ಹಾನಗಲ್ಲ: ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಮೂಲಕ ಏತ ನೀರಾವರಿ, ಬೆಳೆವಿಮೆ, ಬರ ನಿರ್ವಹಣೆಯಲ್ಲಿ ಯಾವುದೇ ಅಧಿಕಾರಿಗಳು ಲೋಪವೆಸಗದಂತೆ ಕಟ್ಟಪ್ಪಣೆ ಮಾಡಿದ ಶಾಸಕ ಶ್ರೀನಿವಾಸ ಮಾನೆ ಕಾಲ ಕಾಲಕ್ಕೆ ವರದಿ ಸಲ್ಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಗುರುವಾರ ಸಂಜೆ ಹಾನಗಲ್ಲಿನ ತಹಸೀಲ್ದಾರ್ ಕಚೇರಿ ಸಭಾಂಗಣದಲ್ಲಿ ಕಂದಾಯ, ತೋಟಗಾರಿಕೆ, ಕೃಷಿ, ಏತ ನೀರಾವರಿ, ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ರೈತ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ರೈತ ಸಮುದಾಯಕ್ಕೆ ಯಾವುದೇ ಅನಾನುಕೂಲ ಆಗದಂತೆ ಏತ ನೀರಾವರಿಯಿಂದ ಕೆರೆ ತುಂಬಿಸುವ ಕಾರ್ಯ ನಡೆಯಬೇಕು. ಕೃಷಿ ತೋಟಗಾರಿಕೆ ಇಲಾಖೆಗಳಲ್ಲಿ ರೈತ ಸೌಲಭ್ಯಗಳಿಗೆ ವಿಳಂಬ ಸಲ್ಲದು ಎಂದು ಶಾಸಕ ಶ್ರಿನಿವಾಸ ಮಾನೆ ಅಧಿಕಾರಿಗಳಿಗೆ ಸೂಚಿಸಿದರು.ಶಾಸಕರು ವಿವಿಧ ಇಲಾಖೆಯ ಅಧಿಕಾರಿಗಳು ರೈತರ ನಡುವೆ ಬಸಾಪುರ ಏತ ನೀರಾವರಿ ಯೋಜನೆಗೆ ಸಂಬಂಧಿಸಿದ ವಿದ್ಯುತ್ ಟಿಸಿಯಲ್ಲಿನ ಇಂಧನ, ತಾಮ್ರದ ತಂತಿ ಕಳ್ಳತನ ರೈತ ಸಮುದಾಯಕ್ಕೆ ಮಾಡಿದ ಅನ್ಯಾಯ. ಇಂತಹ ಪ್ರಕರಣಗಳಲ್ಲಿ ಪೊಲೀಸ್ ದೂರು ಸಲ್ಲಿಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು. ಏತ ನೀರಾವರಿ ಯೋಜನೆ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಸಬೇಕು. ವಾಚ್‌ಮನ್ ನೇಮಿಸಬೇಕು. ಕಬ್ಬು ಬೆಳೆಗೂ ವಿಮಾ ಸೌಲಭ್ಯ ಕಲ್ಪಿಸಬೇಕು. ಹಾನಗಲ್ಲಿನಲ್ಲಿ ಅಡಕೆ ಮಾರುಕಟ್ಟೆ ತೆರೆಯಬೇಕು. ಕೆರೆಗಳ ಹದ್ದುಬಸ್ತ ಆಗಬೇಕು ಎಂಬ ಚರ್ಚೆಗಳಾದವು.
ಕೃಷಿ ಇಲಾಖೆಯಲ್ಲಿ ಸೆಣಬು, ಡಯಾಂಚ ಬಿತ್ತನೆ ಬೀಜ ಲಭ್ಯವಾಗಬೇಕು. ಏತ ನೀರಾವರಿಗೆ ಬಿಟ್ಟು ಹೋದ ಕೆರೆಗಳನ್ನು ಜೋಡಿಸಬೇಕು. ಇನ್ನೂ ಶುಂಠಿ ಹಸಿ ಮೆಣಸಿನಕಾಯಿ, ಮಾವು, ಅಡಕೆ ಬೆಳೆ ವಿಮೆ ಬಂದಿಲ್ಲ, ಬಡ್ಡಿ ಸಮೇತ ಬೆಳೆವಿಮೆ ನೀಡಬೇಕು. ತಾಲೂಕಿನ ಮಳೆ ಮಾಪನ ಕೇಂದ್ರಗಳ ದುರಸ್ತಿ ಆಗಬೇಕು. ಕೆರೆಗಳನ್ನು ಹೂಳೆತ್ತಬೇಕು. ಬಮ್ಮನಹಳ್ಳಿ ಬೆಳಗಾಲಪೇಟೆ ವಿದ್ಯುತ್ ಗ್ರಿಡ್‌ಗಳ ಕಾಮಗಾರಿ ಕೂಡಲೇ ಆರಂಭವಾಗಬೇಕು ಎಂಬ ಬೇಡಿಕೆಗಳನ್ನು ರೈತ ಮುಖಂಡರು ಸಲ್ಲಿಸಿದರು.ಕಳ್ಳತನ: ಬಸಾಪುರ ಏತ ನೀರಾವರಿ ಯೋಜನೆಗೆ ವಿದ್ಯುತ್ ವಿತರಣೆಯ ಟಿಸಿಯಲ್ಲಿನ ಇಂಧನ, ತಾಮ್ರದ ತಂತಿ ಕಳ್ಳತನ ಮಾಡಿದ ಕಳ್ಳರನ್ನು ಶೋಧಿಸಿ ತಕ್ಕ ಕಾನೂನು ಕ್ರಮ ಕೈಗೊಳ್ಳಬೇಕು. ರೈತರಿಗೆ ಸಂಬಂಧಿಸಿದ ಇಂತಹ ಕಳ್ಳತನಗಳನ್ನು ಮುಚ್ಚಿ ಹಾಕಿದರೆ ಅದೊಂದು ದೊಡ್ಡ ಜಾಲವಾಗಿಯೇ ಹೊರಹೊಮ್ಮುತ್ತದೆ. ಬಿಗಿ ಕಾನೂನು ಕ್ರಮ ಕೈಗೊಂಡರೆ ಇಂತಹ ಘಟನೆಗಳು ಮರುಕಳಿಸುವುದಿಲ್ಲ. ಕಳ್ಳತನದಿಂದಾಗಿ ಲಕ್ಷಾಂತರ ರು. ನಷ್ಟದ ಜೊತೆಗೆ ನದಿಯಲ್ಲಿ ನೀರಿರುವಾಗ ಕೆರೆಗಳಿಗೆ ನೀರು ಹರಿಸುವ ಕಾರ್ಯ ಸ್ಥಗಿತವಾದುದು ದುರುಂತ. ಧರ್ಮಾ ನದಿ ಬ್ಯಾರೇಜುಗಳ ಗೇಟ್‌ಗಳು ಕಳ್ಳತನವಾದರೂ ನೀರಾವರಿ ಇಲಾಖೆ ಯಾರ ಮೇಲು ಕ್ರಮ ಕೈಗೊಳ್ಳದಿರುವುದು ಕೂಡ ಕಳ್ಳತನಕ್ಕೆ ಕುಮ್ಮಕ್ಕು ನೀಡಿದಂತಿದೆ ಎಂದು ರೈತ ಮುಖಂಡರು ಕಿಡಿಕಾರಿದರು.
ರೈತ ಸಂಘದ ಅಧ್ಯಕ್ಷರುಗಳಾದ ಮರಿಗೌಡ ಪಾಟೀಲ, ಎಂ.ಎಸ್. ಪಾಟೀಲ, ಚನ್ನಬಸನಗೌಡ ಪಾಟೀಲ, ಜಿಲ್ಲಾಧ್ಯಕ್ಷ ಭುವನೇಶ್ವರ ಶಿಡ್ಲಾಪೂರ, ಉಪಾಧ್ಯಕ್ಷ ಅಡಿವೆಪ್ಪ ಆಲದಕಟ್ಟಿ, ಬಸವಂತಪ್ಪ ಮೆಳ್ಳಳ್ಳಿ, ರುದ್ರಪ್ಪ ಹಣ್ಣಿ, ಅಜ್ಜನಗೌಡ ಕರೆಗೌಡರ, ಷಣ್ಮುಖ ಅಂದಲಗಿ, ಪುಟ್ಟಪ್ಪ ನರೆಗಲ್ಲ, ಟಾಕನಗೌಡ ಪಾಟೀಲ ಸಭೆಯಲ್ಲಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.
ತಾಲೂಕು ತಹಸೀಲ್ದಾರ ವಿಠಲ್ ಚೌಗುಲಾ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಜಗದೀಶ ಕಮ್ಮಾರ, ವಿವಿಧ ಇಲಾಖೆಯ ಅಧಿಕಾರಿಗಳಾದ ಸಿ.ಟಿ.ಸುರೇಶ, ಸಂಗಮೇಶ ಹಕ್ಲಪ್ಪನವರ, ಜಿ.ಆರ್. ವೀರಭದ್ರಸ್ವಾಮಿ, ಮೃತ್ಯುಂಜಯ ಹಿರೇಮಠ, ರವಿಂದ್ರ ಯಲಿಗಾರ, ಗಿರೀಶ, ಎಲ್.ಜಿ. ರಾಕೇಶ ಮೊದಲಾದವರು ಇದ್ದರು.