ಜನನ ಮತ್ತು ಮರಣ ನೋಂದಣಿಯನ್ನು ನಿಗದಿತ ದಿನಗಳಿಗಿಂತ ಹೆಚ್ಚು ಕಾಲ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಜನನ ಮತ್ತು ಮರಣ ನೋಂದಣಿಯನ್ನು ನಿಗದಿತ ದಿನಗಳಿಗಿಂತ ಹೆಚ್ಚು ಕಾಲ ವಿಳಂಬ ಮಾಡುತ್ತಿರುವ ಅಧಿಕಾರಿಗಳ ವಿರುದ್ದ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಸೂಚಿಸಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿ ಮಂಗಳವಾರ ಜಿಲ್ಲಾ ಮಟ್ಟದ ನಾಗರಿಕ ನೋಂದಣಿ ಪದ್ದತಿಯ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿ, ನೋಂದಣಿ ವಿಳಂಬ ಮಾಡುತ್ತಿರುವ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು, ಆರೋಗ್ಯ ಇಲಾಖೆ ಅಧಿಕಾರಿಗಳು ಮತ್ತು ನಗರ ಸ್ಥಳೀಯ ಸಂಸ್ಥೆಗಳ ಅಧಿಕಾರಿಗಳ ವಿವರವಾದ ವರದಿ ಸಲ್ಲಿಸುವಂತೆ ತಿಳಿಸಿದರು.

ಬದುಕಿರುವ ಪ್ರತಿಯೊಬ್ಬ ವ್ಯಕಿಗೆ ಜನನ ಪ್ರಮಾಣಪತ್ರ ಅಗತ್ಯವಾದ ದಾಖಲೆಯಾಗಿದೆ. ವ್ಯಕ್ತಿಯ ಮರಣದ ನಂತರ ಕುಟುಂಬದವರಿಗೆ ಮರಣ ಪ್ರಮಾಣಪತ್ರ ಉಪಯುಕ್ತ ದಾಖಲೆಯಾಗಿದ್ದು, ಜನನ ಮತ್ತು ಮರಣ ಪ್ರಮಾಣ ಪತ್ರಗಳು ಜನರಿಗೆ ಸಕಾಲದಲ್ಲಿ ಸಿಗಬೇಕು. ಈ ದಾಖಲೆಗಳು ಮತದಾರರ ಪಟ್ಟಿ ಪರಿಷ್ಕರಣೆ, ವಿಧವಾ ವೇತನ, ಸಂಧ್ಯಾ ಸುರಕ್ಷಾ ಮತ್ತು ಗೃಹಲಕ್ಷ್ಮಿ ಇನ್ನೂ ಅನೇಕ ಯೋಜನೆಗಳಿಗೆ ಬಹಳ ಮುಖ್ಯವಾಗಿರುವುದರಿಂದ ಈ ದಾಖಲೆಗಳನ್ನು ಶೀಘ್ರವಾಗಿ ನೀಡಬೇಕು. ಮರಣ ಹೊಂದಿದ ಫಲಾನುಭವಿಗಳಿಗೆ ಪಡಿತರ ಚೀಟಿ ರದ್ದಾಗಿರುವುದಿಲ್ಲ. ಹಾಗೂ ಗೃಹಲಕ್ಷ್ಮಿ ಹಣ ಅವರ ಖಾತೆಗೆ ಸಂದಾಯವಾಗುತ್ತಿದೆ. ಗ್ರಾಮ ಪಂಚಾಯಿತಿಯ ಪಿಡಿಒ, ಆರೋಗ್ಯಾಧಿಕಾರಿಯವರಿಂದ ಸರಿಯಾದ ಮಾಹಿತಿ ಪಡೆದುಕೊಳ್ಳುವಂತೆ ತಿಳಿಸಿದರು.

ಜನನ, ಮರಣ ನೋಂದಣಿಯಲ್ಲಿ ಜನನ, ಮರಣ ದಿನಾಂಕಗಳನ್ನು ಸರಿಯಾಗಿ ನಮೂದಿಸಬೇಕು. ವರದಿ ನಮೂನೆಗಳಲ್ಲಿನ ಎಲ್ಲ ಕಾಲಂಗಳನ್ನು ಸರಿಯಾಗಿ ಭರ್ತಿ ಮಾಡಿ ಮಾಹಿತಿದಾರರ ಹೆಸರು ಮತ್ತು ಅವರಿಂದ ಸಹಿ ಪಡೆಯುವುದು. ನೋಂದಣಿದಾರರು, ಉಪ ನೋಂದಣಿದಾರರ ಹೆಸರು, ಸಹಿ, ಮೊಹರು ಹಾಕುವುದು. ಇ-ಜನ್ಮ ತಂತ್ರಾಂಶದಲ್ಲಿ ಜನನ, ಮರಣ ನೋಂದಣಿಯ ನಂತರ ಸೃಜನೆಯಾಗುವ ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು ಎಂದು ಹೇಳಿದರು. ಜನನ ಮರಣ ನೋಂದಣಿ ನಂತರ ಹಾಗೂ ಅನುಮೋದನೆಯ ನಂತರ ಅರ್ಜಿದಾರರ ಮೊಬೈಲ್ ಸಂಖ್ಯೆಗೆ ಎಸ್‌ಎಂಎಸ್ ಕಳುಹಿಸುವ ಸೌಲಭ್ಯವಿರುವುದರಿಂದ, ಅರ್ಜಿದಾರರ ಸರಿಯಾದ ಮೊಬೈಲ್ ಸಂಖ್ಯೆಯನ್ನು ಪಡೆದು ಇ-ಜನ್ಮ ತಂತ್ರಾಂಶದಲ್ಲಿ ನಮೂದಿಸುವುದು. ನಿರ್ಜೀವ ಜನನಗಳನ್ನು ಕಡ್ಡಾಯವಾಗಿ ಇ-ಜನ್ಮ ತಂತ್ರಾಂಶದಲ್ಲಿ ನೋಂದಯಿಸಬೇಕು. ಹಾಗೂ ತಾಯಿಯ ಆಧಾರ್ ಕಾರ್ಡ್ ತೆಗೆದುಕೊಂಡು ಹೆಸರನ್ನು ಸರಿಯಾಗಿ ನಮೂದಿಸಬೇಕು. ಇಲ್ಲವಾದರೆ ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಜರುಗಿಸಲಾಗುವುದು ಎಂದರು.

ಬೆಳೆ ಸಮೀಕ್ಷೆಯಲ್ಲಿನ ತಪ್ಪುಗಳು:

ಬೆಳೆ ಸಮೀಕ್ಷೆಯ ಸಂದರ್ಭದಲ್ಲಿ ಕೆಲವು ಕಡೆ ತಪ್ಪು ಮಾಹಿತಿಯನ್ನು ಅಪ್‌ಲೋಡ್ ಮಾಡಿರುವುದು ಕಂಡುಬಂದಿದೆ. ಪಾಂಡವರಗೆರೆ, ಬಗ್ಗೇನಹಳ್ಳಿ ಮತ್ತು ಲಕ್ಷ್ಮೀಸಾಗರದಲ್ಲಿ ಜೋಳ, ಮೆಕ್ಕೆಜೋಳ ಇರುವ ಜಮೀನುಗಳಲ್ಲಿ ಅಡಿಕೆ ಎಂದು ತಪ್ಪು ಮಾಹಿತಿ ನಮೂದಿಸಲಾಗಿದೆ. ಈ ರೀತಿ ತಪ್ಪು ಮಾಹಿತಿ ನೀಡಿದ ಗ್ರಾಮ ಲೆಕ್ಕಾಧಿಕಾರಿ ಮತ್ತು ಸಂಬಂಧಪಟ್ಟ ಖಾಸಗಿ ನಿವಾಸಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾರಿ ನೀಲಾ, ತೋಟಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರಾದ ರಾಘವೇಂದ್ರ ಪ್ರಸಾದ್, ಡಿಎಚ್‌ಒ ಡಾ.ಷಣ್ಮುಖಪ್ಪ, ಜಿಲ್ಲಾ ಸರ್ಜನ್ ಡಾ.ನಾಗೇಂದ್ರಪ್ಪ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ರಾಜಾನಾಯ್ಕ ಹಾಜರಿದ್ದರು. ಕ್ಯಾಪ್ಷನ24ಕೆಡಿವಿಜಿ32: ದಾವಣಗೆರೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಅಧ್ಯಕ್ಷತೆಯಲ್ಲಿ ನಾಗರಿಕ ನೋಂದಣಿ ಪದ್ದತಿಯ ಸಮನ್ವಯ ಸಮಿತಿ ಸಭೆ ನಡೆಯಿತು.