಳ್ಳುವಂತೆ ಪ್ರಗತಿಪರ ರೈತ ಶಂಕರ ಲಂಗಟಿ ಹೇಳಿದರು.ಇಲ್ಲಿಯ ವಾಲ್ಮಿಯಲ್ಲಿ ‘ರೈತರ ದಿನಾಚರಣೆ ಮತ್ತು ವಿಶ್ವ ಮಣ್ಣು ದಿನಾಚರಣೆಯಲ್ಲಿ ಮಾತನಾಡಿದ ಅವರು, ಕೃಷಿಯನ್ನು ಲಾಭದಾಯಕವಾಗಿಸಲು ಸಮಗ್ರ ಕೃಷಿ ಕೈಕೊಳ್ಳುವುದು ಅಗತ್ಯ. ಬದುಗಳಲ್ಲಿ ಗಿಡ-ಮರ ನೆಡುವುದರಿಂದ ಮಳೆ ನೀರು ಹರಿದು ಹೋಗದೆ ಮಣ್ಣಿನ ಸಂರಕ್ಷಣೆಯ ಜತೆಗೆ ಅಂತರ್ಜಲ ಹೆಚ್ಚಿಸಲು ಸಹಾಯಕವಾಗುತ್ತದೆ. ತಮ್ಮ ನಿರಂತರ ಶ್ರಮದ ಫಲವಾಗಿ 260ಕ್ಕಿಂತ ಹೆಚ್ಚು ಭತ್ತ ತಳಿ, ಹಣ್ಣು, ತರಕಾರಿಗಳ ಬೀಜ ಬ್ಯಾಂಕ್ ಸ್ಥಾಪಿಸಿದ್ದೇನೆ. ಸಾವಯವ ಕೃಷಿ ಉತ್ಪನ್ನಗಳಿಗೆ ಮಾರುಕಟ್ಟೆ ಸೃಷ್ಟಿ ಮಾಡಿದ್ದು, ಪ್ರಥಮ ಬಾರಿಗೆ ಧಾರವಾಡದ ಗುರುವಾರ ಸಂತೆಯಲ್ಲಿ ತಮ್ಮದೇ ಉತ್ಪನ್ನ ಮಾರಾಟ ಮಾಡುತ್ತಿದ್ದೇವೆ ಎಂದರು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತೇರೆನೂರು ನೀರು ಬಳಕೆದಾರರ ಸಂಘದ ಅಧ್ಯಕ್ಷ ಪಾಂಡುರಂಗ ಟಿ.ಕೆ., ರೈತರಿಗೆ ಮಖ್ಯವಾಗಿ ಆರೋಗ್ಯಕರ ಮಣ್ಣು ಅವಶ್ಯಕ. ಸಗಣಿ ಗೊಬ್ಬರದಲ್ಲಿ ಈಚೆಗೆ ಪ್ಲಾಸ್ಟಿಕ್ ತ್ಯಾಜ್ಯಗಳು ಹೆಚ್ಚಾಗುತ್ತಿವೆ. ಆದ್ದರಿಂದ ವಾಲ್ಮಿಯು ಮಣ್ಣು ಮತ್ತು ನೀರಿನ ಸಂರಕ್ಷಣೆ, ಅಭಿವೃದ್ಧಿ ವಿಷಯಗಳ ತರಬೇತಿಗಳ ಫಲ ಪಡೆಯಬೇಕೆಂದರು.ಅಧ್ಯಕ್ಷತೆ ವಹಿಸಿದ್ದ ವಾಲ್ಮಿ ನಿರ್ದೇಶಕ ಡಾ. ಗಿರೀಶ್ ಮರಡ್ಡಿ, ವಾಲ್ಮಿ ರಾಜ್ಯದ ಆರು ಅಚ್ಚುಕಟ್ಟು ಪ್ರದೇಶಗಳಲ್ಲಿ ಮೊದಲ ಹಂತದಲ್ಲಿ 150ಕ್ಕೂ ಹೆಚ್ಚು ಪ್ರಗತಿಪರ ರೈತರನ್ನು ಗುರುತಿಸಿದೆ. ಪ್ರತಿಯೊಬ್ಬ ರೈತರೂ ಸಾಧಕರು. ಪ್ರತಿ ಅಚ್ಚುಕಟ್ಟಿನಿಂದ ಒಬ್ಬರಂತೆ ಆರು ಜನ ಪ್ರಗತಿಪರ ರೈತರನ್ನು ಸನ್ಮಾನಿಸಲಾಗಿದೆ ಎಂದರು.
ಪ್ರತಿಯೊಬ್ಬ ರೈತರಲ್ಲೂ ನಮ್ಮ ನೀರು, ನಮ್ಮ ಮಣ್ಣು ಹಾಗೂ ನಮ್ಮ ಕಾಲುವೆ ಎಂಬ ಭಾವನೆ ಮೂಡಬೇಕು. ರಾಜ್ಯ ಸರ್ಕಾರವು ನೀರು ಬಳಕೆದಾರರ ಸಹಕಾರ ಸಂಘಗಳ ಬಲವರ್ಧನೆಗೆ ಹೆಚ್ಚಿನ ಅನುದಾನ ನೀಡುವ ಭರವಸೆ ನೀಡಿದೆ. ಸಂಘಗಳು ನೀರು ನಿರ್ವಹಣೆಯಲ್ಲಿ ಹೆಚ್ಚು ಸಕ್ರಿಯವಾಗಿ ಪಾಲ್ಗೊಳ್ಳುವುದರಿಂದ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದ ರೈತರಿಗೂ ನೀರು ತಲುಪಿಸಲು ಸಾಧ್ಯವಾಗುತ್ತಿದೆ ಎಂದು ಹೇಳಿದರು.ಇದೇ ವೇಳೆ ಪ್ರಗತಿಪರ ರೈತರಾದ ಭದ್ರಾ ಯೋಜನೆಯಿಂದ ಮಲ್ಲಿಕಾರ್ಜುನಪ್ಪ ಬಿ.ಜಿ., ಕಾವೇರಿ ಯೋಜನೆಯಿಂದ ಕೆ.ಜಿ. ಗೋಪಾಲಯ್ಯ, ಘಟಪ್ರಭಾ ಯೋಜನೆಯಿಂದ ಮಂಜುನಾಥ ಉಪ್ಪಲದಿನ್ನಿ, ಕೃಷ್ಣಾ ಯೋಜನೆಯಿಂದ ಭೀಮನಗೌಡ ಮುದ್ದುಗೌಡ ಪಾಟೀಲ, ತುಂಗಭದ್ರಾ ಯೋಜನೆಯಿಂದ ಎಚ್. ವೀರೇಶಗೌಡ, ಕಲಬುರಗಿ ಯೋಜನೆಯಿಂದ ರೇವಣಸಿದ್ದಪ್ಪ ಅವರನ್ನು ಸನ್ಮಾನಿಸಲಾಯಿತು.
ಇಂದುಧರ ಹಿರೇಮಠ ನಿರೂಪಿಸಿದರು. ಯಲ್ಲಪ್ಪ ಪೂಜಾರಿ, ಪ್ರದೀಪ ದೇವರಮನಿ, ಸುಧೀಂದ್ರ ಕೆ. ಎಸ್. ವಂದಿಸಿದರು.