ಸಾರಾಂಶ
ಜಲಾಶಯ ನೀರು ಬಾರದಿದ್ದರೂ ಕೊಳವೆ ಬಾವಿ ಆಶ್ರಿತರಾಗಿ ನೀರು ಪಡೆದು ಭತ್ತ ನಾಟಿ ಮಾಡಿದ ರೈತರು ಈಗ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ರಾಮಮೂರ್ತಿ ನವಲಿ
ಗಂಗಾವತಿ: ಬತ್ತದ ಕಣಜ ಎಂದೇ ಖ್ಯಾತವಾಗಿರುವ ಗಂಗಾವತಿ ತಾಲೂಕಿನಲ್ಲಿ ಈ ಬಾರಿ ಕೇವಲ ಒಂದೇ ಬೆಳೆಗೆ ರೈತರು ತೃಪ್ತಿಪಡಬೇಕಾಗಿದೆ. ಸಮರ್ಪಕ ಮಳೆ ಬಾರದ ಕಾರಣ ರೈತ ಸಮುದಾಯ ಕಂಗಾಲಾಗಿದ್ದಾರೆ.ಜಲಾಶಯ ನೀರು ಬಾರದಿದ್ದರೂ ಕೊಳವೆ ಬಾವಿ ಆಶ್ರಿತರಾಗಿ ನೀರು ಪಡೆದು ಭತ್ತ ನಾಟಿ ಮಾಡಿದ ರೈತರು ಈಗ ತ್ರಿಶಂಕು ಸ್ಥಿತಿಯಲ್ಲಿದ್ದಾರೆ.
ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಸುಮಾರು 3.25 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬತ್ತ ಬೆಳೆಯುತ್ತಿದ್ದು, ಅದರಲ್ಲಿ ಗಂಗಾವತಿ ತಾಲೂಕಿನಲ್ಲಿಯೇ 60 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಭತ್ತ ನಾಟಿ ಮಾಡಿದ್ದಾರೆ. ಎರಡನೇ ಬೆಳೆಗೆ ಭತ್ತ ನಾಟಿಗೆ ನೀರು ಪೂರೈಕೆ ಇಲ್ಲ ಎಂದು ನೀರಾವರಿ ಇಲಾಖೆ ಘೋಷಣೆ ಮಾಡಿದ್ದರೂ ರೈತರು ಕೊಳವೆಬಾವಿ ನೀರು ಪಡೆದು ಭತ್ತ ನಾಟಿ ಮಾಡಿ ಕೈ ಸುಟ್ಟುಕೊಂಡಿದ್ದಾರೆ.ನದಿ ನೀರು ಉಪಯುಕ್ತ:
ಭತ್ತಕ್ಕೆ ನದಿ ನೀರು ಸಿಹಿಯಾಗಿದ್ದರಿಂದ ಭತ್ತ ಇಳುವರಿ ಮತ್ತು ಗುಣಮಟ್ಟದ ಬೆಳೆ ಬರಲು ಸಾಧ್ಯವಾಗುತ್ತದೆ. ಸವಳು ಭೂಮಿಯಲ್ಲಿ ಭತ್ತ ಬೆಳೆ ಸರಿಯಾಗಿ ಬಾರದೇ ಇರುವುದರಿಂದ ಬಹುತೇಕ ಕಮರಿ ಹೋಗುವ ಸಾಧ್ಯತೆಯಿದೆ. ಅದರಲ್ಲಿ ರೈತರು ಕಾವೇರಿ ಸೋನಾ ಮತ್ತು ಆರ್ ಎನ್ ಆರ್ ಮಾದರಿ ಭತ್ತ ಬೆಳೆಯುತ್ತಿದ್ದು, ಕೊಳವೆಬಾವಿಯ ನೀರಿಗೆ ಸರಿಯಾಗಿ ಇಳುವರಿ ಬರುತ್ತಿಲ್ಲ ಎಂದು ಕೃಷಿ ವಿಜ್ಞಾನಿಗಳ ಹೇಳುತ್ತಿದ್ದಾರೆ.ಈ ಬಾರಿಯ ಒಂದೇ ಬೆಳೆಯಿಂದ ಭತ್ತದ ಬೆಲೆ ಅಧಿಕವಾಗಿದೆ. ಪರಿಣಾಮ ಸೋನಾ ಮಸೂರಿ ಅಕ್ಕಿಯ ಬೆಲೆ ಗಗನಕ್ಕೆ ಏರಿದೆ.
ಭತ್ತ ಬೆಳೆದು ಅಧಿಕ ಬೆಲೆ ಪಡೆಯಬೇಕೆಂಬ ಆಸೆ ಇಟ್ಟುಕೊಂಡ ರೈತರಿಗೆ ಆಘಾತ ತಂದಿದೆ. ಶೇ.40 ಬೆಳೆ ಹಾನಿಯಾಗಿದ್ದು, ಈಗ ರೈತರು ನಷ್ಟ ಅನುಭವಿಸುತ್ತಿದ್ದಾರೆ.ತುಂಗದಭದ್ರಾ ಅಚ್ಚುಕಟ್ಟು ಪ್ರ್ರದೇಶದ ರೈತರು ಜಲಾಶಯದಲ್ಲಿ ನೀರು ಇಲ್ಲದೇ ಇರುವುದರಿಂದ ಭತ್ತ ನಾಟಿ ಮಾಡಲು ಹೋಗಬಾರದು. ಅದರಲ್ಲೂ ಕೊಳವೆಬಾವಿ ನೀರು ಯಾವ ಸಮಯದಲ್ಲಿ ಕೈ ಕೊಡುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಈ ಬಾರಿ ಆರಂಭದಲ್ಲಿಯೇ ಬೇಸಿಗೆ ಹೆಚ್ಚಾಗಿದ್ದರಿಂದ ನೀರಿನ ಕೊರತೆ ಹೆಚ್ಚಾಗಿದೆ ಎನ್ನುತ್ತಾರೆ ಹಿರಿಯ ವಿಜ್ಞಾನಿ ಕೆ.ವಿ.ಕೆ ಡಾ.ರಾಘವೇಂದ್ರ ಎಲಿಗಾರ್.
ಜಲಾಶಯದಲ್ಲಿ ನೀರು ಇಲ್ಲದೇ ಇರುವುದರಿಂದ ಕೊಳವೆಬಾವಿ ಅವಲಂಬಿತರಾಗಿ ಭತ್ತ ಬೆಳೆಯುತ್ತಿದ್ದೇವೆ. ಈಗ ಕೊಳವೆಬಾವಿಯಲ್ಲೂ ನೀರು ಇಲ್ಲ. ಹೀಗಾಗಿ ನಷ್ಟ ಅನುಭವಿಸುವ ಸ್ಥಿತಿ ಬಂದಿದೆ ಎನ್ನುತ್ತಾರೆ ಪ್ರಗತಿಪರ ರೈತ ಸುಬ್ಬರಾವ್.