ಕನ್ನಡಪ್ರಭ ವಾರ್ತೆ, ಚಿಕ್ಕಬಳ್ಳಾಪುರ:

ಜಿಲ್ಲೆಯ ಯಾವುದೇ ಅರ್ಹ ನಾಗರಿಕ ಮತದಾರರ ಪಟ್ಟಿಯಿಂದ ಬಿಟ್ಟು ಹೋಗಿ ಮತದಾನದಿಂದ ವಂಚಿತರಾಗಬಾರದು ಹಾಗೂ ಯಾವುದೇ ಒಬ್ಬ ಅನಧಿಕೃತ ವ್ಯಕ್ತಿ ಅಥವಾ ಅನರ್ಹ ಮತದಾರ ಪಟ್ಟಿಯಲ್ಲಿ ಇರಬಾರದು ಎಂಬುದು ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ-2026 (ಎಸ್ಐಆರ್) ರ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಪ್ರಭು ತಿಳಿಸಿದರು.

ಗುರುವಾರ ನಡೆದ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ-2026 (ಎಸ್ಐಆರ್) ಕುರಿತು ಸುದ್ದಿಗಾರರೊಂದಿಗೆ ಮಾತನಾಡಿ, ಮತದಾರರ ಪಟ್ಟಿಯಲ್ಲಿ ಯಾವುದೇ ಅರ್ಹ ನಾಗರಿಕರು ಬಿಟ್ಟು ಹೋಗಬಾರದು ಮತ್ತು ಯಾವುದೇ ಅನರ್ಹ ವ್ಯಕ್ತಿಗಳನ್ನು ಸೇರ್ಪಡೆ ಮಾಡಬಾರದು ಎನ್ನುವ ನಿಟ್ಟಿನಲ್ಲಿ ಚುನಾವಣಾ ಆಯೋಗ ನೀಡಿರುವ ಮಾನದಂಡಗಳಂತೆ ಜಿಲ್ಲೆಯಲ್ಲಿ ಅಗತ್ಯ ಕ್ರಮ ವಹಿಸಲಾಗಿದೆ. ಪಟ್ಟಿ ಪರಿಷ್ಕರಣೆಯ ಪ್ರಕ್ರಿಯೆಯ ಭಾಗವಾಗಿ ಸಿದ್ಧತೆಗಳ ಕಾರ್ಯ, ತರಬೇತಿ, ಮುದ್ರಣ ಕಾರ್ಯ, ಮತಗಟ್ಟೆ ಅಧಿಕಾರಿಗಳಿಂದ ಮನೆ ಮನೆ ಭೇಟಿ, ಮತಗಟ್ಟೆಗಳ ಪುನರ್ ವಿಂಗಡಣೆ, ಆಕ್ಷೇಪಣೆ ಸ್ವೀಕೃತಿ, ಆಕ್ಷೇಪಣೆ ವಿಲೇವಾರಿ, ಕರಡು ಮತದಾರರ ಪಟ್ಟಿ ಪ್ರಕಟಣೆಯ ಕಾರ್ಯಗಳಿಗೆ ಆರಂಭವಾಗಿ ಅಕ್ಟೋಬರ್ 7 ರ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳ ಬಗ್ಗೆ ದಿನಾಂಕವಾರು ವಿವರವನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಮಾಧ್ಯಮ ಪ್ರತಿನಿಧಿಗಳಿಗೆ ತಿಳಿಸುವ ಸಂಬಂಧ ಕಾರ್ಯಾಗಾರ ಹಮ್ಮಿಕೊಂಡು ಮಾಹಿತಿ ನೀಡಲಾಗಿದೆ. ಮುಂದಿನ ಎಲ್ಲ ಪ್ರಕ್ರಿಯೆಗಳ ಮಾಹಿತಿಯನ್ನು ಕಾಲೋಚಿತವಾಗಿ ತಿಳಿಸಿಕೊಡಲಾಗುತ್ತದೆ. ಜಿಲ್ಲಾಡಳಿತದ ಈ ಕಾರ್ಯಕ್ಕೆ ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಬೂತ್ ಮಟ್ಟದ ಏಜೆಂಟರು, ಸಾರ್ವಜನಿಕರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಮತಗಟ್ಟೆ ಅಧಿಕಾರಿಗಳು ಈ ತಿಂಗಳ 30 ರಿಂದ ಜುಲೈ-29 ರವರೆಗೆ ಮತದಾರರ ಮನೆ ಮನೆಗಳಿಗೆ ಭೇಟಿ ಮಾಡಿ ಜಿಲ್ಲೆಯ 10,69,693 ಮತದಾರರಿಗೂ ಗಣತಿ ನಮೂನೆಯನ್ನು ದ್ವಿಪ್ರತಿಯಲ್ಲಿ ವಿತರಣೆ ಮಾಡುವುದು ಹಾಗೂ ಭರ್ತಿ ಮಾಡಿದ ಗಣತಿ ನಮೂನೆಗಳನ್ನು ಸಹ ಸ್ವೀಕೃತಿ ಮಾಡಲಿದ್ದಾರೆ. ಮತದಾರರು ಗಣತಿ ನಮೂನೆಯಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸದೇ ಇದ್ದಲ್ಲಿ ಕರಡು ಮತದಾರರ ಪಟ್ಟಿಯಲ್ಲಿ ಮತದಾರರ ಹೆಸರು ನಮೂದಾಗುವುದಿಲ್ಲ. ಆದ್ದರಿಂದ ಜಿಲ್ಲೆಯ ಎಲ್ಲ ನಾಗರಿಕರು ಮತಗಟ್ಟೆ ಅಧಿಕಾರಿಗಳು ನೀಡುವ ಈ ನಮೂನೆಯನ್ನು ಭರ್ತಿ ಮಾಡಿ ಹಿಂತಿರುಗಿಸುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದರು.ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್. ಭಾಸ್ಕರ್, ಉಪವಿಭಾಗಾಧಿಕಾರಿ ಡಿ.ಹೆಚ್. ಅಶ್ವಿನ್, ಕಾಂಗ್ರೆಸ್ ಪ್ರತಿನಿಧಿ, ಮಧುಸೂದನ್, ಭಾರತೀಯ ಜನತಾ ಪಕ್ಷದ ಪ್ರತಿನಿಧಿ ಲಕ್ಷ್ಮೀನಾರಾಯಣಗುಪ್ತ, ಸಿಪಿಐಎಂ. ಪಕ್ಷದ ಪ್ರತಿನಿಧಿ ಮುನಿಕೃಷ್ಣಪ್ಪ ಸೇರಿ ಎಲ್ಲ ತಾಲೂಕುಗಳ ತಹಸೀಲ್ದಾರರು, ನಗರಾಡಳಿತ ಸಂಸ್ಥೆಗಳ ಪೌರಾಯುಕ್ತರು, ಮುಖ್ಯಾಧಿಕಾರಿಗಳು ಇದ್ದರು. ಸಿಕೆಬಿ-2 ... ಜಿಲ್ಲಾಧಿಕಾರಿ ಜಿ.ಪ್ರಭು ಅವರು ಎಸ್ಐಆರ್ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದರು.