ಕನ್ನಡಪ್ರಭ ವಾರ್ತೆ ನಿಪ್ಪಾಣಿ ನಿಪ್ಪಾಣಿ ಪಟ್ಟಣದಲ್ಲಿ ಕಳೆದ ಒಂದು ವಾರದಲ್ಲಿ ಅಷ್ಟವಿನಾಯಕ ನಗರ, ಪಂತ್‌ನಗರ, ಶಿವಾಜಿನಗರ, ಬಿರೋಬಾ ಮಾಳ ಮತ್ತು ಚಿಕ್ಕೋಡಿ ರಸ್ತೆಯಲ್ಲಿರುವ ಸಂಕೀರ್ಣಗಳಲ್ಲಿ ಕಳ್ಳತನ ಪ್ರಕರಣಗಳು ನಡೆದಿವೆ.
ಕನ್ನಡಪ್ರಭ ವಾರ್ತೆ ನಿಪ್ಪಾಣಿ
ನಿಪ್ಪಾಣಿ ಪಟ್ಟಣದಲ್ಲಿ ಕಳೆದ ಒಂದು ವಾರದಲ್ಲಿ ಅಷ್ಟವಿನಾಯಕ ನಗರ, ಪಂತ್‌ನಗರ, ಶಿವಾಜಿನಗರ, ಬಿರೋಬಾ ಮಾಳ ಮತ್ತು ಚಿಕ್ಕೋಡಿ ರಸ್ತೆಯಲ್ಲಿರುವ ಸಂಕೀರ್ಣಗಳಲ್ಲಿ ಕಳ್ಳತನ ಪ್ರಕರಣಗಳು ನಡೆದಿವೆ.ಶನಿವಾರ ಮಧ್ಯರಾತ್ರಿ 2 ಗಂಟೆ ಸುಮಾರಿನಲ್ಲಿ ನಗರದ ಮಧ್ಯಭಾಗದಲ್ಲಿರುವ ಮಾನೆ ಪ್ಲಾಟ್‌ನಲ್ಲಿನ ಶಿಕ್ಷಕರೊಬ್ಬರ ಮನೆಗೆ ಕಳ್ಳರು ನುಗ್ಗಲು ವಿಫಲ ಯತ್ನ ನಡೆಸಿದ್ದಾರೆ. ಕಳ್ಳರು ಮುಖಗಳನ್ನು ಟೋಪಿ ಮತ್ತು ಕರವಸ್ತ್ರದಿಂದ ಮುಚ್ಚಿಕೊಂಡಿದ್ದು, ಮನೆಗೆ ನುಗ್ಗಲು ಪ್ರಯತ್ನಿಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಈ ಬಗ್ಗೆ ತಿಳಿದ ಕೂಡಲೇ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಆಗಮಿಸುತ್ತಿದ್ದಂತೆ ಎಚ್ಚರಗೊಂಡ ಕಳ್ಳರು ತಪ್ಪಿಸಿಕೊಂಡು ಪರಾರಿಯಾಗಲು ಪ್ರಯತ್ನಿಸಿದರು. ಆದರೆ, ಅದೇ ಸಮಯಕ್ಕೆ ಪೊಲೀಸ್ ಬೈಕ್ ವಾಪಸ್ ಬಂದಿದ್ದು, ನಾಲ್ವರು ಕಳ್ಳರು ಸಿಕ್ಕಿಹಾಕಿಕೊಂಡಿದ್ದಾರೆ. ಈ ವೇಳೆ ಪೊಲೀಸ್ ಸಿಬ್ಬಂದಿಗೆ ಆಯುಧಗಳಿಂದ ಹೆದರಿಸಿ, ಹಲ್ಲೆಗೆ ಯತ್ನಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಈ ಸಂಪೂರ್ಣ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಈ ರೀತಿಯ ನಿರಂತರ ಕಳ್ಳತನ ಘಟನೆಗಳು ನಾಗರಿಕರಲ್ಲಿ ಆತಂಕ ಹುಟ್ಟಿಸಿವೆ. ಪೊಲೀಸ್ ಸಿಬ್ಬಂದಿ ಮತ್ತು ಹಿರಿಯ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕಳ್ಳರನ್ನು ಹಿಡಿಯಲು ಮುಂದಾಗಬೇಕು ಎಂದು ನಗರದ ಸಾರ್ವಜನಿಕರು ಮನವಿ ಮಾಡಿದ್ದಾರೆ.---
ಕೋಟ್ನಗರದಲ್ಲಿ ಇತ್ತೀಚೆಗೆ ಕಳ್ಳತನ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರಲ್ಲಿ ಭಯದ ವಾತಾವರಣ ಉಂಟಾಗಿದೆ. ಪೊಲೀಸ್ ಇಲಾಖೆ ಇದನ್ನು ಗಂಭೀರವಾಗಿ ಪರಿಗಣಿಸಿ ರಾತ್ರಿ ಗಸ್ತ್‌ನ್ನು ಹೆಚ್ಚಿಸಬೇಕು. ಅಲ್ಲದೆ, ಪೊಲೀಸರಿಗೂ ಸ್ವರಕ್ಷಣೆಗಾಗಿ ಹೆಚ್ಚಿನ ಆಯುಧಗಳನ್ನು ನೀಡಬೇಕು. ಕಳ್ಳರನ್ನು ಶೀಘ್ರ ಬಂಧಿಸಿ ಜನರ ಆತಂಕ ದೂರ ಮಾಡಬೇಕು.
ಮಹಾದೇವ ಗೋಕಾರ್, ಸರ್ಕಾರಿ ನೌಕರರ ಸಂಘದ ನಿಪ್ಪಾಣಿ ತಾಲೂಕು ಅಧ್ಯಕ್ಷರು.