ತಮಿಳುನಾಡಿಂದ ಬಂದು ಇಲ್ಲಿ ಬಾಂಬ್‌ ಹಾಕ್ತಾರೆ: ಶೋಭಾ ಕರಂದ್ಲಾಜ್ಞೆ

| Published : Mar 20 2024, 01:45 AM IST / Updated: Mar 20 2024, 11:48 AM IST

Shobha Karandlaje
ತಮಿಳುನಾಡಿಂದ ಬಂದು ಇಲ್ಲಿ ಬಾಂಬ್‌ ಹಾಕ್ತಾರೆ: ಶೋಭಾ ಕರಂದ್ಲಾಜ್ಞೆ
Share this Article
  • FB
  • TW
  • Linkdin
  • Email

ಸಾರಾಂಶ

ತಮಿಳುನಾಡಿನಿಂದ ಬಂದು ಇಲ್ಲಿ ಬಾಂಬ್‌ ಹಾಕುತ್ತಾರೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಆರೋಪಿಸಿದ್ದಾರೆ. ಇದಕ್ಕೆ ತಮಿಳುನಾಡಿನ ಸಿಎಂ ಸ್ಟಾಲಿನ್‌ ಆಕ್ರೋಶ ವ್ಯಕ್ತಪಡಿಸಿದ್ಧಾರೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ನಮ್ಮ ಮನೆಯಲ್ಲಿ, ನಮ್ಮ ಅಂಗಡಿಯಲ್ಲಿ ಹನುಮಾನ್‌ ಚಾಲೀಸ ಹಾಕಿದರೆ ತಪ್ಪೇ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜ್ಞೆ ಪ್ರಶ್ನಿಸಿದ್ದಾರೆ.

ವರ್ತಕ ಮುಖೇಶ್‌ ಮೇಲಿನ ಹಲ್ಲೆ ಖಂಡಿಸಿ ಮಂಗಳವಾರ ನಡೆದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಾರೋ ತಮಿಳುನಾಡಿನಿಂದ ಬಂದು ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಇರಿಸಿ ಹೋಗುತ್ತಾನೆ. 

ದೆಹಲಿಯಿಂದ ಬಂದು ವಿಧಾನಸೌಧದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುತ್ತಾನೆ. ಇನ್ನೊಬ್ಬ ನಮ್ಮ ಕಾಲೇಜಿಗೆ ಬಂದು ಆ್ಯಸಿಡ್‌ ಹಾಕುತ್ತಾನೆ. ಇಲ್ಲಿ ಮುಖೇಶ್‌ ಏನು ತಪ್ಪು ಮಾಡಿದ್ದ? ಇದು ಹಿಂದೂ ವಿರೋಧಿ ಸರ್ಕಾರ ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ನಡುವಿನ ಜಗಳದಲ್ಲಿ ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಅವರಿಗೆ ಎಷ್ಟು ಸ್ವಾತಂತ್ರ್ಯ ಇದೆಯೋ ಗೊತ್ತಿಲ್ಲ. 

ಒಂದು ಕೋಮಿನವರು ತಪ್ಪು ಮಾಡಿ ಸರ್ಕಾರ ನಮ್ಮ ರಕ್ಷಣೆಗೆ ಇದೆ ಎಂದುಕೊಳ್ಳುತ್ತಾರೆ. ಮಂತ್ರಿಗಳು ನಮ್ಮ ಹಿಂದೆ ಇದ್ದಾರೆ ಎಂಬ ಧೈರ್ಯ ಅವರಿಗಿದೆ. 

ಇವರಿಗೆ ಕುಮ್ಮಕ್ಕು ಕೊಟ್ಟವರು ಯಾರು? ರಾಜ್ಯದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಬೇಕು ಎಂದು ಆಗ್ರಹಿಸಿದರು.

ಪೊಲೀಸರು ಬಂಧಿಸಿರುವ ಆರೋಪಿಗಳೂ ಈ ಪ್ರಕರಣಕ್ಕೂ ಸಂಬಂಧವೇ ಇಲ್ಲ. ಪ್ರಮುಖ ಆರೋಪಿಗಳನ್ನು ಬಿಟ್ಟು, ಬೇರೆಯವರನ್ನು ಬಂಧಿಸಿದ್ದಾರೆ. ಮೇಲ್ನೋಟಕ್ಕೆ ಈ ಪ್ರಕರಣದಲ್ಲಿ ಪೊಲೀಸರು ಶಾಮೀಲಾಗಿರುವಂತೆ ಕಂಡು ಬಂದಿದೆ. 

ಈಗ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ, ಸರಿಯಾದ ತನಿಖೆ ನಡೆಯುವುದು ಅನುಮಾನ. ನಮಗೆ ನ್ಯಾಯ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಶೋಭಾ ಹೇಳಿಕೆಗೆ ಸ್ಟಾಲಿನ್‌ ಕಿಡಿ

ಚೆನ್ನೈ: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ‘ರಾಮೇಶ್ವರಂ ಕೆಫೆ’ ಸ್ಫೋಟ ಪ್ರಕರಣದಲ್ಲಿ ಬಾಂಬ್‌ ಇಟ್ಟವರು ತಮಿಳುನಾಡಿನವರು ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಕಿಡಿಕಾರಿದ್ದಾರೆ. 

ಅಲ್ಲದೆ ಈ ಹೇಳಿಕೆ ವಿರುದ್ಧ ಕ್ರಮ ಕೈಗೊಳ್ಳುವಂತೆ ಚುನಾವಣಾ ಆಯೋಗಕ್ಕೆ ಮನವಿ ಮಾಡಿದ್ದಾರೆ. ಬೆಂಗಳೂರಿನ ನಗರ್ತಪೇಟೆಯಲ್ಲಿ ಹಿಂದೂ ಯುವಕನ ಮೇಲೆ ಹಲ್ಲೆ ನಡೆದ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ್ದ ಶೋಭಾ, ‘ತಮಿಳುನಾಡಿನ ಜನರು ಅಲ್ಲಿ ತರಬೇತಿ ಪಡೆದುಕೊಂಡು ಬಾಂಬ್‌ ಇಡುತ್ತಾರೆ’ ಎಂದು ಹೇಳಿದ್ದರು. ಇದಕ್ಕೆ ಟ್ವೀಟರ್‌ನಲ್ಲಿ ಸ್ಟಾಲಿನ್‌ ಕಿಡಿ ಕಾರಿದ್ದಾರೆ.

‘ನಾನು ಶೋಭಾ ಕರಂದ್ಲಾಜೆ ಅವರ ಆಧಾರರಹಿತ ಹೇಳಿಕೆಯನ್ನು ಖಂಡಿಸುತ್ತೇನೆ. ಇಂತಹ ಹೇಳಿಕೆಯನ್ನು ನೀಡಬೇಕೆಂದರೆ ಅವರ ಒಂದೇ ಎನ್‌ಐಎ ಅಧಿಕಾರಿ ಇಲ್ಲವೇ ರಾಮೇಶ್ವರಂ ಕೆಫೆ ಅವರಾಗಿರಬೇಕು. ಆದರೆ ಶೋಭಾ ಹೇಳಿಕೆ ಆಧಾರರಹಿತ. 

ಈ ಮಾತನ್ನು ಕನ್ನಡಿಗರು ಹಾಗೂ ತಮಿಳಿಗರು ತಿರಸ್ಕರಿಸುತ್ತಾರೆ. ಇವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಚುನಾವಣಾ ಆಯೋಗದ ಬಳಿ ಮನವಿ ಮಾಡುತ್ತೇನೆ. 

ಬಿಜೆಪಿಯಲ್ಲಿ ಪ್ರಧಾನಿ ಮೋದಿಯಿಂದ ಎಲ್ಲರೂ ಇಂಥಹ ನೀಚ ರಾಜಕೀಯವನ್ನು ಬಿಡಬೇಕು’ ಎಂದು ಆಕ್ರೋಶ ಹೊರಹಾಕಿದರು. ಶೋಭಾ ಕ್ಷಮೆಯಾಚನೆ

ನನ್ನ ತಮಿಳು ಸಹೋದರರು ಮತ್ತು ಸಹೋದರಿಯರಿಗೆ, ನನ್ನ ಟೀಕೆಗಳು ಕೆಲವರಿಗೆ ನೋವು ತಂದಿರುವುದನ್ನು ನಾನು ಗಮನಿಸಿದ್ದೇನೆ ಮತ್ತು ಅದಕ್ಕಾಗಿ ನಾನು ಕ್ಷಮೆಯಾಚಿಸುತ್ತೇನೆ. 

ನನ್ನ ಟೀಕೆಗಳು ಕೃಷ್ಣಗಿರಿ ಅರಣ್ಯದಲ್ಲಿ ತರಬೇತಿ ಪಡೆದವರಿಗೆ ಮಾತ್ರ ನಿರ್ದೇಶಿಸಲ್ಪಟ್ಟಿವೆ. ರಾಮೇಶ್ವರಂ ಕೆಫೆ ಸ್ಫೋಟಕ್ಕೂ ಅದಕ್ಕೂ ಸಂಬಂಧವಿದೆ. 

ಆದರೆ ತಮಿಳುನಾಡಿನ ಜನರಲ್ಲಿ ನನ್ನ ಹೃದಯದ ಆಳದಿಂದ ಕ್ಷಮೆ ಕೇಳುತ್ತೇನೆ. ಇದಲ್ಲದೆ, ನಾನು ನನ್ನ ಹಿಂದಿನ ಹೇಳಿಕೆಗಳನ್ನು ಹಿಂತೆಗೆದುಕೊಳ್ಳುತ್ತೇನೆ. -ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ.