ಹಾವೇರಿ ನಗರದ ನಾಗೇಂದ್ರನ ಮಟ್ಟಿಯಲ್ಲಿ ಒಂದೇ ದಿನ ಏಳು ಮನೆಗಳಲ್ಲಿ ಕಳ್ಳತನ ಮಾಡಿ, ಚಳಿಯೆಂದು ಚಹಾ ಕಾಯಿಸಿ ಕುಡಿದು ಹೋಗಿದ್ದ ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಹಾವೇರಿ: ನಗರದ ನಾಗೇಂದ್ರನ ಮಟ್ಟಿಯಲ್ಲಿ ಒಂದೇ ದಿನ ಏಳು ಮನೆಗಳಲ್ಲಿ ಕಳ್ಳತನ ಮಾಡಿ, ಚಳಿಯೆಂದು ಚಹಾ ಕಾಯಿಸಿ ಕುಡಿದು ಹೋಗಿದ್ದ ಕಳ್ಳರನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ದಾವಣಗೆರೆಯ ಇರ್ಫಾನ್ ಅಲಿಯಾಸ್ ಇರ್ಫಾನ್‌ಶೇಖ ಅಲಿಯಾಸ್ ಗುಜರಿ ಇರ್ಫಾನ್ ತಂದೆ ದಿ.ಫಜಲುಸಾಬ ಮತ್ತು ದಾದಾಫೀರ ಅಲಿಯಾಸ್ ದಾದಾಫೀರ ಲಂಬು ತಂದೆ ದಿ.ಫಜಲುಸಾಬ್ ಬಂಧಿತರು. ಬಂಧಿತರಿಂದ 2.27 ಲಕ್ಷ ರು. ಮೌಲ್ಯದ ಬಂಗಾರ ಮತ್ತು ಬೆಳ್ಳಿಯ ಆಭರಣಗಳು, 20 ಸಾವಿರ ರು. ಮೌಲ್ಯದ ಮೊಬೈಲ್ ಫೋನ್ ಹಾಗೂ 3590 ರು. ನಗದು ಹಣ ಮತ್ತು ಕೃತ್ಯಕ್ಕೆ ಬಳಸಿದ 2 ಲಕ್ಷ ರು ಮೌಲ್ಯದ ಒಂದು ಆಟೋ ರಿಕ್ಷಾ ಸೇರಿದಂತೆ ಒಟ್ಟು 4.50 ಲಕ್ಷ ರು. ಮೌಲ್ಯದ ಸ್ವತ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದ್ದು, ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಶೋದಾ ವಂಟಗೋಡಿ ಅವರು ಹೆಚ್ಚುವರಿ ಎಸ್ಪಿ ಎಲ್.ವೈ.ಶಿರಕೋಳ ಮತ್ತು ಹಾವೇರಿ ವಿಭಾಗದ ಡಿವೈಎಸ್‌ಪಿ ಎಂ.ಎಸ್.ಪಾಟೀಲ ಅವರ ನೇತೃತ್ವದಲ್ಲಿ ಹಾವೇರಿ ಶಹರ ಠಾಣೆಯ ಉಸ್ತುವಾರಿ ಅಧಿಕಾರಿ ಸಿಪಿಐ ಮೋತಿಲಾಲ ಪವಾರ, ಶಹರ ಠಾಣೆಯ ಪಿಎಸ್‌ಐರವರಾದ ನಾಗರಾಜ ಟಿ.ಎಂ, ಎನ್.ಎನ್. ಶಿಶುವಿನಹಾಳ, ಎಂ.ಜಿ. ವಗ್ಗಣ್ಣವರ, ಬಿ.ಜಿ. ದೊಡ್ಡಮನಿ ಅವರನ್ನು ಒಳಗೊಂಡ ವಿಶೇಷ ತಂಡವನ್ನು ರಚಿಸಿದ್ದರು.ಕಳೆದ ಡಿ.23ರಂದು ತಡರಾತ್ರಿ ನಾಗೇಂದ್ರನಮಟ್ಟಿಯ ಏಳು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿತ್ತು. ಬೀಗ ಹಾಕಿದ ಮನೆಗಳನ್ನೆ ಟಾರ್ಗೆಟ್ ಮಾಡಿ ಆರೋಪಿಗಳು ಕಳ್ಳತನ ಮಾಡಿ ಪರಾರಿ ಆಗಿದ್ದರು. ರಾತ್ರಿ ಕಳೆದು ಬೆಳಗಾಗುತ್ತಲೇ ನಾಗೇಂದ್ರನಮಟ್ಟಿಯ ಜನರು ಸರಣಿ ಮನೆ ಕಳ್ಳತನ ಪ್ರಕರಣದಿಂದ ಮನೆಗಳ ಸರಣಿ ಕಳ್ಳತನಕ್ಕೆ ಬಂದಿದ್ದ ಕಳ್ಳರು ಸುಲೇಮಾನ್ ಎಂಬುವರ ಮನೆಯಲ್ಲಿ ಚಹಾ ಮಾಡಿಕೊಂಡು ಕುಡಿದು, ಟೋಸ್ಟ್ ತಿಂದು ಪರಾರಿ ಆಗಿದ್ದರು. ನಾಗೇಂದ್ರಮಟ್ಟಿಯ ನಾಗರಾಜ್ ಕುಂಬಾರ, ಫಾತೀಮಾ ನದಾಫ, ನೂರಜಾನ್ ಮತ್ತು ಸಲ್ಮಾ ಬೇವಿನಹಳ್ಳಿ, ಬೀರೇಶ ಸೇರಿದಂತೆ ಒಟ್ಟು ಏಳು ಮನೆಗಳಲ್ಲಿ ಸರಣಿ ಕಳ್ಳತನ ನಡೆದಿತ್ತು.