ತಮ್ಮವರಿಗೆ ಪಂಚ್ ಗ್ಯಾರಂಟಿ ಬೇಡವೆನ್ನಿ

| Published : Oct 06 2024, 01:26 AM IST

ಸಾರಾಂಶ

ಗೃಹಲಕ್ಷ್ಮೀ, ಶಕ್ತಿ ಯೋಜನೆ ಸೇರಿ ಇತರೆ ಗ್ಯಾರಂಟಿ ಯೋಜನೆಗಳ ಲಾಭವನ್ನು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಸಹ ಪಡೆದುಕೊಳ್ಳುತ್ತಿದ್ದಾರೆ. ಇಂತಹ ವೇಳೆಯಲ್ಲೂ ಬಿಜೆಪಿ, ಜೆಡಿಎಸ್ ನಾಯಕರು ಈ ಯೋಜನೆಗಳನ್ನು ಬಂದ್ ಮಾಡುವಂತೆ ಟೀಕಿಸುತ್ತಿದ್ದಾರೆ.

ಹುಬ್ಬಳ್ಳಿ:

ಗ್ಯಾರಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಿರುವ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಮ್ಮ ಪಕ್ಷದ ಕಾರ್ಯಕರ್ತರಿಗೆ ಈ ಯೋಜನೆ ಲಾಭ ಪಡೆಯಬೇಡಿ ಎಂದು ಕರೆ ನೀಡಲಿ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ ಸವಾಲು ಹಾಕಿದರು.

ಇಲ್ಲಿನ ಕಾರವಾರ ರಸ್ತೆಯಲ್ಲಿರುವ ಜಿಲ್ಲಾ ಕಾಂಗ್ರೆಸ್ ಕಚೇರಿಗೆ ಶನಿವಾರ ಭೇಟಿ ನೀಡಿ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ನಂತರ ಮಾತನಾಡಿದರು.

ಗೃಹಲಕ್ಷ್ಮೀ, ಶಕ್ತಿ ಯೋಜನೆ ಸೇರಿ ಇತರೆ ಗ್ಯಾರಂಟಿ ಯೋಜನೆಗಳ ಲಾಭವನ್ನು ಬಿಜೆಪಿ, ಜೆಡಿಎಸ್ ಕಾರ್ಯಕರ್ತರು ಸಹ ಪಡೆದುಕೊಳ್ಳುತ್ತಿದ್ದಾರೆ. ಇಂತಹ ವೇಳೆಯಲ್ಲೂ ಬಿಜೆಪಿ, ಜೆಡಿಎಸ್ ನಾಯಕರು ಈ ಯೋಜನೆಗಳನ್ನು ಬಂದ್ ಮಾಡುವಂತೆ ಟೀಕಿಸುತ್ತಿದ್ದಾರೆ. ನಾವು ಕೇವಲ ಕಾಂಗ್ರೆಸ್ ಪಕ್ಷದ ಸದಸ್ಯತ್ವ ಪಡೆದವರಿಗೆ ಮಾತ್ರ ಈ ಯೋಜನೆ ರೂಪಿಸಿಲ್ಲ ಎಂಬುದನ್ನು ವಿರೋಧ ಪಕ್ಷದವರು ಅರಿತುಕೊಂಡು ಮಾತನಾಡಲಿ ಎಂದರು.

ನಿಭಾಯಿಸುವುದು ಗೊತ್ತು:

ರಾಜ್ಯ ಸರ್ಕಾರ ಎಲ್ಲ ಲೆಕ್ಕಾಚಾರ ಮಾಡಿಕೊಂಡೇ ಗ್ಯಾರಂಟಿ ಯೋಜನೆಗಳನ್ನು ರೂಪಿಸಿದೆ. ಬಡವರನ್ನು ಬಡತನ ರೇಖೆಗಿಂತ ಮೇಲಕ್ಕೆ ತರಬೇಕು ಎಂಬ ಉದ್ದೇಶದಿಂದ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇದರಿಂದ ರಾಜ್ಯದ ಹಣಕಾಸು ನಿರ್ವಹಣೆಯಲ್ಲಿ ಕಷ್ಟವಾಗುತ್ತದೆ ನಿಜ, ಆದರೂ ನಿಭಾಯಿಸುತ್ತೇವೆ. 15 ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹಣಕಾಸು ನಿರ್ವಹಣೆ ಹೇಗೆ ಮಾಡಬೇಕು ಎಂಬುದು ಗೊತ್ತಿದೆ ಎಂದು ಹೇಳಿದರು.

ಹಣಕಾಸು ಸ್ಥಿತಿ ಹಾಳು ಮಾಡಿದ್ದರು:

ಬಿಜೆಪಿ ತಮ್ಮ ಅವಧಿಯಲ್ಲಿ ರಾಜ್ಯದ ಹಣಕಾಸು ಸ್ಥಿತಿ ಹಾಳು ಮಾಡಿದ್ದರು. ಅಧಿಕಾರದಲ್ಲಿ ಇದ್ದಾಗ ಲೋಕೋಪಯೋಗಿ ಇಲಾಖೆ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ನೀರಾವರಿ ಇಲಾಖೆಯ ಕಾಮಗಾರಿಗಳ ದೊಡ್ಡ ಮೊತ್ತದ ಬಿಲ್‌ಗಳನ್ನು ಪಾವತಿಸಿರಲಿಲ್ಲ. ಈಗ ನಾವು ಪಾವತಿಸುತ್ತಿದ್ದೇವೆ ಎಂದರು.

ನಿಗಮ ಮಂಡಳಿಗೆ ನೇಮಕ:

ವಿವಿಧ ನಿಗಮ, ಮಂಡಳಿಗಳಿಗೆ ಶೀಘ್ರದಲ್ಲೇ 1800 ಸದಸ್ಯರನ್ನು ನೇಮಕ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಈ ವಾರದೊಳಗೆ ನೇಮಕಾತಿಯಾದರೆ ದಸರಾ ಗಿಫ್ಟ್‌ ಎಂದು ಭಾವಿಸಬೇಕು. ಸ್ವಲ್ಪ ತಡವಾದರೆ ದೀಪಾವಳಿ ಗಿಫ್ಟ್‌ ಎಂದು ತಿಳಿದುಕೊಳ್ಳಿ ಎಂದರು.

ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಶಾಸಕ ಎಂ.ಎಸ್. ಅಕ್ಕಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಸದಾನಂದ ಡಂಗನವರ, ಅಲ್ತಾಫ್ ಕಿತ್ತೂರ, ಮಾಜಿ ಸಂಸದ ಐ.ಜಿ. ಸನದಿ, ಜಿಲ್ಲಾಧ್ಯಕ್ಷರಾದ ಅಲ್ತಾಫ್ ಹಳ್ಳೂರ, ಅನಿಲಕುಮಾರ ಪಾಟೀಲ ಮುಖಂಡರಾದ ಅನ್ವರ ಮುಧೋಳ, ಮೋಹನ ಹಿರೇಮನಿ, ಶ್ರೀನಿವಾಸ ಬೆಳದಡಿ, ರಾಜಶೇಖರ ಮೆಣಸಿನಕಾಯಿ, ರಾಜಶೇಖರ ಕಮತಿ ಸೇರಿದಂತೆ ಹಲವರಿದ್ದರು.ನಮ್ಮ ಕಾರ್ಯಕರ್ತರು ತಕ್ಕ ಉತ್ತರ ನೀಡಿ: ಪರಮೇಶ್ವರ

ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ನಿವೇಶನಗಳನ್ನು ವಾಪಸ್ ನೀಡಿದರೂ ತಪ್ಪೇ? ಸಿಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿ ದೊಡ್ಡ ಭ್ರಷ್ಟಾಚಾರ ನಡೆಸಿದ್ದಾರೆ ಎಂಬಂತೆ ಹರಿಯಾಣ ವಿಧಾನಸಭೆ ಚುನಾವಣೆ ಪ್ರಚಾರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಈ ವಿಷಯವನ್ನು ಪ್ರಸ್ತಾಪಿಸಿದ್ದಾರೆ. ಆ ಮೂಲಕ ಇದರಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಬಿಜೆಪಿಯ ಇಂಥ ಕಾರ್ಯಸೂಚಿಗೆ ಕಾಂಗ್ರೆಸ್ ಪದಾಧಿಕಾರಿಗಳು, ಕಾರ್ಯಕರ್ತರು ಸೂಕ್ತ ಉತ್ತರ ಕೊಡಬೇಕು ಎಂದು ಕರೆ ನೀಡಿದರು.