ಸಾರಾಂಶ
ಶ್ರೀರಂಗಟಪ್ಟಣ:ಗೃಹಿಣಿಯ ಚಿನ್ನದ ಮಾಂಗಲ್ಯ ಸರ ಕದ್ದು ಪರಾರಿಯಾಗುತ್ತಿದ್ದ ಖದೀಮನನ್ನು ಗ್ರಾಮಸ್ಥರು ಹಿಡಿದು ಧರ್ಮದೇಟು ಕೊಟ್ಟು ಪೊಲೀಸರಿಗೆ ಒಪ್ಪಿಸಿದ ಘಟನೆ ತಾಲೂಕಿನ ನಗುವನಹಳ್ಳಿಯಲ್ಲಿ ನಡೆದಿದೆ.ಮೈಸೂರಿನ ನೆಹರು ನಗರ ನಿವಾಸಿ ಲೇಟ್ ಸಯ್ಯದ್ ಅಬ್ದುಲ್ ಕಲೀಂ ಪುತ್ರ ಸಯ್ಯದ್ ವಾಜೀದ್ (45) ಕಳ್ಳತನ ಮಾಡಿ ಪೊಲೀಸರ ಅತಿಥಿಯಾದವನು ಎಂದು ತಿಳಿದು ಬಂದಿದೆ. ಗ್ರಾಮದ ನಿಂಗರಾಜು ಪತ್ನಿ ಮಂಜುಳರ ಕತ್ತಿನಲ್ಲಿದ್ದ 30 ಗ್ರಾಂ ಚಿನ್ನದ ಮಾಂಗಲ್ಯ ಸರವನ್ನ ಕಸಿದು ಪರಾರಿಯಾಗಿದ್ದಾನೆ. ಈ ವೇಳೆ ಮಂಜುಳಾ ಜೋರಾಗಿ ಚೀರಾಡಿದ ಪರಿಣಾಮ ಗ್ರಾಮಸ್ಥರು ಜೊತೆಗೂಡಿ ಸುಮಾರು 4-5 ಕಿ.ಮೀ. ಗ್ರಾಮದ ಹೊರವಲಯದ ಆಂಜನೇಯಸ್ವಾಮಿ ದೇವಾಲಯದ ಬಳಿ ಅಡ್ಡಗಟ್ಟಿ ಆತನನ್ನು ಹಿಡಿದು ನಂತರ ಗ್ರಾಮಕ್ಕೆ ಕರೆ ತಂದು ಧರ್ಮದೇಟು ನೀಡಿದ್ದಾರೆ. ಬಳಿಕ ಪೊಲೀಸರಿಗೆ ಮಾಹಿತಿ ನೀಡಿದ ಗ್ರಾಮಸ್ಥರು ಆತನನ್ನು ಒಪ್ಪಿಸಿದ್ದಾರೆ. ಆರೋಪಿಯನ್ನು ವಶಪಡಿಸಿಕೊಂಡಿರುವ ಪೊಲೀಸರು ಹೆಚ್ಚಿನ ತನಿಖೆ ನಡೆಸಿ ನ್ಯಾಯಾಂಗ ಬಂಧನಕ್ಕೆ ನೀಡಿದ್ದಾರೆ. ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.