ಸಾರಾಂಶ
ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಗಣಂಗೂರು ಟೋಲ್ ನಲ್ಲಿ ಸಿಬ್ಬಂದಿ ಕಾರಿನ ಚಾಲಕನಿಂದ ಟೋಲ್ ಕೇಳಿದ ವಿಷಯಕ್ಕೆ ಕಾರಿನ ಸವಾರ ಸಿಬ್ಬಂದಿ ಮೇಲೆ ತರಾಟೆ ತೆಗೆದುಕೊಂಡು, ಹಣ ಶುಲ್ಕ ಹೆಚ್ಚಾಗಿದೆ ಎಂದು ಹೇಳಿ, ಹಣ ನೀಡಲು ನಿರಾಕರಿಸಿದ್ದಾನೆ.
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಟೋಲ್ ಕಟ್ಟುವ ವಿಚಾರವಾಗಿ ವಾಹನ ಸವಾರ ಹಾಗೂ ಟೋಲ್ ಸಿಬ್ಬಂದಿ ನಡುವೆ ಜಗಳ ನಡೆದು ಹೆದ್ದಾರಿಯಲ್ಲಿ ವಾಹನಗಳು ಸಾಲುಗಟ್ಟಿ ನಿಂತ ಪರಿಣಾಮ ಸವಾರರು ಪರದಾಡಿರುವ ಘಟನೆ ತಾಲೂಕಿನ ಗಣಂಗೂರು ಬಳಿ ನಡೆದಿದೆ.ಮೈಸೂರಿನಿಂದ ಬೆಂಗಳೂರಿಗೆ ತೆರಳುತ್ತಿದ್ದ ವೇಳೆ ಗಣಂಗೂರು ಟೋಲ್ ನಲ್ಲಿ ಸಿಬ್ಬಂದಿ ಕಾರಿನ ಚಾಲಕನಿಂದ ಟೋಲ್ ಕೇಳಿದ ವಿಷಯಕ್ಕೆ ಕಾರಿನ ಸವಾರ ಸಿಬ್ಬಂದಿ ಮೇಲೆ ತರಾಟೆ ತೆಗೆದುಕೊಂಡು, ಹಣ ಶುಲ್ಕ ಹೆಚ್ಚಾಗಿದೆ ಎಂದು ಹೇಳಿ, ಹಣ ನೀಡಲು ನಿರಾಕರಿಸಿದ್ದಾನೆ.
ಈ ವೇಳೆ ಸವಾರ ಹಾಗೂ ಟೋಲ್ ಸಿಬ್ಬಂದಿಯೊಂದಿಗೆ ಮಾತಿಗೆ ಮಾತು ನಡೆದಿದೆ. ಇದರಿಂದ ಹಣ ಕೊಡುವವರೆಗೆ ವಾಹನ ಬಿಡದೇ ಇದ್ದಾಗ ಹೈವೆಯಲ್ಲಿ ಸಾಲುಗಟ್ಟಿ ವಾಹನಗಳು ನಿಂತಿವೆ. ಇತರೆ ಸವಾರರಿಗೆ ಕಿರಿಕ್ ಮಾಡಿದ ವಾಹನ ಸವಾರ ಹಾಗೂ ಟೋಲ್ ಸಿಬ್ಬಂದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.ಭಾನುವಾರ ರಜೆ ಹಿನ್ನೆಲೆಯಲ್ಲಿ ಪ್ರವಾಸಿ ತಾಣಗಳ ವೀಕ್ಷಣೆಗೆ ಸಾವಿರಾರು ವಾಹನಗಳ ಮೂಲಕ ಪ್ರವಾಸಿಗರು ಆಗಮಿಸಿದ್ದರಿಂದ ವಾಹನಗಳ ದಟ್ಟಣೆ ಹೆಚ್ಚಾಗಿತ್ತು. ನಂತರ ಟೋಲ್ ಕಟ್ಟದೆ ಕಿರಿಕ್ ಮಾಡಿದ ಕಾರಿನ ಚಾಲಕನಿಗೂ ತರಾಟೆ ತೆಗೆದುಕೊಂಡ ಇತರೆ ವಾಹನ ಸವಾರರು, ಟೋಲ್ ಕಟ್ಟಿ ಹೋಗಲು ಸೂಚಿಸಿದ್ದಾರೆ.
ನಂತರ ಕಾರಿನ ಚಾಲಕ ಟೋಲ್ ಕಟ್ಟಿ ಮುಂದೆ ಸಾಗಿದ್ದಾನೆ. ಅಷ್ಟರಲ್ಲಿ ವಾಹನಗಳು ಹೈವೆಯಲ್ಲಿ ಸಾಲುಗಟ್ಟಿ ನಿಂತಿದ್ದರಿಂದ ವಾಹನಗಳು ಸರತಿ ಸಾಲಿನಲ್ಲಿ ನಿಂತು ತೊಂದರೆ ಎದುರಿಸುವಂತಾಯಿತು. ವಿಷಯ ತಿಳಿದು ಪೊಲೀಸರು ಸ್ಥಳಕ್ಕೆ ಆಗಮಿಸಿ ಘಟನೆಯನ್ನು ತಿಳಿಗೊಳಿಸಿದ್ದಾರೆ.ಶ್ರೀರಂಗಪಟ್ಟಣ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.