ಸಾರಾಂಶ
ವಿವಿಧ ಮನೆಗಳ ಕಳ್ಳತನ ಪ್ರಕರಣಗಳಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿ ಒಟ್ಟು 3.68 ಲಕ್ಷ ರು. ಮೌಲ್ಯದ ಬಂಗಾರ, ಬೆಳ್ಳಿ ಆಭರಣ ಹಾಗೂ ನಗದು ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ
ಕನ್ನಡಪ್ರಭ ವಾರ್ತೆ ಕಲಬುರಗಿ
ಶಹಾಬಾದ್ ಹಾಗೂ ವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವಿವಿಧ ಮನೆಗಳ ಕಳ್ಳತನ ಪ್ರಕರಣಗಳಲ್ಲಿ ಪೊಲೀಸರು ಇಬ್ಬರನ್ನು ಬಂಧಿಸಿ ಒಟ್ಟು 3.68 ಲಕ್ಷ ರು. ಮೌಲ್ಯದ ಬಂಗಾರ, ಬೆಳ್ಳಿ ಆಭರಣ ಹಾಗೂ ನಗದು ಮತ್ತು ಇತರೆ ವಸ್ತುಗಳನ್ನು ಜಪ್ತಿ ಮಾಡಿದ್ದಾರೆ.ಸದರಿ ಪ್ರಕರಣಗಳಲ್ಲಿ ಮೂಲತಃ ತುಳಜಾಪುರದ ನಿವಾಸಿ ಹಾಗೂ ಹಾಲಿ ವಸ್ತಿ ಶಹಾಬಾದ್ ಹನುಮಾನ್ ನಗರದ ನೇತಾಜಿ ತಂದೆ ಬಾಪುರಾವ್ ಸಾವಳಂಕೆ ಹಾಗೂ ಭಂಕೂರಿನ ನಾಮದೇವ್ ಅಲಿಯಾಸ್ ಬಬ್ಲು ತಂದೆ ರಮೇಶ್ ಪವಾರ್ ಅವರನ್ನು ಬಂಧಿಸಿ, ಅವರಿಂದ 57 ಗ್ರಾಂ. ತೂಕದ ಬಂಗಾರದ ಆಭರಣಗಳು, 140 ಗ್ರಾಂ ತೂಕದ ಬೆಳ್ಳಿ ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ಶಹಾಬಾದ್ ನಗರ ಠಾಣೆಯ ನಾಲ್ಕು ಪ್ರಕರಣಗಳು ಮತ್ತು ವಾಡಿ ಪೊಲೀಸ್ ಠಾಣೆಯ ಒಂದು ಪ್ರಕರಣ ಬೇಧಿಸಿ ಸದರಿ ಆರೋಪಿತರಿಗೆ ಮಂಗಳವಾರ ದಸ್ತಗಿರಿ ಮಾಡಿ ನ್ಯಾಯಾಂಗ ವಶಕ್ಕೆ ಒಪ್ಪಿಸಲಾಗಿದೆ ಎಂದು ಪೊಲೀಸರು ಹೇಳಿದರು.ಕಳೆದ 2ರಂದು ಶಹಾಬಾದ್‍ನ ಹನುಮಾನ್ ನಗರದ ನಿವಾಸಿ ಸುಮಿತ್ರಾಬಾಯಿ ಗಂಡ ಈರಣ್ಣ ಗಿರಣಿ ಠಾಣೆಗೆ ದೂರು ಸಲ್ಲಿಸಿ, ಬೆಳಗಿನ ಜಾವ ನಾಲ್ಕು ಗಂಟೆ ಅವಧಿಯಲ್ಲಿ ಯಾರೋ ಕಳ್ಳರು ಮನೆಯ ಕೊಂಡಿ ಮುರಿದು 10 ಗ್ರಾಂ ತೂಕದ ಎರಡು ಬಂಗಾರದ ಸುತ್ತುಂಗುರುಗಳು, 8 ಗ್ರಾಂ ತೂಕದ ಒಂದು ಬಂಗಾರದ ಬೋರಮಾಳ್, ನಗದು ಹತ್ತು ಸಾವಿರ ರು. ಹಾಗೂ ಮನೆಯ ಗೃಹ ಬಳಕೆ ಕೊಡ, ಹಂಡೆ, ಸೇರಿ ಬೆಲೆಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗಿದ್ದರು.