ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರುಮೈಸೂರು ನಗರದ ಅಭಿವೃದ್ಧಿಗೆ ಸಂಬಂಧಿಸಿದಂತೆ ಜಿಪಂ ಸಭಾಂಗಣದಲ್ಲಿ ಶನಿವಾರ ನಡೆದ ಸಭೆಯಲ್ಲಿ ನಗರದ ಹಿರಿಯರು, ಸಂಘ, ಸಂಸ್ಥೆಗಳ ಪ್ರಮುಖರು, ಗಣ್ಯರು ತಮ್ಮ ಸಲಹೆ ಸೂಚನೆ ನೀಡಿದರು.ಮಾಜಿ ಮೇಯರ್ ಸಂದೇಶ್ ಸ್ವಾಮಿ ಮಾತನಾಡಿ, ಬೃಹತ್ ಮೈಸೂರು ನಗರಪಾಲಿಕೆ ಅಗತ್ಯ. ಆದರೆ ನಾಲ್ಕೈದು ದಶಕಗಳ ದೂರದೃಷ್ಟಿಯೊಂದಿಗೆ ರೂಪಿಸಬೇಕು, ಮೂಲಸೌಲಭ್ಯದ ಜತೆಗೆ ಇತರೆ ಅಭಿವೃದ್ಧಿ ಕಾರ್ಯದ ಬಗ್ಗೆ ಚಿಂತಿಸಿ, ರಾಜ ಮಹಾರಾಜರು ಮಾದರಿ ಆಡಳಿತ ನೀಡಿದ್ದಾರೆ. ಅವರ ದೂರದೃಷ್ಟಿತ್ವದ ಯೋಜನೆ ಕುರುಹುಗಳು ಸಾಕಷ್ಟಿವೆ. ವಿರೂಪವಾಗಿರುವ ಪಾರಂಪರಿಕ ಕಟ್ಟಡಗಳ ಸಂಬಂಧ ಕೂಡಲೇ ನಿರ್ಧಾರ ಕೈಗೊಳ್ಳಬೇಕು, ಇಲ್ಲಿನ ಆದಾಯ ಮೂಲವೇ ಪ್ರವಾಸೋದ್ಯಮವಾದ್ದರಿಂದ ಈ ನಿಟ್ಟಿನಲ್ಲಿ ಪ್ರವಾಸಿಗರಿಗೆ ಪೂರಕ ವಾತಾವರಣ ಕಲ್ಪಿಸಬೇಕು, ಪ್ರತಿ ಅಂಶದ ಬಗ್ಗೆಯೂ ಚರ್ಚಿಸಿ, ಸೂಕ್ತ ಯೋಜನೆ ರೂಪಿಸಬೇಕು ಎಂದರು.ಲೇಖಕ ಜಿ.ಪಿ. ಬಸವರಾಜು ಮಾತನಾಡಿ, ಸಣ್ಣ ಉದ್ಯಮಗಳು ಬರಬೇಕು. ಕೇವಲದಸರಾಕ್ಕೆ ಗಮನ ಕೊಡುವುದಲ್ಲ. ನಗರದಲ್ಲಿ ಸಾಂಸ್ಕೃತಿಕ ವಾತಾವರಣ ನಿರ್ಮಾಣವಾಗಬೇಕು. ಕಲಾ ಕಾಂಪ್ಲೆಕ್ಸ್ ನಿರ್ಮಿಸಿ ಕಲಾವಿದರಿಗೆ ಬಾಡಿಗೆ ನೀಡಿ. ಬಡಾವಣೆಗಳಲ್ಲಿ ರಂಗಮಂದಿರ ನಿರ್ಮಿಸಿ ಎಂದರು.ಮಾಜಿ ಮೇಯರ್ ಶಿವಕುಮಾರ್ ಮಾತನಾಡಿ, ಗ್ರೇಟರ್ ಮೈಸೂರು ಬಗ್ಗೆ ಮಾಹಿತಿ ನೀಡಿ ಎಂದರು.ಮತ್ತೋರ್ವ ಮಾಜಿ ಮೇಯರ್ ಆರೀಫ್ ಹುಸೇನ್ ಮಾತನಾಡಿ, ನಗರದಲ್ಲಿ ಕಂದಾಯ ಬಡಾವಣೆಗೆ ಕಡಿವಾಣ ಹಾಕಬೇಕು ಎಂದು ಹೇಳಿದರು.ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮಾತನಾಡಿ, 2001ರ ಜನಸಂಖ್ಯೆಯಂತೆ 178 ಚ.ಕಿ.ಮೀ. ವ್ಯಾಪ್ತಿ ಇರಬೇಕಿತ್ತು. ಈಗ ಇದರ ವ್ಯಾಪ್ತಿ 200 ಚ.ಕಿ.ಮೀ. ಆಗಿದೆ. ಆದ್ದರಿಂದ ನಗರದ ಬೆಳವಣಿಗೆಯನ್ನು ಸೀಮಿತಗೊಳಿಸಬೇಕು ಎಂದರು.ರಂಗಕರ್ಮಿ ಸಿ. ಬಸವಲಿಂಗಯ್ಯ ಮಾತನಾಡಿ, ಹೊಸ ಬಡಾವಣೆಗಳಲ್ಲಿ ಕಿರು ರಂಗಮಂದಿರ ಕಟ್ಟಿ, ವಿಕೇಂದ್ರೀಕರಣಗೊಳಿಸಬೇಕು. ಮಕ್ಕಳ ರಂಗಾಯಣ ಆರಂಭಿಸಬೇಕು ಎಂದು ಸಲಹೆ ನೀಡಿದರು.ಮೈಸೂರು ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆ ಅಧ್ಯಕ್ಷ ಕೆ.ಬಿ. ಲಿಂಗರಾಜು ಮಾತನಾಡಿ, ಮೈಸೂರಿನ ನಾಲ್ಕು ಕಡೆ ಸ್ಯಾಟಲೈಟ್ಬಸ್ ನಿಲ್ದಾಣ, ಹೊಸ ಮಾರುಕಟ್ಟೆ ನಿರ್ಮಾಣ, ಹೊಸ ಕೈಗಾರಿಕಾ ಪ್ರದೇಶ ಸ್ಥಾಪನೆ, ವಿಮಾನ ನಿಲ್ದಾಣದಲ್ಲಿ ವಿಮಾನ ಪ್ರಯಾಣ ಹೆಚ್ಚಿಸುವಿಕೆ, ಮೆಟ್ರೋ ಇಲ್ಲವೆ ಮೋನೋ ರೈಲು ಬರಲಿ. ಮಲ್ಟಿ ಪಾರ್ಕಿಂಗ್ ಕಟ್ಟಡ ಬರಬೇಕು ಎಂದರು.ಸವಿತಾ ಮಲ್ಲೇಶ್ ಮಾತನಾಡಿ, ಮಕ್ಕಳಿಗಾಗಿ ಪರಿಸರ ಸಂಶೋಧನಾಲಯ ಸ್ಥಾಪಿಸುವಂತೆ ಸಲಹೆ ನೀಡಿದರು.