ಪೊಲೀಸ್, ಹೋಂ ಗಾರ್ಡ್ಸ್ ನಡುವೆ ಭೇದಭಾವ ಬೇಡ

| Published : Dec 07 2024, 12:30 AM IST

ಸಾರಾಂಶ

ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ.ಎಸ್‌.ಡಿ.ಶರಣಪ್ಪ ಅಭಿಮತ

ಕನ್ನಡಪ್ರಭ ವಾರ್ತೆ ಕಲಬುರಗಿ

ನಾಡಿನಲ್ಲಿ ಆಂತರಿಕವಾಗಿ ಕಾನೂನು ಸುವ್ಯವಸ್ಥೆ, ಶಾಂತಿ ಕಾಪಾಡಲು ಖಾಕಿ ತೊಟ್ಟಿರುವ ಪೊಲೀಸ್ ಮತ್ತು ಹೋಂ ಗಾರ್ಡ್ಸ್ ನಡುವೆ ಭೇದಭಾವ ಇರಬಾರದು. ನಾವೆಲ್ಲರು ಜನ ಸೇವೆ ಮಾಡಲು‌ ಬಂದಿದ್ದೇವೆ ಎಂಬುದನ್ನು ಮರೆಯುವಂತಿಲ್ಲ‌ ಎಂದು ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ.ಎಸ್.ಡಿ.ಶರಣಪ್ಪ ಹೇಳಿದರು.

ಶುಕ್ರವಾರ ಕಲಬುರಗಿ‌ ನಗರದ ಗೃಹ ರಕ್ಷಕ ದಳ ಕಚೇರಿಯ ಕವಾಯತು ಮೈದಾನದಲ್ಲಿ ನಡೆದ ಅಖಿಲ ಭಾರತ ಗೃಹ ರಕ್ಷಕ ದಳ ದಿನಾಚರಣೆ-2024 ಕಾರ್ಯಕ್ರಮದಲ್ಲಿ ಗೃಹ ರಕ್ಷಕ‌ ದಳದ ಜಿಲ್ಲಾ ಬೋಧಕ ಹಣಮಂತ್ರಾಯ ಗೌಡ ಮತ್ತು ಸಹಾಯಕ ಪಿಎಲ್‌ಸಿ ಲಕ್ಷ್ಮಣ ಮಾಸ್ತರ ನೇತೃತ್ವದ ಹೋಮ್ ಗಾರ್ಡ್ ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿ ಮಾತನಾಡಿದ ಅವರು, ಕರ್ನಾಟಕ ರಾಜ್ಯ ಪೊಲೀಸ್‌ಗೆ ಹೆಗಲಿಗೆ ಹೆಗಲು ಕೊಟ್ಟು ಕಾರ್ಯನಿರ್ವಹಿಸುತ್ತಿರುವ ಗೃಹ ರಕ್ಷಕರ ಸೇವೆ ಅನನ್ಯವಾಗಿದೆ ಎಂದರು.

ಪೊಲೀಸರಿಗೆ ಹೋಲಿಸಿದರೆ ಹೋಂ ಗಾರ್ಡ್ಸ್‌ಗಳಿಗೆ ಯಾವುದೇ ಸೌಲಭ್ಯ ಇಲ್ಲ. ಆದರೂ ನಿಮ್ಮ ನಿಸ್ವಾರ್ಥ ಸೇವೆ‌ ಮೆಚ್ಚುವಂತದ್ದು. ಇತ್ತೀಚೆಗೆ ಈದ್ ಮಿಲಾದ್‌, ಗಣೇಶ ಚತುರ್ಥಿಯ ಪೊಲೀಸ್ ಬಂದೋ ಬಸ್ತ್ ಕಾರ್ಯದಲ್ಲಿ ಹಬ್ಬ ಮುಗಿಯುವವರೆಗೂ ತಮಗೆ ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದು ತಮಗೆ ಸಂತೋಷ ತಂದಿದೆ ಎಂದರು.

ಇದೀಗ‌ ಜಿಲ್ಲಾ ಗೃಹ ರಕ್ಷಕರ ಸಂಖ್ಯಾ ಬಲ‌ 1,000 ದಿಂದ 1,200ಕ್ಕೆ ಹೆಚ್ವಳವಾಗಿದ್ದರಿಂದ ಅವಶ್ಯಕನ್ನುಗುಣವಾಗಿ ನಿಮ್ಮ ಸೇವೆ ಕಲಬುರಗಿ ನಗರ ಪೊಲೀಸ್ ಬಳಸಿಕೊಳ್ಳಲಿದೆ ಎಂದು ತಿಳಿಸಿದರು.

ಕಲಬುರಗಿ ಗೃಹ ರಕ್ಷಕ ದಳದ ಜಿಲ್ಲಾ ಸಮಾದೇಷ್ಠ ಸಂತೋಷ ಪಾಟೀಲ ವರದಿ ಮಾತನಾಡಿ, ಹಬ್ಬ-ಹರಿ ದಿನ, ಚುನಾವಣೆ ಹಾಗೂ ಇನ್ನಿತರ ಸಂದರ್ಭಗಳಲ್ಲಿ ಗೃಹ ರಕ್ಷಕರ ನಿಸ್ವಾರ್ಥ ಸೇವೆ ಶ್ಲಾಘನೀಯವಾಗಿದೆ. 1946ರಲ್ಲಿ ಬಾಂಬೆ ಕರ್ನಾಟಕದಲ್ಲಿ ಸ್ಥಾಪಿತವಾದ ಗೃಹ ರಕ್ಷಕ ದಳ ಸಂಸ್ಥೆ ತದನಂತರ ರಾಜ್ಯದಾದ್ಯಂತ 1963 ಕಾಯ್ದೆ ಮೂಲಕ ಅಸ್ತಿತ್ವಕ್ಕೆ ಬಂದು ಕಲಬುರಗಿಯಲ್ಲಿ 1967 ರಿಂದಲೆ ಕಾರ್ಯರಂಭ ಮಾಡಿದೆ ಎಂದು ತಿಳಿಸಿದರು.

ಪ್ರಸ್ತುತ ಕಲಬುರಗಿ ಜಿಲ್ಲೆಗೆ ಮಂಜೂರಾಗಿರುವ 1,000 ಸಂಖ್ಯಾ ಬಲದಲ್ಲಿ 993 ಜನ ಗೃರಕ್ಷಕರು ಕಾರ್ಯನಿರ್ವಹಿಸುತ್ತಿದ್ದು, ಸರದಿಯಂತೆ ಪೊಲೀಸ್ ಠಾಣೆ, ಕಾರಾಗೃಹ, ಪ್ರವಾಸೋದ್ಯಮ ಇಲಾಖೆ, ದತ್ತಾತ್ರೇಯ ದೇವಸ್ಥಾನ, ಆರ್‌ಟಿಒ ಕಚೇರಿಗೆ ಸೇವೆ ನೀಡಲಾಗುತ್ತಿದೆ. ದಿನಕ್ಕೆ 500 ರು.ಗಳಂತೆ ಗೌರವ ಸಂಭಾವನೆ ಬ್ಯಾಂಕ್ ಖಾತೆ ಮೂಲಕ ಪಾರದರ್ಶಕವಾಗಿ ಪಾವತಿಸಲಾಗುತ್ತಿದೆ‌ ಎಂದು ಸಂಸ್ಥೆಯ ವರದಿ ವಾ‌ಚನವನ್ನು ಅಂಕಿ‌‌ ಸಂಖ್ಯೆ ಸಮೇತ‌ ಸಂತೋಷ ಪಾಟೀಲ ವಿವರಿಸಿದರು.

ಕಾರ್ಯಕ್ರಮಕ್ಕೂ ಮುನ್ನ ಕಳೆದ ವರ್ಷದಲ್ಲಿ ನಿಧನ ಹೊಂದಿದ ಗೃಹ ರಕ್ಷಕರಾದ ಚಂದ್ರಕಾಂತ ಖಜ್ಜೆ, ಪುರುಷೋತ್ತಮ ಎಚ್, ಖಾಸೀಮ್ ಅಲಿ ಹಾಗೂ ಮಹೇಶ್‌ಕುಮಾರ ಅವರ ಆತ್ಮಕ್ಕೆ ಶಾಂತಿ ಕೋರಿ ಒಂದು ನಿಮಷ‌ ಮೌನಾಚರಣೆ ಮಾಡಲಾಯಿತು. ಪಿ‌ಎಲ್‌ಸಿ ಚಂದ್ರಕಾಂತ್‌ ಹಾವನೂರ ಅವರು ಸ್ವಾಗತಿಸಿ ಪ್ರತಿಜ್ಞೆ ವಿಧಿ ಬೋಧಿಸಿದರು. ಪಿಎಲ್‌ಸಿಗಳಾದ ಬಸವರಾಜ ಗೌಡ, ಮಲ್ಲಯ್ಯ, ಭೀಮಾಶಂಕರ‌ ಕುಲಕರ್ಣಿ, ಎಸ್‌ಪಿಎಲ್‌ಸಿ ಲಿಂಗಣ್ಣ ಪೂಜಾರಿ, ಸಾರ್ಜಂಟ್ ಮಸ್ತಾನ ಅಲಿ ಸೇರಿ ನೂರಾರು ಸಂಖ್ಯೆಯಲ್ಲಿ ಗೃಹ ರಕ್ಷಕರು ಭಾಗವಹಿಸಿದ್ದರು.

ಆರೋಗ್ಯದ ಬಗ್ಗೆ ಗಮನ ಕೊಡಿ:

ಕಳೆದ ವರ್ಷದಲ್ಲಿ ನಾಲ್ಕು ಜನ ಹೋಂ ಗಾರ್ಡ್‌ಗಳು ನಿಧನ ಹೊಂದಿರುವ ಬಗ್ಗೆ ತಮ್ಮ ಭಾಷಣದಲ್ಲಿ ಪ್ರಸ್ತಾಪಿಸಿದ ಡಾ.ಎಸ್.ಡಿ.ಶರಣಪ್ಪ ಅವರು ಗೃಹ ರಕ್ಷಕ ಸಿಬ್ಬಂದಿ ಪ್ರತಿ ದಿನ ಒಂದು ಗಂಟೆಯಾದರು ವ್ಯಾಯಾಮಕ್ಕೆ ಸಮಯ ನೀಡುವ ಮೂಲಕ ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ನಿಮ್ಮ‌ ಕಟುಂಬ, ನೀವು ಸೇವೆ ಸಲ್ಲಿಸುವ ಇಲಾಖೆಗೆ ನಿಮ್ಮ ಸದೃಢ ಆರೋಗ್ಯ ಅವಶ್ಯಕತೆ ಇದೆ ಎಂಬುದನ್ನು ಮರೆಯದಿರಿ ಎಂದು ಹೇಳಿದರು.

ನಿವೃತ್ತ ಗೃಹ ರಕ್ಷಕರಿಗೆ ಸನ್ಮಾನ:

ಇದೇ‌ ಸಂದರ್ಭದಲ್ಲಿ ಗೃಹ ರಕ್ಷಕ ದಳದ ವಿವಿಧ ಹುದ್ದೆಯಲ್ಲಿ 35 ವರ್ಷಕ್ಕೂ ಹೆಚ್ಚಿನ‌ ಸೇವೆ ಮಾಡಿ ನಿವೃತ್ತಿ ಹೊಂದಿದ ವಿಜಯಕುಮಾರ ಎಂ.ಎಸ್, ಅಂತೋನಿ ಜೋಸೆಫ್, ಅಬ್ದುಲ್ ಸಲೀಮ್, ರಾಘವೇಂದ್ರ ಜಿ.ಕೆ, ನಾಮದೇವ ಎ.ಎನ್, ಅರುಣಕುಮಾರ ಎನ್, ಸುನೀಲ ದತ್, ಸೂರ್ಯಕಾಂತ, ಶರಣಪ್ಪ ಎಲ್.ಜಿ ಹಾಗೂ ಮೆಹಬೂಬ್ ಅವರಿಗೆ ಪೊಲೀಸ್ ಕಮೀಷನರ್ ಡಾ.ಎಸ್.ಡಿ.ಶರಣಪ್ಪ ಸತ್ಕರಿಸಿ ಅಭಿನಂದಿಸಿದರು.