ಹಳಿಯಾಳ ಬಳಿ ಅಕ್ರಮವಾಗಿ ಸಾಗುವಾನಿ ತುಂಡು ಸಾಗಿಸುತ್ತಿದ್ದ ಕಳ್ಳರ ಸೆರೆ

| Published : Dec 07 2024, 12:30 AM IST

ಹಳಿಯಾಳ ಬಳಿ ಅಕ್ರಮವಾಗಿ ಸಾಗುವಾನಿ ತುಂಡು ಸಾಗಿಸುತ್ತಿದ್ದ ಕಳ್ಳರ ಸೆರೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳ್ಳತನಕ್ಕೆ ಬಳಸಿದ ಬೂಲೆರೂ ಪಿಕ್ಅಪ್ ವಾಹನ, ಮಾರುತಿ ಸ್ವಿಪ್ಟ್ ಕಾರು, ದ್ವಿಚಕ್ರ ವಾಹನವನ್ನು ಹಾಗೂ ಗರಗಸ ಮತ್ತು 8 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದರಲ್ಲದೇ ಹತ್ತು ಆರೋಪಿಗಳನ್ನು ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಹಳಿಯಾಳ: ಅಕ್ರಮವಾಗಿ ಸಾಗುವಾನಿ ಮರದ ತುಂಡು ಸಾಗಾಟ ಮಾಡುತ್ತಿದ್ದ 10 ಜನ ಅರಣ್ಯಗಳ್ಳರನ್ನು ವಾಹನ ಸಮೇತ ಬಂಧಿಸುವಲ್ಲಿ ಹಳಿಯಾಳ ಅರಣ್ಯ ವಿಭಾಗದ ಸಾಂಬ್ರಾಣಿ ವಲಯದ ಸಿಬ್ಬಂದಿ ಯಶಸ್ವಿಯಾಗಿದ್ದು, ಅಂದಾಜು ₹10 ಲಕ್ಷ ಮೌಲ್ಯದ ಅರಣ್ಯ ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ.

ಸಾಂಬ್ರಾಣಿ ವಲಯ ಅರಣ್ಯಾಧಿಕಾರಿ ಸಂಗಮೇಶ ಪಾಟೀಲ ಅವರು ಕಾರ್ಯಾಚರಣೆಯ ನೇತೃತ್ವವನ್ನು ವಹಿಸಿದ್ದರು. ಖಚಿತ ಮಾಹಿತಿ ಮೇರೆಗೆ ಹಳಿಯಾಳ ಡಿಸಿಎಫ್‌ ಪ್ರಶಾಂತ ಕೆ.ಸಿ. ಅವರ ಮಾರ್ಗದರ್ಶನದಲ್ಲಿ ಕಾರ್ಯಾಚರಣೆಗಿಳಿದ ವಲಯ ಅರಣ್ಯಾಧಿಕಾರಿ ಸಂಗಮೇಶ ಪಾಟೀಲ ಅವರು ಅಜಮನಾಳ ತಾಂಡಾ ಮತ್ತು ಕಾಳಗಿನಕೊಪ್ಪ ಕ್ರಾಸ್‌ ಬಳಿ ತನ್ನ ತಂಡವನ್ನು ಬಂದೋಬಸ್ತಗಾಗಿ ಇರಿಸಿದರು.

ನಿರೀಕ್ಷಿಸಿದಂತೆ ಕೆಲಹೊತ್ತಿನ ನಂತರ ಅದೇ ಮಾರ್ಗದಲ್ಲಿ ಬರುತ್ತಿದ್ದ ವಾಹನಗಳನ್ನು ಹಿಡಿದು ತಪಾಸಣೆ ನಡೆಸಿದಾಗ ಅದರಲ್ಲಿ ಸಾಗವಾನಿ ದಿಮ್ಮಿಗಳು ಪತ್ತೆಯಾದವು. ಕಳ್ಳತನಕ್ಕೆ ಬಳಸಿದ ಬೂಲೆರೂ ಪಿಕ್ಅಪ್ ವಾಹನ, ಮಾರುತಿ ಸ್ವಿಪ್ಟ್ ಕಾರು, ದ್ವಿಚಕ್ರ ವಾಹನವನ್ನು ಹಾಗೂ ಗರಗಸ ಮತ್ತು 8 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದರಲ್ಲದೇ ಹತ್ತು ಆರೋಪಿಗಳನ್ನು ಹಿಡಿದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ. ತಲೆಮರೆಸಿಕೊಂಡ ನಾಲ್ವರು ಆರೋಪಿಗಳ ಪತ್ತೆಗಾಗಿ ಶೋಧ ಮುಂದುವರಿಸಲಾಗಿದೆ. ಕಾರ್ಯಾಚರಣೆಯಲ್ಲಿ ಸಾಂಬ್ರಾಣಿ ವಲಯದ ಸಿಬ್ಬಂದಿಗಳಾದ ಬಸವರಾಜ ಪೂಜಾರಿ, ಚಿದಾನಂದ ಬಡಿಗೇರ, ಷಣ್ಮುಖ ಹವಳಗಿ, ಮಹಾಂತೇಶ ಬಳಬಟ್ಟಿ, ಹನುಮಂತ ಚೌಗಲಾ, ವಿಠ್ಠಲ ಶೋಧೆನ್ನವರ, ರೇವಣಸಿದ್ದ, ಸಲೀಮ ರೋಣದ, ಈರಪ್ಪ ಹೊಂಗಲ, ವಿನಾಯಕ ಸೊಲಬಣ್ಣವರ, ಜೆ.ಎಚ್. ಮುಲ್ಲಾ ಪಾಲ್ಗೊಂಡಿದ್ದರು.ಬಾಲಕಿ ಮೇಲೆ ಅತ್ಯಾಚಾರ: ಅಪರಾಧಿಗೆ 20 ವರ್ಷ ಜೈಲು

ದಾಂಡೇಲಿ: ಬಾಲಕಿಯ ಅಶ್ಲೀಲ ಫೋಟೋ ತೆಗೆದು ಅದನ್ನು ಬಹಿರಂಗಪಡಿಸುವುದಾಗಿ ಬೆದರಿಸಿ ಅತ್ಯಾಚಾರ ಮಾಡಿದ್ದ ಅಪರಾಧಿಗೆ ಕಾರವಾರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ೨೦ ವರ್ಷ ಸಜೆ, ₹೧ ಲಕ್ಷ ದಂಡ ವಿಧಿಸಿದೆ.ಬಾಲವೆಂಚರ್ ಡುಮಿಂಗ್ ಫರ್ನಾಂಡಿಸ್‌(೧೯) ಎಂಬಾತನೇ ಶಿಕ್ಷೆಗೊಳಗಾದ ಅಪರಾಧಿ. ಈತ ಬಾಲಕಿಗೆ ಪ್ರೀತಿಸುತ್ತೇನೆ, ಮದುವೆಯಾಗುತ್ತೇನೆ ಎಂದು ಹೇಳುತ್ತಾ 2021ರ ಜ. 31ರಂದು ಬಾಲಕಿಯ ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಗಮನಿಸಿ ಆಕೆಯ ಅಶ್ಲೀಲ ಫೋಟೊ ತೆಗೆದಿದ್ದಾನೆ. ಅದನ್ನು ನಿಮ್ಮ ತಂದೆಗೆ ತೋರಿಸುತ್ತೇನೆ ಎಂದು ಬೆದರಿಸಿದ್ದಾನೆ. ಮರುದಿನ ಬಾಲಕಿಯ ಮನೆಗೆ ಆಗಮಿಸಿ ಅತ್ಯಾಚಾರ ಮಾಡಿದ್ದಾನೆ. ಅಲ್ಲದೇ ಅಶ್ಲೀಲ ಫೋಟೊಗಳನ್ನು ಮೊಬೈಲ್‌ ಸ್ಟೇಟಸ್‌ನಲ್ಲಿ ಹಾಕಿದ್ದ. ಈ ಕುರಿತು ಅಂದಿನ ಪಿಎಸ್‌ಐ ಮಹಾದೇವಿ ನಾಯ್ಕೋಡಿ ತನಿಖೆ ಕೈಗೊಂಡಿದ್ದರು. ನಂತರ ಅಂದಿನ ಸಿಪಿಐ ಪ್ರಭು ಗಂಗನಹಳ್ಳಿ ಪೂರ್ಣಪ್ರಮಾಣದ ತನಿಖೆ ಕೈಗೊಂಡು ಆಪಾದಿತ ಬಾಲವೆಂಚರ್ ಡುಮಿಂಗ್‌ ಫರ್ನಾಂಡಿಸ್ ವಿರುದ್ಧ ದೋಷಾರೋಪಣ ಪಟ್ಟಿ ತಯಾರಿಸಿ ಕಾರವಾರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಕಾರವಾರದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಅಪರಾಧಿಗೆ ೨೦ ವರ್ಷ ಸಜೆ ₹೧ ಲಕ್ಷ ದಂಡ ವಿಧಿಸಿದೆ. ಸರ್ಕಾರದ ಪರವಾಗಿ ಶುಭ ಆರ್. ಗಾಂವಕರ, ತನುಜಾ ಬಿ. ಹೊಪಟ್ಟಣ ವಾದ ಮಂಡಿಸಿದ್ದರು.