ಸಭಾಪತಿ ಸ್ಥಾನದಲ್ಲಿ ಕುಳಿತುಕೊಂಡು ಯಾವುದೇ ರೀತಿಯ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಾಡದೇ ಆ ಸ್ಥಾನಕ್ಕೆ ಗೌರವ ತರುವ ರೀತಿಯಲ್ಲಿ ನಡೆದುಕೊಂಡಿದ್ದೇನೆ.

ಶಿರಹಟ್ಟಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಾಗಿಲು ಹಾಕಿ ಒತ್ತಾಯಪೂರ್ವಕವಾಗಿ ರಾಜೀನಾಮೆ ಪಡೆಯುವಂತೆ ಮಾಡಿದರು ಎಂದು ಮಾಜಿ ಸಭಾಪತಿ ಬಸವರಾಜ ಹೊರಟ್ಟಿ ಅಸಮಾಧಾನ ವ್ಯಕ್ತಪಡಿಸಿದರು.ತಾಲೂಕಿನ ಬೆಳ್ಳಟ್ಟಿ ಗ್ರಾಮದಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯದಲ್ಲಿ ಭಿನ್ನಾಭಿಪ್ರಾಯಗಳು ಸಹಜ. ಒತ್ತಡ ಹೇರುವ ಮೂಲಕ ರಾಜೀನಾಮೆ ಪಡೆಯುವುದು ಸರಿಯಾದ ಕ್ರಮವಲ್ಲ ಎಂದರು.ನಾನು ಯಾವುದೇ ತಪ್ಪು ಮಾಡದಿದ್ದರೂ ರಾಜೀನಾಮೆ ನೀಡುವಂತೆ ಒತ್ತಾಯಿಸಲಾಯಿತು. ಬಾಗಿಲು ಹಾಕಿಕೊಂಡು ಈ ರೀತಿಯಾಗಿ ರಾಜೀನಾಮೆ ಪಡೆಯುವ ಪರಿಸ್ಥಿತಿ ಎದುರಾಗಿದ್ದು ನೋವು ತಂದಿತ್ತು. ರಾಜಕೀಯದಲ್ಲಿ ಅಧಿಕಾರಕ್ಕಿಂತ ಪ್ರಜಾಪ್ರಭುತ್ವದ ಮೌಲ್ಯಗಳು, ಪರಸ್ಪರ ಗೌರವ ಹಾಗೂ ಪಾರದರ್ಶಕತೆ ಮುಖ್ಯವಾಗಬೇಕು ಎಂದು ಹೇಳಿದರು.ಸಭಾಪತಿ ಸ್ಥಾನದಲ್ಲಿ ಕುಳಿತುಕೊಂಡು ಯಾವುದೇ ರೀತಿಯ ಭ್ರಷ್ಟಾಚಾರ, ಸ್ವಜನಪಕ್ಷಪಾತ ಮಾಡದೇ ಆ ಸ್ಥಾನಕ್ಕೆ ಗೌರವ ತರುವ ರೀತಿಯಲ್ಲಿ ನಡೆದುಕೊಂಡಿದ್ದೇನೆ. ತಮ್ಮ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆಗೆ ಸಂಬಂಧಿಸಿದಂತೆ ಪತ್ರ ನೀಡಿದ್ದರೆ, ಅದನ್ನು ಎರಡು ನಿಮಿಷದಲ್ಲೇ ತಿರಸ್ಕರಿಸುತ್ತಿದ್ದೆ. ಸಭಾಪತಿ ಸ್ಥಾನದಿಂದ ಕೆಳಗಿಳಿಸಲು ಅವಿಶ್ವಾಸ ನಿರ್ಣಯದ ಕಾನೂನುಬದ್ಧ ಮಾರ್ಗವನ್ನು ಅನುಸರಿಸಿದ್ದರೆ ಅದನ್ನು ಎದುರಿಸಲು ಸಿದ್ಧನಿದ್ದೆ ಎಂದರು.

ನಾನು ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಅದೇ ಹುದ್ದೆಗೆ ಏರುವೆ. ಅಧಿಕಾರದಿಂದ ದೂರವಾದರೂ ರಾಜಕೀಯ ಜೀವನಕ್ಕೆ ಪೂರ್ಣವಿರಾಮ ಹಾಕುವ ಪ್ರಶ್ನೆಯೇ ಇಲ್ಲ. ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದು, ಅದೇ ಹುದ್ದೆ ಅಲಂಕರಿಸುವೆ ಎಂದರು.

ಈ ವೇಳೆ ಮಾಧ್ಯಮಿಕ ಶಾಲಾ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಎಂ.ಕೆ. ಲಮಾಣಿ, ತಿಮ್ಮರಡ್ಡಿ ಮರಡ್ಡಿ, ಮೋಹನ್ ಗುತ್ತೆಮ್ಮನವರ, ಎ.ಎಸ್. ಪಾಟೀಲ ಇತರರು ಇದ್ದರು.ಸ್ಪೀಕರ್‌ ಜಿ.ಎಸ್. ಪಾಟೀಲರಿಗೆ ಬೆಳ್ಳಿ ಕಡಗ ಉಡುಗೊರೆ

ಮುಂಡರಗಿ: ಜಿ.ಎಸ್. ಪಾಟೀಲ ಅವರು ವಿಧಾನಸಭಾ ಸಭಾಧ್ಯಕ್ಷರಾಗಿ ಪ್ರಪ್ರಥಮ ಬಾರಿಗೆ ಮುಂಡರಗಿ ತಾಲೂಕಿಗೆ ಆಗಮಿಸಿದ ಸಂದರ್ಭದಲ್ಲಿ ತಾಲೂಕಿನ ಕದಾಂಪುರ ಗ್ರಾಮದಲ್ಲಿ ತಾಲೂಕು ಬ್ಲಾಕ್ ಮಹಿಳಾ ಕಾಂಗ್ರೆಸ್ ಮಾಜಿ ಅಧ್ಯಕ್ಷೆ ಜ್ಯೋತಿ ರಾಘವೇಂದ್ರ ಕುರಿ ಅವರು ಎರಡು ತೊಲೆ ಬೆಳ್ಳಿ ಕಡಗವನ್ನು ಅವರ ಕೈಗೆ ಹಾಕಿ ತಮ್ಮ ನೆಚ್ಚಿನ ನಾಯಕರನ್ನು ಅಭಿನಂದಿಸಿದ್ದಾರೆ.ಈ ಕುರಿತು ಮಾತನಾಡಿದ ಅವರು, ಜಿ.ಎಸ್. ಪಾಟೀಲ ಅವರು ರೋಣ ಮತಕ್ಷೇತ್ರದಲ್ಲಿ ಅನೇಕ ಬಾರಿ ಶಾಸಕರಾಗಿ, ವಿವಿಧ ನಿಗಮ ಮಂಡಳಿ ಅಧ್ಯಕ್ಷರಾಗಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಜಿಲ್ಲಾ ಕಾಂಗ್ರೆಸ್ ಕಮಿಟಿ ಅಧ್ಯಕ್ಷರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ. ಅಂಥವರಿಗೆ ವಿಧಾನಸಭಾ ಸಭಾಧ್ಯಕ್ಷರ ಹುದ್ದೆ ದೊರೆತಿರುವುದಕ್ಕೆ ತುಂಬಾ ಸಂತಸವಾಗಿದ್ದು, ಹೀಗಾಗಿ ಈ ಉಡುಗೊರೆಯನ್ನು ನೀಡಿರುವೆ ಎಂದು ತಿಳಿಸಿದ್ದಾರೆ.