ಜಾತ್ರೆಗೆ ಹೋಗಲೆಂದು ಬೈಕ್‌ ಕದ್ದ ಕಳ್ಳರು!

| Published : Jul 20 2024, 12:51 AM IST

ಸಾರಾಂಶ

ಜಾತ್ರೆ ಮುಗಿದ್ಮೇಲೆ ಬಾವಿಗೆ ಬಿಸಾಕಿದರು. ಸ್ವಗ್ರಾಮವಾದ ಭೂಸನೂರನಲ್ಲಿಯೇ ಕಳ್ಳತನಕ್ಕಿಳಿದಿದ್ದ 6 ಮಂದಿ ಸೆರೆ. 10 ಬೈಕ್​, 2 ಟ್ರ್ಯಾಕ್ಟರ್ ಸೇರಿ ರು. 14 ಲಕ್ಷದ ಸ್ವತ್ತು ಜಪ್ತಿ ಮಾಡಿದ ಪೊಲೀಸರು.

ಕನ್ನಡಪ್ರಭ ವಾರ್ತೆ ಕಲಬುರಗಿ

ಜಿಲ್ಲೆಯ ಆಳಂದ ತಾಲೂಕಿನ ನಿಂಬರ್ಗಾ ಪೊಲೀಸ್ ಠಾಣಾ ವ್ಯಾಪ್ತಿಯ ಭೂಸನೂರ ಗ್ರಾಮದಲ್ಲಿ ದ್ವಿಚಕ್ರ ವಾಹನಗಳು, ಟ್ರ್ಯಾಕ್ಟರ್​ಗಳನ್ನು ಕದ್ದು ತಲೆಮರೆಸಿಕೊಳ್ಳುತ್ತಿದ್ದ ಸ್ವಗ್ರಾಮದವರೆ ಆದ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಭೂಸನೂರ ಗ್ರಾಮದ ಪೃಥ್ವಿ ಅಲಿಯಾಸ್ ಪೃಥ್ವಿರಾಜ ಬೀಳಗಿ, ಮಹಿಬೂಬ ಬಾಗವಾನ, ರಾಹುಲ್ ಕ್ಷೇತ್ರಿ, ಮುನ್ನಾ ಅಲಿಯಾಸ್ ಮಹ್ಮದ ರಫಿ ಬಾಗವಾನ, ಕರೀಮ ಬಾಗವಾನ ಹಾಗೂ ಅಮೀನ್​ ಬಾಗವಾನ ಎಂಬುವರೇ ಬಂಧಿತ ಆರೋಪಿಗಳು. ಇವರೆಲ್ಲರೂ 19 ರಿಂದ 27 ವರ್ಷದೊಳಗಿನ ಖದೀಮರಾಗಿದ್ದು, 10 ಬೈಕ್​, 2 ಟ್ರ್ಯಾಕ್ಟರ್, 3 ಟ್ರ್ಯಾಕ್ಟರ್ ಟ್ರೈಲರ್‌ ಸೇರಿದಂತೆ ಒಟ್ಟು ಅಂದಾಜು 14 ಲಕ್ಷ ರು. ಮೌಲ್ಯದ ಸ್ವತ್ತು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕಳೆದೆರಡು ತಿಂಗಳಲ್ಲಿ ಆರೋಪಿಗಳು ತಮ್ಮ ಸ್ವಗ್ರಾಮವಾದ ಭೂಸನೂರನಲ್ಲಿಯೇ ಬೈಕ್ ಹಾಗೂ ಟ್ರ್ಯಾಕ್ಟರ್ ಕದ್ದು ಸ್ಥಳೀಯರಿಗೆ ತೆಲೆ ನೋವಾಗಿ ಕಾಡಲಾರಂಭಿಸಿದ್ದರು. ಜಪ್ತಿ ಮಾಡಿದ ಟ್ರ್ಯಾಕ್ಟರ್ ಹಾಗೂ ಟ್ರೈಲರ್‌ಗಳು ಮತ್ತು 10 ಬೈಕ್​ಗಳಲ್ಲಿ 1 ಬೈಕ್ ಭೂಸನೂರ ಗ್ರಾಮದವರದ್ದಾಗಿದೆ. ಇನ್ನುಳಿದ 9 ಬೈಕ್​ಗಳ ವಾರಸುದಾರರನ್ನು ಪತ್ತೆ ಮಾಡಬೇಕಿದೆ.

ಭೂಸನೂರ ಗ್ರಾಮದಲ್ಲಿ ಹಲವು ವಾಹನಗಳ ಕಳವು ಪ್ರಕರಣಗಳು ದಾಖಲಾಗಿದ್ದವು. ಆದ್ದರಿಂದ ಎಸ್ಪಿ ಅಡ್ಡೂರು ಶ್ರೀನಿವಾಸಲು, ಎಎಸ್ಪಿ ಶ್ರೀನಿಧಿ, ಆಳಂದ ಉಪವಿಭಾಗದ ಡಿಎಸ್ಪಿ ಗೋಪಿ ಆರ್, ಸಿಪಿಐ ಪ್ರಕಾಶ ಯಾತನೂರ ಮಾರ್ಗದರ್ಶನದಲ್ಲಿ ನಿಂಬರ್ಗಾ ಠಾಣೆ ಪಿಎಸ್ಐ ವಾತ್ಸಲ್ಯ, ತನಿಖಾ ವಿಭಾಗದ ಪಿಎಸ್ಐ ಬಸವರಾಜ ಸಣಮನಿ, ಎಎಸ್ಐ ಸಂಜೀವರೆಡ್ಡಿ ಹಾಗೂ ಸಿಬ್ಬಂದಿ ತನಿಖೆ ಕೈಗೊಂಡು ಖತರ್ನಾಕ್‌ ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ.ಬಾವಿಯಲ್ಲಿ ಬೈಕ್​ ಪತ್ತೆ: ಆರೋಪಿಗಳು ಜಾತ್ರೆಗೆ ಹೋಗಲೆಂದು ಬೈಕ್ ಕಳವು ಮಾಡಿದ್ದರು ಅನ್ನೋ ಮಾಹಿತಿ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ಪಕ್ಕದ ಗ್ರಾಮದಲ್ಲಿ ದರ್ಗಾ ಜಾತ್ರೆಗೆ ಹೋಗಲು ಭೂಸನೂರ ಗ್ರಾಮದಲ್ಲಿ ಬೈಕ್ ಕಳವು ಮಾಡಿದ್ದ ಆರೋಪಿಗಳು, ಅದೇ ಬೈಕ್​ನಲ್ಲಿ ವಾಪಸ್ ಭೂಸನೂರ ಗ್ರಾಮಕ್ಕೆ ಬರುವಾಗ ಹೊರವಲಯದಲ್ಲಿರುವ ಜಮೀನಿನಲ್ಲಿನ ಬಾವಿಗೆ ಎಸೆದಿದ್ದರು. ವಿಚಾರಣೆ ವೇಳೆ ಆರೋಪಿಗಳು, ಈ ಬೈಕ್ ಬಿಸಾಡಿರುವುದಾಗಿ ಬಾಯ್ಬಿಟ್ಟಿದ್ದರು.

ಆರೋಪಿಗಳ ಹೇಳಿಕೆಯಂತೆಯೇ ಕ್ರೇನ್ ಸಹಾಯದಿಂದ ಪೊಲೀಸರು ಬೈಕ್ ಹೊರಗೆ ತೆಗೆದಿದ್ದಾರೆ. ಗ್ರಾಮದಲ್ಲಿ ಯಾರಾದರೂ ಎದುರು ಹಾಕಿಕೊಂಡರೆ ಅಥವಾ ಹೊಸ ವಾಹನಗಳು ಕಂಡರೆ ಆರೋಪಿಗಳು ಅವುಗಳನ್ನು ಕಳವು ಮಾಡುತ್ತಿದ್ದರು. ಕದ್ದ ವಾಹನ ಕಡಿಮೆ ಬೆಲೆಗೆ ಮಾರಾಟ ಮಾಡುವುದು, ಇಲ್ಲವೆ ಎಲ್ಲಾದ್ರೂ ದೂರ ಬಿಟ್ಟು ಬರುವುದು ಮಾಡುತ್ತಿದ್ದರು ಎಂಬ ಅಂಶ ವಿಚಾರಣೆಯಲ್ಲಿ ಬಯಲಾಗಿದೆ.