ಸಾರಾಂಶ
ಕುಪ್ಪೆ ಮಹದೇವಸ್ವಾಮಿ
ಕೆ.ಆರ್. ನಗರ : ಪಟ್ಟಣದ ಪುರಸಭೆಯ ಎರಡನೇ ಅವಧಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರ ಮೀಸಲಾತಿ ನಿಗದಿ ಮಾಡಿದ್ದು ಅಧ್ಯಕ್ಷ ಸ್ಥಾನ ಪ. ಪಂಗಡ ಮಹಿಳೆ ಮತ್ತು ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಗೊತ್ತುಪಡಿಸಲಾಗಿದೆ.
ಪ್ರಸ್ತುತ ಕೆ.ಆರ್. ನಗರ ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದ್ದು, ಸಂಖ್ಯಾ ಬಲದ ಆಧಾರದ ಮೇಲೆ ಮತ್ತೆ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಆ ಪಕ್ಷದ ಪಾಲಾಗುವುದು ಖಚಿತವಾಗಿದೆ.
23 ಸದಸ್ಯ ಬಲದ ಪುರಸಭೆಯಲ್ಲಿ ಕಾಂಗ್ರೆಸ್ - 14, ಜೆಡಿಎಸ್ - 8 ಮತ್ತು ಬಿಜೆಪಿಯ ಓರ್ವ ಸದಸ್ಯರಿದ್ದು, ಕಳೆದ 15 ತಿಂಗಳಿನಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನ ಖಾಲಿ ಇದ್ದು, ಹುಣಸೂರು ಉಪವಿಭಾಗಾಧಿಕಾರಿ ಆಡಳಿತಾಧಿಕಾರಿಯಾಗಿದ್ದಾರೆ.
ಸರ್ಕಾರ ಮೀಸಲಾತಿ ಪ್ರಕಟ ಮಾಡಿದ್ದರು ಚುನಾವಣಾ ದಿನಾಂಕ ನಿಗದಿ ಮಾಡಲು ಆದೇಶ ಮಾಡದಿರುವುದರಿಂದ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳ ಚುನಾವಣೆ ಮತ್ತಷ್ಟು ವಿಳಂಬವಾಗುವ ಸಾಧ್ಯತೆ ಇದ್ದು, ಇದರಿಂದ ಅಭಿವೃದ್ದಿ ಕೆಲಸಗಳಿಗೆ ತೊಡಕಾಗಲಿದೆ.
ಪುರಸಭೆಯಲ್ಲಿ ಆಡಳಿತ ಮಂಡಳಿ ಅಸ್ತಿತ್ವದಲ್ಲಿ ಇಲ್ಲದಿರುವುದರಿಂದ ಪಟ್ಟಣದ ಅಭಿವೃದ್ದಿಗೆ ತೀವ್ರ ಹಿನ್ನಡೆಯಾಗಿದ್ದು, ಅಧಿಕಾರಿಗಳ ದರ್ಬಾರ್ ನಡೆಯುತ್ತಿರುವುದರಿಂದ ನಿರೀಕ್ಷಿತ ಪ್ರಮಾಣದಲ್ಲಿ ನಾಗರೀಕರ ಕೆಲಸಗಳು ನಡೆಯುತ್ತಿಲ್ಲ.
ಅಧ್ಯಕ್ಷ ಸ್ಥಾನಕ್ಕೆ ಮರು ಮೀಸಲಾತಿ ಮಾಡಬೇಕು
ಕೆ.ಆರ್. ನಗರ ಪುರಸಭೆಯ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ರಾಜ್ಯ ಸರ್ಕಾರ ಪ. ಪಂಗಡದ ಮಹಿಳಾ ಸ್ಥಾನಕ್ಕೆ ನಿಗದಿ ಮಾಡಿದ್ದು, ಆ ವರ್ಗಕ್ಕೆ ಸೇರಿದ ಸದಸ್ಯರು ಆಯ್ಕೆಯಾಗದಿರುವುದರಿಂದ ಮತ್ತೆ ಮರು ಮೀಸಲಾತಿ ಮಾಡಬೇಕಿದೆ.
ಕಾಂಗ್ರೆಸ್, ಜೆಡಿಎಸ್ ಮತ್ತು ಬಿಜೆಪಿಗಳಿಂದ ಪ. ಪಂಗಡದ ಮಹಿಳಾ ಸದಸ್ಯರು ಆಯ್ಕೆಯಾಗದಿದ್ದರು, ಆ ಸ್ಥಾನವನ್ನು ಅದೇ ವರ್ಗಕ್ಕೆ ನಿಗದಿಪಡಿಸಿರುವ ಸರ್ಕಾರದ ಕ್ರಮ ಎಲ್ಲರನ್ನು ಹುಬ್ಬೇರಿಸುವಂತೆ ಮಾಡಿದೆ.
ಅಧಿಕಾರಿಗಳ ಯಡವಟ್ಟಿನಿಂದ ಈ ಪ್ರಮಾದ ನಡೆದಿದ್ದು, ಈಗ ಮತ್ತೆ ಮರು ಮೀಸಲಾತಿ ಆದೇಶ ಹೊರಡಿಸಿದ ನಂತರ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಸಬೇಕಿದ್ದು, ಇದರಿಂದ ಕೆ.ಆರ್. ನಗರ ಪಟ್ಟಣದ ಪುರಸಭೆಗೆ ವರಿಷ್ಠರು ಆಯ್ಕೆಯಾಗುವುದು ವಿಳಂಬವಾಗಲಿದೆ.
ಸುಪ್ರಿಂಕೋರ್ಟ್ ಆದೇಶದಂತೆ ರಾಜ್ಯ ಸರ್ಕಾರ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಮೀಸಲಾತಿ ನಿಗದಿ ಮಾಡಿದ್ದು ಅದರಂತೆ ಕೆ.ಆರ್. ನಗರ ಪುರಸಭೆಯ ಅಧ್ಯಕ್ಷ ಸ್ಥಾನ ಪ. ಪಂಗಡದ ಮಹಿಳೆಗೆ ನಿಗದಿಯಾಗಿದೆ.
ಆದರೆ ಆ ವರ್ಗಕ್ಕೆ ಸೇರಿದ ಮಹಿಳಾ ಸದಸ್ಯರು ನಮ್ಮ ಪುರಸಭೆಯಲ್ಲಿ ಆಯ್ಕೆಯಾಗದಿರುವುದರಿಂದ ಈ ಸಂಬಂದ ನಾನು ಮುಖ್ಯಮಂತ್ರಿಗಳು ಮತ್ತು ಸಂಬಂಧಿತ ಸಚಿವರಿಗೆ ಪತ್ರ ಬರೆದು ಮರು ಮೀಸಲಾತಿ ನಿಗದಿ ಮಾಡಿಸಿ ಶೀಘ್ರವಾಗಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಗಳಿಗೆ ಚುನಾವಣೆ ನಡೆಯುವಂತೆ ನೋಡಿಕೊಳ್ಳುತ್ತೇನೆ.
- ಡಿ. ರವಿಶಂಕರ್, ಶಾಸಕರು. ಕೆ.ಆರ್. ನಗರ.