ಸಾರಾಂಶ
ಹಳಿಯಾಳ: ತಾಲೂಕಿನ ಗಡಿಯಾಳ ಗ್ರಾಮದಲ್ಲಿ ಇತ್ತೀಚೆಗೆ ನಡೆದ ಕುರಿಗಳ್ಳತನದ ಪ್ರಕರಣವನ್ನು ಭೇದಿಸುವಲ್ಲಿ ಹಳಿಯಾಳ ಪೊಲೀಸರು ಯಶಸ್ವಿಯಾಗಿದ್ದು, ಕುರಿಗಳ್ಳರನ್ನು ಬಂಧಿಸಿರುವ ಹಳಿಯಾಳ ಪೋಲಿಸರು ಕಳ್ಳತನಕ್ಕೆ ಬಳಸಿದ್ದ ಕಾರು ಹಾಗೂ ಕುರಿಗಳನ್ನು ಜಪ್ತಿ ಮಾಡಿದ್ದಾರೆ.ತಾಲೂಕಿನ ಮುಂಡವಾಡ ಗ್ರಾಮದ ರೆಹಮಾನ್‌ಸಾಬ್ ಮುಕ್ತುಂಸಾಬ್ ಕತಾಲ್ ಎಂಬ ರೈತರ ಗಡಿಯಾಳ ಗ್ರಾಮದ ದನದ ಕೊಟ್ಟಿಗೆಯಲ್ಲಿ ಇದ್ದ ಅಂದಾಜು ₹1.50 ಲಕ್ಷ ಮೌಲ್ಯದ 18 ಕುರಿಗಳು ಕಳ್ಳರು ಕಳೆದ ತಿಂಗಳು 29ರಂದು ಕದ್ದೊಯ್ದ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿತ್ತು.ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ಆರಂಭಿಸಿದ ಹಳಿಯಾಳದ ಪೊಲೀಸರು ಕಳ್ಳರ ಜಾಡನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಧಾರವಾಡ ಜಿಲ್ಲೆಯ ಅಮ್ಮಿನಭಾವಿ ಗ್ರಾಮದ ಯಲ್ಲಪ್ಪ ಪರಶಿರಾಮ ಭಜಂತ್ರಿ ಎಂಬ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ, 16 ಕುರಿಗಳನ್ನು ಹಾಗೂ ಕಳವು ಮಾಡಲು ಬಳಸಿದ ಕಾರನ್ನು ಜಪ್ತಿ ಮಾಡಿ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.ಹಳಿಯಾಳ ಸಿಪಿಐ ಜಯಪಾಲ್ ಪಾಟೀಲ ಮಾರ್ಗದರ್ಶನದಲ್ಲಿ ಹಳಿಯಾಳ ಪಿಎಸ್ಐ ಮಹಾಂತೇಶ ಕುಂಬಾರ ಹಾಗೂ ತನಿಖಾ ವಿಭಾಗದ ಪಿಎಸ್ಐ ಅಮೀನ್ ಅತ್ತಾರ ಅವರ ಮುಂದಾಳತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಎಸ್ಐ ಸುರೇಶ ಘಾಟಗೆ, ಸಿಬ್ಬಂದಿಗಳಾದ ಮಹ್ಮದ್ ಇಸ್ಮಾಯಿಲ್ ಕೋಣನಕೇರಿ, ಎಂ.ಎಂ. ಮುಲ್ಲಾ, ರಾಚ್ಚಪ್ಪ ಧನಗರ, ಶ್ರೀಶೈಲ್ ಜಿ.ಎಂ., ಉಮೇಶ ಹನಗಂಡಿ, ಕಾಶಿನಾಥ ಬಿಳ್ಳೂರ ಮೊದಲಾದವರು ಭಾಗವಹಿಸಿದ್ದರು. ಜಿಲ್ಲಾ ಎಸ್ಪಿ ವಿಷ್ಣುವರ್ಧನ ನ್ ಅವರು ಪ್ರಕರಣ ಪತ್ತೆ ಹಚ್ಚಿದ ಹಳಿಯಾಳ ಪೋಲಿಸರು ಕಾರ್ಯಾಚರಣೆಯನ್ನು ಶ್ಲಾಘಿಸಿದ್ದಾರೆ.
ಹಳೆದ್ವೇಷದಿಂದ ಹಲ್ಲೆ: ದೂರು ದಾಖಲುಹೊನ್ನಾವರ: ಪಟ್ಟಣದ ತಾರಿಬಾಗಿಲಿನಲ್ಲಿ ಹಳೆಯ ದ್ವೇಷದಿಂದ ಸಹೋದರರಿಬ್ಬರಿಗೆ ಆರು ಜನ ಆರೋಪಿತರಿಂದ ಹಲ್ಲೆ ನಡೆಸಿದ ಬಗ್ಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ತಾಲೂಕಿನ ಚಿಕ್ಕೊಳ್ಳಿ ನಿವಾಸಿಗಳಾದ ನಾಗರಾಜ ಲಕ್ಷ್ಮಣ ಗೌಡ, ಕೃಷ್ಣ ಲಕ್ಷ್ಮಣ ಗೌಡ ಪಟ್ಟಣದ ಬಿಕಾಸಿತಾರಿಯಲ್ಲಿ ಬೋಟಿಂಗ್ ದಂಧೆ ನಡೆಸಿ ಜೀವನ ಸಾಗಿಸಿಕೊಂಡಿದ್ದರು. ಈ ಹಿಂದಿನ ಪ್ರಕರಣವೊಂದರಿಂದ ಕುಪಿತರಾಗಿದ್ದ ಆರೋಪಿತರಾದ ಚಿಕ್ಕೊಳ್ಳಿಯ ನಿವಾಸಿ ಜಗ್ಗು ಸೋಮಯ್ಯ ಗೌಡ, ಮಾವಿನಕುರ್ವ ಅಂಗಡಿಹಿತ್ತಲದ ಮಾರುತಿ ಮಾದೇವ ಗೌಡ, ಕಡೇಕೆರಿಯ ಮಾಧೇವ ಕೇಶವ ಗೌಡ, ಅಂಗಡಿಹಿತ್ತಲದ ಅರುಣ ಮಂಜುನಾಥ ಗೌಡ, ಮೋಹನ ತಿಮ್ಮಪ್ಪ ಗೌಡ, ಹರಡಸೆಯ ವಿಘ್ನೇಶ್ವರ ಗಣಪತಿ ಹೆಗಡೆ ಭಾನುವಾರ ನಾಗರಾಜ ಲಕ್ಷ್ಮಣ ಗೌಡ, ಕೃಷ್ಣ ಲಕ್ಷ್ಮಣ ಗೌಡ ಹಾಗೂ ಸತೀಶ ಮಂಜು ಗೌಡ ಮೂವರು ಸೇರಿ ತಾರಿ ಬಾಗಿಲಿನಲ್ಲಿ ಪ್ರವಾಸಿಗರ ಬೋಟಿಂಗ್ ಕೆಲಸದಲ್ಲಿ ತೊಡಗಿದ್ದ ವೇಳೆ ಆಗಮಿಸಿದ್ದಾರೆ.
ಆಗ ಅವಾಚ್ಯವಾಗಿ ಬೈದು, ಕೂಗಾಡಿ ಕೃಷ್ಣ ಗೌಡ ಎಂಬಾತನ ಶರ್ಟ್ ಹಿಡಿದು ಎಳೆದಾಡಿ ರಾಡ್‌ನಿಂದ ಹಲ್ಲೆ ಮಾಡಿದ್ದಾರೆ. ಅಲ್ಲದೇ ಜೀವ ಬೆದರಿಕೆ ಹಾಕಿ ಅಲ್ಲಿಂದ ಕಾರಿನಲ್ಲಿ ತೆರಳಿದ್ದಾರೆ. ಆರೋಪಿತರಿಂದ ಹಲ್ಲೆಗೊಳಗಾದ ನಾಗರಾಜ, ಕೃಷ್ಣ ಮತ್ತು ಸತೀಶ ಸೇರಿ ಒಂದು ರಿಕ್ಷಾದ ಮೇಲೆ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆಗೆ ದಾಖಲಾಗಿದ್ದಾರೆ. ಆರೋಪಿತರು ತಮ್ಮ ಮೇಲಿನ ಹಳೆಯ ದ್ವೇಶದಿಂದ ಹಲ್ಲೆ ಮಾಡಿ ಕೊಲೆ ಮಾಡಲು ಯತ್ನಿಸಿದ್ದಾರೆ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ನಾಗರಾಜ ಗೌಡ ದೂರಿನಲ್ಲಿ ತಿಳಿಸಿದ್ದಾರೆ. ದೂರು ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.