ಜಾತ್ರೆಗಳಲ್ಲಿ ಜಾತಿಯತೆ ಬಾರದಿರಲಿ

| Published : Oct 16 2025, 02:01 AM IST

ಸಾರಾಂಶ

ಅನ್ನದಾನೀಶ್ವರ ಮಹಾಸ್ವಾಮಿಗಳು ತಮ್ಮ ಅಗಾದ ಶಕ್ತಿಯಿಂದ ಜನರ ಬವಣೆ ಕಳೆಯುತ್ತಾ ಬದುಕನ್ನು ಪಾವನ ಮಾಡಿದ್ದಾರೆ

ಕುಕನೂರು: ಜಾತ್ರೆಗಳು ಜಾತಿಯಿಂದ ಮುಕ್ತವಾಗಿ ಸರ್ವರನ್ನು ಪ್ರೀತಿಸುವ ಜಾತ್ರೆ ಆಗಬೇಕು ಎಂದು ಶ್ರೀ ಮಹಾದೇವ ಸ್ವಾಮೀಜಿ ಹೇಳಿದರು.

ತಾಲೂಕಿನ ತಳಕಲ್ಲ ಗ್ರಾಮದ ಮುಂಡರಗಿ ಅನ್ನದಾನೀಶ್ವರ ಶಾಖಾಮಠದಲ್ಲಿ ಜರುಗಿದ ಶ್ರೀಮಠದ ಜಾತ್ರಾಮಹೋತ್ಸವದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ಜಾತ್ರೆಗಳು ಅಂದರೆ ಸರ್ವರೂ ಒಂದುಗೂಡುವ ಸಂಭ್ರಮ. ಅಂತಹ ಜಾತ್ರೆಯಲ್ಲಿ ಜಾತಿ ಎಂಬ ವಿಷ ಬೀಜ ಮೊಳಕೆಯೊಡೆಯಬಾರದು. ತಳಕಲ್ಲ ಗ್ರಾಮದ ಜಾತ್ರಾ ಮಹೋತ್ಸವ ಅದ್ದೂರಿಯಿಂದ ಎಲ್ಲರೂ ಆಚರಿಸಬೇಕು ಎಂದರು.

ತಳಕಲ್ಲ ಗ್ರಾಮ ಯಾವುದೇ ಜಾತಿ,ಮತ ಪಂಥವೆನ್ನದೆ ಎಲ್ಲರೂ ಸಾಗುವ ಗ್ರಾಮ. ಇಲ್ಲಿನ ಜನರ ಒಗ್ಗಟ್ಟು ನಿಜಕ್ಕೂ ಮಾದರಿ ಎಂದರು.

ಮುಖಂಡ ಮಲ್ಲಪ್ಪ ಬಂಗಾರಿ ಮಾತನಾಡಿ, ಅನ್ನದಾನೀಶ್ವರ ಮಹಾಸ್ವಾಮಿಗಳು ತಮ್ಮ ಅಗಾದ ಶಕ್ತಿಯಿಂದ ಜನರ ಬವಣೆ ಕಳೆಯುತ್ತಾ ಬದುಕನ್ನು ಪಾವನ ಮಾಡಿದ್ದಾರೆ. ಅನ್ನದಾನೀಶ್ವರ ಪೂಜ್ಯರಲ್ಲಿ ಭಕ್ತಿಯಿಟ್ಟು ಸೇವೆ ಮಾಡಿದರೆ ಬದುಕು ಹಸನ ಎಂದರು.

ಮುಖಂಡ ಮುದಿಯಪ್ಪ ಯೋಗೆಮ್ಮನವರ ಮಾತನಾಡಿ, ಜಾತ್ರೆ ಎಂಬುದು ಬರೀ ಆಚರಣೆ ಅಲ್ಲ. ಅದೊಂದು ಬದುಕಿಗೆ ಸನ್ಮಾರ್ಗದ ಕ್ಷಣ. ದೇವರಲ್ಲಿ ಭಕ್ತಿ ಹಾಗೂ ಶ್ರದ್ಧೆ ಸಂಕೇತ ಎಂದರು.

ಮುಖಂಡ ಸೋಮಪ್ಪ ಖರ್ಜಗಿ ಮಾತನಾಡಿ, ನ.೧ ರಿಂದ ಶ್ರೀ ಶರಣಬಸವೇಶ್ವರರ ಪುರಾಣ ಪ್ರಾರಂಭವಾಗಿ ನ.೨೧ ರಂದು ಮಂಗಳಗೊಳ್ಳುವುದು. ಅಂದು ಸಂಜೆ ಅನ್ನದಾನೀಶ್ವರ ಲಘು ರಥೋತ್ಸವ ಜರುಗಲಿದೆ. ಜಾತ್ರೆ ನಿಮಿತ್ಯ ನಾನಾ ಧಾರ್ಮಿಕ ಕಾರ್ಯಕ್ರಮ ಜರುಗಲಿವೆ ಎಂದರು.

ಈ ಸಂದರ್ಭದಲ್ಲಿ ಮಲ್ಲಪ್ಪ ಗೋರಿ, ಪಕ್ಕಪ್ಪ ಮುರಿಗಿ, ಶಿವಪ್ಪ ಬ್ಯಾಳಿ, ಅಬ್ಬಸಲಿ, ಕಲ್ಲಯ್ಯ ತಿರುಗುಣೇಶ, ಶರಣಪ್ಪ, ಬಸಯ್ಯ ಚಂಡೂರು, ರಾಮಣ್ಣ ನಿಟ್ಟಲಿ, ಸುರೇಶ ನಿಟ್ಟಲಿ, ಗೋಣೇಪ್ಪ ವಾಲ್ಮಿಕಿ, ಮುಡಿಯಪ್ಪ, ವೀರಪ್ಪ ಕರ್ಜಗಿ, ಬಾಳಪ್ಪ ಮುಸ್ಲಿ, ಪರಸಪ್ಪ ಅಳವಂಡಿ ಇತರರು ಇದ್ದರು.