ಸಾರಾಂಶ
ಗ್ರಾಪಂ ಅಧಿಕಾರಿಗಳು ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ. ಗ್ರಾಮಗಳ ಜನಸಂಖ್ಯೆ ಆಧರಿಸಿ ಅಗತ್ಯ ಪ್ರಮಾಣದ ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಗ್ರಾಮೀಣ ಕುಡಿಯುವ ನೀರು ಪೂರೈಕೆ ಜಾಲದ ಕೊಳವೆ ಬಾವಿಗಳು ಬತ್ತಿ ಹೋಗಿದ್ದರೆ ಅಂತಹ ಕಡೆ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ.
ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ತೀವ್ರ ಬರಗಾಲದ ಸುಳಿಗೆ ತಾಲೂಕು ಸಿಲುಕಿದ್ದರೂ ಗ್ರಾಮಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಯಾವುದೇ ತೊಂದರೆಯಾಗದಂತೆ ತಾಲೂಕು ಪಂಚಾಯ್ತಿ ಕ್ರಮ ವಹಿಸಿದೆ ಎಂದು ತಾಪಂ ಇಒ ಬಿ.ಎಸ್.ಸತೀಶ್ ತಿಳಿಸಿದರು.ಮೇ ತಿಂಗಳ ಆಗಮನವಾಗಿದ್ದರೂ ಮಳೆರಾಯನ ಸುಳಿವು ಕಾಣುತ್ತಿಲ್ಲ. ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಕೆರೆ-ಕಟ್ಟೆಗಳು ಬರಿದಾಗಿ ಅಂತರ್ಜಲ ಮಟ್ಟ ಕುಸಿಸದಿದೆ. ಪರಿಸ್ಥಿತಿ ಗಂಭೀರವಾಗಿದ್ದರೂ ಗ್ರಾಮೀಣ ಪ್ರದೇಶದ ಜನರಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಪ್ರತಿ ಗ್ರಾಪಂ ವ್ಯಾಪ್ತಿಯಲ್ಲೂ ಕ್ರಮ ವಹಿಸಲಾಗಿದೆ ಎಂದರು.
ಗ್ರಾಪಂ ಅಧಿಕಾರಿಗಳು ಸಮಸ್ಯೆ ಇರುವ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಕೆ ಮಾಡುತ್ತಿದ್ದಾರೆ. ಗ್ರಾಮಗಳ ಜನಸಂಖ್ಯೆ ಆಧರಿಸಿ ಅಗತ್ಯ ಪ್ರಮಾಣದ ನೀರನ್ನು ಟ್ಯಾಂಕರ್ ಮೂಲಕ ಪೂರೈಕೆ ಮಾಡಲಾಗುತ್ತಿದೆ. ಗ್ರಾಮೀಣ ಕುಡಿಯುವ ನೀರು ಪೂರೈಕೆ ಜಾಲದ ಕೊಳವೆ ಬಾವಿಗಳು ಬತ್ತಿ ಹೋಗಿದ್ದರೆ ಅಂತಹ ಕಡೆ ಹೊಸದಾಗಿ ಕೊಳವೆ ಬಾವಿಗಳನ್ನು ಕೊರೆಸಲಾಗುತ್ತಿದೆ ಎಂದರು.ಸಮಸ್ಯೆ ಇರುವ ಕಡೆ ಈಗಾಗಲೇ ಹೊಸದಾಗಿ 17 ಕೊಳವೆಬಾವಿ ಕೊರೆಸಲಾಗಿದೆ. ಇದರಲ್ಲಿ ನಾಲ್ಕು ಕೊಳವೆ ಬಾವಿಗಳನ್ನು ರೀ ಬೋರ್ ಮಾಡಿಸಿದ್ದರೆ, 13 ಕೊಳವೆ ಬಾವಿ ಹೊಸದಾಗಿ ಕೊರೆಸಲಾಗಿದೆ. ಇದರಲ್ಲಿ 6 ಬಾವಿಗಳಲ್ಲಿ ನೀರು ದೊರಕಿದ್ದು ಉಳಿದ 7 ಕೊಳವೆಬಾವಿಗಳಲ್ಲಿ ನೀರು ಬಂದಿಲ್ಲ ಎಂದರು.
ಬತ್ತಿ ಹೋಗಿರುವ ಕೊಳವೆ ಬಾವಿಗಳಿರುವ ಗ್ರಾಮಗಳಲ್ಲಿ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. 14 ಗ್ರಾಪಂ ಸುಮಾರು 25ಕ್ಕೂ ಹೆಚ್ಚು ಗ್ರಾಮಗಳಿಗೆ ಸಮರ್ಪಕವಾಗಿ ಟ್ಯಾಂಕರ್ ನೀರು ಪೂರೈಕೆ ಮಾಡಲಾಗುತ್ತಿದೆ. ತಹಸೀಲ್ದಾರರ ಜೊತೆಗೂಡಿ ಗ್ರಾಮೀಣ ಪ್ರದೇಶದ ಕೊಳವೆ ಬಾವಿಗಳ ಸ್ಥಿತಿಗತಿಗಳು ಮತ್ತು ನೀರು ಪೂರೈಕೆ ವ್ಯವಸ್ಥೆ ಖುದ್ದು ಪರಿಶೀಲನೆ ಮಾಡಲಾಗುತ್ತಿದೆ ಎಂದರು.