ಕನ್ನಡಪ್ರಭ ವಾರ್ತೆ ಬೆಂಗಳೂರು ಮಹಾಲೇಖಪಾಲರ ವರದಿಯಲ್ಲಿನ ಆಕ್ಷೇಪಣೆಗಳ ಹಿನ್ನೆಲೆಯಲ್ಲಿ ಗೃಹಲಕ್ಷ್ಮಿ ಯೋಜನೆಯಲ್ಲಿ ಅಕ್ರಮ ನಡೆದಿರುವ ಅನುದಾನ ಹಾಗೂ ಇದಕ್ಕೆ ಸಂಬಂಧಿಸಿದ ಮಾಧ್ಯಮಗಳ ವರದಿಗಳಿಗೆ ರಾಜ್ಯ ಸರ್ಕಾರ ವಿವರವಾದ ಸ್ಪಷ್ಟನೆ ನೀಡಿದ್ದು, ಯೋಜನೆಯಲ್ಲಿ ಯಾವುದೇ ಅಕ್ರಮ, ಲೋಪ ನಡೆದಿಲ್ಲ ಎಂದು ಹೇಳಿದೆ.
ಆದರೆ, ಮರಣ ಹೊಂದಿದ ಫಲಾನುಭವಿಗಳ ಮಾಹಿತಿ ಸಕಾಲದಲ್ಲಿ ಲಭ್ಯವಾಗದೇ ಇರುವುದರಿಂದ, ಮೃತ ಫಲಾನುಭವಿಗಳ ಖಾತೆಗೆ 115 ಕೋಟಿ ರು. ಸಹಾಯಧನ ಪಾವತಿಯಾಗಿರುತ್ತದೆ ಎಂದು ಸರ್ಕಾರ ಒಪ್ಪಿಕೊಂಡಿದೆ.ಗೃಹಲಕ್ಷ್ಮಿ ಯೋಜನೆಯ ಧನಸಹಾಯ ಪಾವತಿ ಪ್ರಕ್ರಿಯೆಯು ಆಧಾರ್ ಆಧಾರಿತ ಪಾವತಿ ವ್ಯವಸ್ಥೆ(ಎಬಿಪಿಎಸ್) ಆಗಿರುವುದರಿಂದ, ಯಾವುದೇ ಫಲಾನುಭವಿಗಳಿಗೆ ಒಂದು ತಿಂಗಳಲ್ಲಿ ಒಂದಕ್ಕಿಂತ ಹಚ್ಚು ಸಲ ಧನಸಹಾಯ ಪಾವತಿಯಾಗಿಲ್ಲ. ಇನ್ನು, ಅತ್ತೆ-ಸೊಸೆ, ಅಮ್ಮ-ಮಗಳು ಈ ರೀತಿ ಜಂಟಿ ಖಾತೆ ಹೊಂದಿರುವ ಪ್ರಕರಣಗಳಲ್ಲಿ ಒಂದೇ ಖಾತೆಗೆ ಒಂದಕ್ಕಿಂತ ಹೆಚ್ಚು ಫಲಾನುಭವಿಗಳ ಧನಸಹಾಯ ಪಾವತಿಸಲಾಗಿದೆ. ಅದೇ ರೀತಿ, ಒಂದೇ ಫಲಾನುಭವಿಯ ವಿವಿಧ ಖಾತೆಗಳಿಗೆ ಬೇರೆ ಬೇರೆ ತಿಂಗಳ ಧನಸಹಾಯ ಪಾವತಿ ಮಾಡುವ ಅವಕಾಶವಿದೆ. ಆದರೆ ಒಂದೇ ತಿಂಗಳಲ್ಲಿ ಒಂದು ಫಲಾನುಭವಿಗೆ ಒಂದಕ್ಕಿಂತ ಹೆಚ್ಚು ಖಾತೆಗೆ ಹಣ ಜಮೆಯಾಗಿರುವುದಿಲ್ಲ ಎಂದು ಹೇಳಿದೆ.
ಒಂದೇ ಬ್ಯಾಂಕ್ ಖಾತೆಗೆ 2 ಕಾರಣ:ಇನ್ನು, ಒಂದೇ ಬ್ಯಾಂಕ್ ಖಾತೆ ಸಂಖ್ಯೆಯಡಿ ಬಹು ಫಲಾನುಭವಿಗಳು ಕಂಡುಬರುವುದಕ್ಕೆ ಎರಡು ಕಾರಣಗಳಿರಬಹುದು. ಜಂಟಿ ಬ್ಯಾಂಕ್ ಖಾತೆಯಿದ್ದಲ್ಲಿ ಒಂದೇ ಬ್ಯಾಂಕ್ ಖಾತೆಗೆ ಒಂದಕ್ಕಿಂತ ಹೆಚ್ಚು ಫಲಾನುಭವಿಗಳ ಸರ್ಕಾರಿ ಸೌಲಭ್ಯ ಜಮೆಯಾಗಿರಬಹುದು. ಫಲಾನುಭವಿಯು ಖಾತೆ ಹೊಂದಿರುವ ಬ್ಯಾಂಕ್ ತಾಂತ್ರಿಕ ದೋಷದಿಂದ ತಪ್ಪಾದ ಬ್ಯಾಂಕ್ ಖಾತೆ ವಿವರಗಳು ಪ್ರತಿಕ್ರಿಯಾ ಕಡತದಲ್ಲಿ ಹಂಚಿಕೆಯಾಗಿರಬಹುದು. ಈ ಬಗ್ಗೆ ಜಿಲ್ಲಾ ಹಾಗೂ ತಾಲೂಕು ಮಟ್ಟದಲ್ಲಿ ಇಂಥ ಪ್ರಕರಣಗಳ ಕುರಿತು ಅಧಿಕಾರಿಗಳ ಮೂಲಕ ಭೌತಿಕವಾಗಿ ಕ್ಷೇತ್ರ ಭೇಟಿ ನಡೆಸಿ, ಪರಿಶೀಲನೆ ನಡೆಸಲಾಗಿದ್ದು, ಜಂಟಿ ಖಾತೆ ಇರುವಂತಹ ಫಲಾನುಭವಿಗಳ (ಉದಾ: ಅತ್ತೆ-ಸೊಸೆ, ತಾಯಿ-ಮಗಳು) ಬ್ಯಾಂಕ್ ಖಾತೆಗೆ ಅನುದಾನ ಪಾವತಿಯಾಗಿರುವುದು ಕಂಡು ಬಂದಿರುತ್ತದೆ. ಈ ಫಲಾನುಭವಿಗಳು ಬೇರೆ ಬೇರೆ ಪಡಿತರ ಚೀಟಿ ಹೊಂದಿದ್ದು, ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಗಳಾಗಿರುವುದರಿಂದ ಎರಡೂ ಫಲಾನುಭವಿಗಳ ಧನಸಹಾಯ ಮೊತ್ತವು ಒಂದೇ ಖಾತೆಗೆ ಪಾವತಿಯಾಗಿರುತ್ತದೆ ಎಂದು ಹೇಳಿದೆ.ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆಗಳನ್ನು ಹೊಂದಿರುವ ಫಲಾನುಭವಿಗಳು ಬ್ಯಾಂಕ್ ಖಾತೆಗೆ ಆಧಾರ್ ಜೋಡಿಸುವುದು ಸಂಪೂರ್ಣವಾಗಿ ಫಲಾನುಭವಿಯದ್ದಾಗಿದೆ. ಫಲಾನುಭವಿಯು ಸರ್ಕಾರಿ ಸೌಲಭ್ಯ ಪಡೆಯಲು ತಾನು ಬಯಸುವ ಯಾವುದೇ ಬ್ಯಾಂಕ್ ಖಾತೆಯನ್ನು ಆಯ್ಕೆ ಮಾಡಬಹುದು. ಅಗತ್ಯವಿದ್ದಲ್ಲಿ, ಲಿಖಿತ ಒಪ್ಪಿಗೆಯ ಮೂಲಕ ಆಧಾರ್ ಜೋಡಣೆಯನ್ನು ಮತ್ತೊಂದು ಬ್ಯಾಂಕ್ ಖಾತೆಗೆ ಬದಲಾಯಿಸಬಹುದು. ಈ ಬದಲಾವಣೆ ನವೀಕರಿಸಿದ ನಂತರ ಸರ್ಕಾರಿ ಸೌಲಭ್ಯ ಹೊಸದಾಗಿ ಜೋಡಿಸಲಾದ ಬ್ಯಾಂಕ್ ಖಾತೆಗೆ ಜಮೆಯಾಗುತ್ತದೆ. ಬ್ಯಾಂಕ್ ಮೇಲ್ಕಂಡ ಆಧಾರ್ ಜೋಡಣೆ ಪ್ರಕ್ರಿಯೆಯನ್ನು ಅನುಸರಿಸಿ ಈ ಬದಲಾವಣೆಯನ್ನು ಮಾಡುತ್ತದೆ. ಈ ಸಂದರ್ಭದಲ್ಲಿ ಸರ್ಕಾರ ಅಥವಾ ಇಲಾಖೆಯ ಯಾವುದೇ ಪಾತ್ರ ಇರುವುದಿಲ್ಲ ಎಂದು ತಿಳಿಸಿದೆ.
ತಾಂತ್ರಿಕ ಸಮಸ್ಯೆಯಿಂದ ಲಭ್ಯ ಇಲ್ಲ:
ಸಿಎಜಿ ವರದಿಯ ಮತ್ತೊಂದು ಆಕ್ಷೇಪ, ಬ್ಯಾಂಕ್ ಖಾತೆ ವಿವರಗಳಿಲ್ಲದ ಫಲಾನುಭವಿಗಳಿಗೆ ಸಹಾಯಧನ ಪಾವತಿಗೆ ಸಂಬಂಧಿಸಿದಂತೆ, ಆಧಾರ್ ಆಧಾರಿತ ಪಾವತಿ ವ್ಯವಸ್ಥೆಯಲ್ಲಿ ಬ್ಯಾಂಕ್ ಖಾತೆ ವಿವರಗಳು ಪ್ರತಿಕ್ರಿಯಾ ಕಡತದ ಭಾಗವಾಗಿ ಲಭ್ಯವಾಗಬೇಕು. ಆದರೆ ಕೆಲವೊಮ್ಮೆ ಫಲಾನುಭವಿಗಳ ಬ್ಯಾಂಕಿನ ತಾಂತ್ರಿಕ ಸಮಸ್ಯೆಯಿಂದ ಖಾತೆ ವಿವರಗಳಿಲ್ಲ ಎಂಬ ಪ್ರತಿಕ್ರಿಯೆ ಕಳುಹಿಸಬಹುದು. ಈ ಕುರಿತು ಪರಿಶೀಲಿಸಿದಾಗ ನಂತರದ ತಿಂಗಳುಗಳಲ್ಲಿ ಬ್ಯಾಂಕ್ ಖಾತೆ ವಿವರಗಳೊಂದಿಗೆ ಪ್ರತಿಕ್ರಿಯೆ ಕಡತವನ್ನು ಬ್ಯಾಂಕ್ ಒದಗಿಸಿರುವುದು ಕಂಡು ಬಂದಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
