ಕಲಾದಗಿಯ ಲಾರಿ ಚಾಲಕ ಕೊಲ್ಲಾಪುರಕ್ಕೆ ಸಾಗಿಸುತ್ತಿದ್ದ 25 ಟನ್‌ ಅಕ್ಕಿಯನ್ನು ಮಾರ್ಗಮಧ್ಯೆ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಿಂಗಪುರ ಠಾಣೆ ಪೊಲೀಸರು 8 ಜನ ಆರೋಪಿಗಳನ್ನು ಬಂಧಿಸಿ ಬಂಧಿತರಿಂದ ಅಕ್ಕಿ ಮಾರಾಟದಿಂದ ಬಂದ ₹3.90 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಹಾಲಿಂಗಪುರ

ಕಲಾದಗಿಯ ಲಾರಿ ಚಾಲಕ ಕೊಲ್ಲಾಪುರಕ್ಕೆ ಸಾಗಿಸುತ್ತಿದ್ದ 25 ಟನ್‌ ಅಕ್ಕಿಯನ್ನು ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾಲಿಂಗಪುರ ಠಾಣೆ ಪೊಲೀಸರು 8 ಜನ ಆರೋಪಿಗಳನ್ನು ಬಂಧಿಸಿ ಬಂಧಿತರಿಂದ ಅಕ್ಕಿ ಮಾರಾಟದಿಂದ ಬಂದ ₹3.90 ಲಕ್ಷ ನಗದು ವಶಪಡಿಸಿಕೊಂಡಿದ್ದಾರೆ.

ಜಮಖಂಡಿ ನಗರದ ಸಂಜು ವಿಠ್ಠಲ ಕಡಕೋಳ (೨೮), ಮೈಗೂರ ಗ್ರಾಮದ ಸಂಗಮೇಶ ಕಾಂಬಳೆ (೩೯), ವಿಶ್ವನಾಥ ಉರ್ಫ ಬುಲ್ಲಿ ಪ್ರಭುಲಿಂಗ ಲಗಳಿ (೨೯) ಜಮಖಂಡಿ ನಗರದ ಸಂತೋಷ ಕಾಂಬಳೆ (೩೧), ವಿಜಯಪುರ ಪಟ್ಟಣದ ಜಾಕೀರಹುಸೇನ್‌ ಮಕಾಂದಾರ (೨೬) ಫಯಾಜ್‌ ಮಕಾಂದಾರ ( ೨೩) ಸಚೀನ ನಾಯಿಕೊಡಿ (೨೫) ಅರ್ಪಾತ್‌ ತಾಳಿಕೋಟಿ (೨೨) ಬಂಧಿತರು. ಇಬ್ಬರು ಪರಾರಿಯಾಗಿದ್ದು, ಬಂಧನಕ್ಕೆ ಬಲೆ ಬೀಸಿದ್ದಾರೆ.

ಘಟನೆ ಹಿನ್ನೆಲೆ:

ಜ.೧೦ರಂದು ₹೬,೧೨.೫೦೦ ಮೌಲ್ಯದ ೨೫ ಟನ್ ಅಕ್ಕಿಯನ್ನು ಲಾರಿಯಲ್ಲಿ ಲೋಡ್ ಮಾಡಿಕೊಂಡು ಗಂಗಾವತಿಯಿಂದ ಕೊಲ್ಲಾಪುರಕ್ಕೆ ಸಾಗಿಸುತ್ತಿದ್ದಾಗ ಸೈದಾಪುರ ಬಳಿ ಬಣ್ಣದ ಸ್ಕಾರ್ಪಿಯೋದಲ್ಲಿ ಬಂದ ದುಷ್ಕರ್ಮಿಗಳು ಲಾರಿ ಅಡ್ಡಗಟ್ಟಿ ಹಲ್ಲೆ ನಡೆಸಿ ಲಾರಿ ಜತೆಗೆ ಚಾಲಕನನ್ನು ಅಪಹರಿಸಿಕೊಂಡು ಹೋಗಿ ಅಕ್ಕಿ ಚೀಲವನ್ನು ಬೇರೆ ವಾಹನಕ್ಕೆ ಶಿಫ್ಟ್‌ ಮಾಡಿ ಲಾರಿಯೊಂದಿಗೆ ಚಾಲಕನನ್ನು ಕಾಗವಾಡ ಬಳಿ ಬಿಟ್ಟು ಪರಾರಿಯಾದ ಬಗ್ಗೆ ಜ.17ರಂದು ಲಾರಿ ಚಾಲಕ ಬಾಬಾಸಾಬ ಹಸನ್‌ ಡೋಂಗ್ರಿ ರಾಮದುರ್ಗ ಇವರು ಮಹಾಲಿಂಗಪುರ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಪ್ರಕರಣ ಭೇದಿಸಲು ಐಪಿಎಸ್ ಸಿದ್ದಾರ್ಥ ಗೋಯಲ್ ಮತ್ತು ಜಿಲ್ಲಾ ಎಸ್ಪಿ ಪ್ರಸನ್ನಕುಮಾರ್‌ ಹಾಗೂ ಜಮಖಂಡಿ ಡಿವೈಎಸ್ಪಿ ರೋಷನ್‌ ಜಮೀರ್‌ ಮಾರ್ಗದರ್ಶನದಲ್ಲಿ ತನೀಖಾಧಿಕಾರಿಗಳಾಧ ಸಿಪಿಐ ಎಚ್.ಆರ್ ಪಾಟೀಲ ನೇತೃತ್ವದಲ್ಲಿ ಪಿ.ಎಸ್. ಐಗಳಾದ ಕಿರಣ ಸತ್ತಿಗೇರಿ, ಶಿವಾನಂದ ಸಿಂಗನ್ನವರ ತಂಡವನ್ನು ರಚಿಸಲಾಗಿತ್ತು. ತಂಡ ಎಸ್.ಕೆ ಎಂದು ಬರೆದ ಇನ್ನೋವಾ ವಾಹನ ಜಾಲ ಹಿಡಿದು ಮೂರ್ನಾಲ್ಕು ದಿನಗಳ ಹಿಂದೆ ಆರೋಪಿತರಾದ ಸಂಜು, ಸಂಗಮೇಶ, ವಿಶ್ವನಾಥ, ಸಂತೋಷ ಅವರನ್ನು ಬಂಧಿಸಿ ಅಕ್ಕಿ ಮಾರಾಟ ಮಾಡಿ ಬಂದ ಹಣ ₹೯೦ ಸಾವೀರ ವಶವಡಿಸಿಕೊಂಡಿದ್ದರು. ಬಂಧಿತರ ವಿಚಾರಣೆ ನಡೆಸಿದಾಗ ಅವರು ಕೊಟ್ಟ ಸುಳಿವಿನ ಮೇರೆ ಶನಿವಾರ ಜಾಕೀರಹುಸೇನ, ಫಯಾಜ, ಸಚೀನ, ಅರ್ಪಾತ ಅವರನ್ನು ಬಂಧಿಸಿ ₹೩ ಲಕ್ಷ ನಗದು ಸೇರಿ ಒಂಧಿತರಿಂದ ಒಟ್ಟು ₹೩.೯೦ ಸಾವಿರ ನಗದು ಹಾಗೂ ಕೃತ್ಯಕ್ಕೆ ಬಳಸಿದ ಇನ್ನೋವಾ ಹಾಗೂ ಸ್ಕಾರ್ಪಿಯೋ ವಾಹನ ವಶಪಡಿಸಿಕೊಂಡಿದ್ದಾರೆ. ಪರಾರಿಯಾದ ಆರೋಪಿಗಳಾದ ಸದ್ದಾಂ ಬಾವಾ ಹಾಗೂ ಖಾಜಾ ಅಮೀನ್‌ ಮುಲ್ಲಾ ಸ್ಕಾರ್ಪಿಯೋ ವಾಹನದಲ್ಲಿ ವಿಜಯಪುರ ಜಿಲ್ಲೆಯ ಹೊರ್ತಿ ಬಳಿ ಜ. ೧೨ರಂದು ಇದೇ ರೀತಿಯ ದರೋಡೆ ಮಾಡಿರುವುದು ವಿಚಾರಣೆಯಿಂದ ತಿಳಿದು ಬಂದಿದೆ. ಇವರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಬಿ.ಜಿ. ದೇಸಾಯಿ, ಎ.ಎಂ. ಜಮಖಂಡಿ, ಬಸವರಾಜ ಮುದಿಬಸನಗೌಡ, ಎಸ್.ಡಿ. ಬಾರಿಗಡದ, ಅಶೋಕ ಸವದಿ, ಐ.ಬಿ. ತೇಲಿ, ಜೆ.ಸಿ. ದಳವಾಯಿ, ಚಂದ್ರಶೇಖರ ಜಟ್ಟೆಪ್ಪಗೋಳ, ಕೆ.ಎನ್. ಮಾಣಿ. ಐ.ಎಸ್. ಇಂಗಳಗಾವಿ, ವಿಠ್ಠಲ ಮಾನೆ. ವಿಠ್ಠಲ ಬಳಗನ್ನವರ ಇದ್ದರು. ಈ ಕಾರ್ಯಕ್ಕೆ ಜಿಲ್ಲಾ ಪೊಲೀಸ್‌ ಅಧಿಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.