ಹಾಸ್ಟೆಲ್‌ ಸಮಸ್ಯೆಗೆ ಕಿವಿಯಾದ ತಿಪ್ಪೇಸ್ವಾಮಿ

| Published : Feb 03 2024, 01:50 AM IST

ಸಾರಾಂಶ

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ತುಮಕೂರು ನಗರದ ರ್ಕಾಸರಿ ಪದವಿ ಪೂರ್ವ ಕಾಲೇಜು ಬಾಲಕರ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳ ಅಹವಾಲು ಆಲಿಸಿದರು.

ಕನ್ನಡಪ್ರಭ ವಾರ್ತೆ ತುಮಕೂರು

ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಡಾ. ತಿಪ್ಪೇಸ್ವಾಮಿ ಕೆ.ಟಿ. ಅವರು ಸಮಾಜ ಕಲ್ಯಾಣ ಇಲಾಖೆಯ ವ್ಯಾಪ್ತಿಗೆ ಒಳಪಡುವ ತುಮಕೂರು ನಗರದ ರ್ಕಾಸರಿ ಪದವಿ ಪೂರ್ವ ಕಾಲೇಜು ಬಾಲಕರ ವಸತಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿ ಮಕ್ಕಳ ಅಹವಾಲು ಆಲಿಸಿದರು.

ಸದರಿ ಸಮಯದಲ್ಲಿ ವಸತಿ ನಿಲಯದಲ್ಲಿ ಸ್ವಚ್ಛತೆ ಇಲ್ಲದಿರುವುದು, ಮಕ್ಕಳ ಕೊಠಡಿಗಳನ್ನು ನಿಗದಿತವಾಗಿ ತೊಳೆಯದಿರುವುದು, ಸಾಕಷ್ಟು ಮಕ್ಕಳಿಗೆ ಬೆಡ್ ವ್ಯವಸ್ಥೆ ಕಲ್ಪಿಸಿಲ್ಲದಿರುವುದು, ಕಂಪ್ಯೂಟರ್‌ ಕೊಠಡಿ ಬಾಗಿಲು ಮುಚ್ಚಿರುವುದು, ಗ್ರಂಥಾಲಯದ ಪುಸ್ತಕಗಳನ್ನು ಮಕ್ಕಳಿಗೆ ನಿಗದಿತವಾಗಿ ವಿತರಿಸದಿರುವುದು, ಕೊಠಡಿಗಳಲ್ಲಿ ಸಾಕಷ್ಟು ಲೈಟ್ ವ್ಯವಸ್ಥೆ ಇಲ್ಲದಿರುವುದು, ಮಕ್ಕಳಿಗೆ ಸ್ನಾನಕ್ಕೆ ಬಿಸಿ ನೀರು ಲಭ್ಯವಾಗುತ್ತಿಲ್ಲದಿರುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಮಕ್ಕಳಿಂದ ಕೇಳಿ ತಿಳಿದುಕೊಂಡರು.

ಶೌಚಾಲಯದ ಪೈಪ್ ಹೊಡೆದು ಹೋಗಿದ್ದು ತ್ಯಾಜ್ಯವು ಸರಿಯಾಗಿ ವಿಲೇವಾರಿಯಾಗದೆ ಗಬ್ಬು ವಾಸನೆ ಬರುತ್ತಿದ್ದು. ಈ ವರೆಗೂ ಯಾವುದೇ ಕ್ರಮಕೈಗೊಂಡಿಲ್ಲದಿರುವುದನ್ನು ಗಮನಿಸಲಾಯಿತು. ಅಲ್ಲದೆ ಊಟದಲ್ಲಿ ಗುಣಮಟ್ಟ ಕಾಯ್ದುಕೊಳ್ಳದಿರುವುದು ಹಾಗೂ ಊಟ ರುಚಿಕರವಾಗಿಲ್ಲದಿರುವ ಬಗ್ಗೆ ಮಕ್ಕಳು ತಮ್ಮ ಸಮಸ್ಯೆ ಹಂಚಿಕೊಂಡರು. ಅಡುಗೆ ಕೋಣೆಗೆ ಭೇಟಿನೀಡಿದಾಗ ಅಗತ್ಯ ಮೂಲಭೂತ (ಮಿಕ್ಸಿ, ಬಕೆಟ್ ಇತ್ಯಾದಿ) ಸಾಮಗ್ರಿಗಳು ಕೊರತೆ ಇರುವ ಬಗ್ಗೆ ಬಹಳಷ್ಟು ಬಾರಿ ಮೇಲಿನ ಅಧಿಕಾರಿಗಳ ಗಮನಕ್ಕೆ ತಂದರೂ ಪೂರೈಕೆಯಾಗಿಲ್ಲವೆಂಬ ಅಂಶವನ್ನು ಅಲ್ಲಿನ ಸಿಬ್ಬಂದಿ ಸದಸ್ಯರ ಗಮನಕ್ಕೆ ತಂದರು.

ಈ ಬಗ್ಗೆ ಒಂದು ವಾರದಲ್ಲಿ ಕ್ರಮ ಕೈಗೊಂಡು ಆಯೋಗಕ್ಕೆ ವರದಿ ಸಲ್ಲಿಸುವಂತೆ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳಿಗೆ ಸೂಚಿಸಿದರು.

ನಂತರ ಅಲ್ಲಿನ ಸಿಬ್ಬಂದಿ ಜೊತೆಗೆ ಪ್ರತ್ಯೇಕ ಸಭೆ ನಡೆಸಿದ ಅವರು, ಸದಸ್ಯರು ಮಕ್ಕಳ ಜೊತೆಗೆ ಸಿಬ್ಬಂದಿಗಳ ವರ್ತನೆ ಸುಧಾರಿಸಬೇಕು, ಅವರನ್ನು ಘನತೆಯಿಂದ ನಡೆಸಿಕೊಳ್ಳಬೇಕು, ಅವರಿಗೆ ಸಿಗಬೇಕಾದ ಸೌಲಭ್ಯಗಳನ್ನು ಒದಗಿಸುವಲ್ಲಿ ನಿರ್ಲಕ್ಷ್ಯ ವಹಿಸಬಾರದು, ತಮ್ಮ ಕೊಂದುಕೊರತೆಗಳ ಬಗ್ಗೆ ಮಾಹಿತಿ ಹಂಚಿಕೊಂಡ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿದ್ದು, ಕಂಡುಬಂದಲ್ಲಿ ಸಂಬಂಧಿಸಿದವರ ಮೇಲೆ ಕಠಿಣ ಶಿಸ್ತು ಕ್ರಮಕ್ಕೆ ಶಿಪಾರಸ್ಸು ಮಾಡಲಾಗುವುದೆಂದು ಎಚ್ಚರಿಕೆ ನೀಡಿದರು.

ಸರ್ಕಾರ ನೀಡಿದ ಸವಲತ್ತುಗಳು ಮಕ್ಕಳಿಗೆ ಲಭ್ಯವಾಗಬೇಕು, ಈ ಬಗ್ಗೆ ಕಿಂಚಿತ್ತು ಚ್ಯುತಿ ಬಂದರೂ ಮಕ್ಕಳ ಹಕ್ಕುಗಳ ಆಯೋಗ ಸಹಿಸುವುದಿಲ್ಲ ಎಂದರು.

ಈ ಎಲ್ಲದರ ಬಗ್ಗೆ ಸೂಕ್ತ ಕ್ರಮಕೈಗೊಂಡು ಕೈಗೊಂಡ ಕ್ರಮದ ವರದಿಯನ್ನು ಆಯೋಗಕ್ಕೆ ನಿಗದಿತ ಕಾಲಾವಧಿಯಲ್ಲಿ ಸಲ್ಲಿಸದಿದ್ದಲ್ಲಿ ಸದರಿ ಭೇಟಿ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಅನುಷಾ, ಮಕ್ಕಳ ರಕ್ಷಣಾಧಿಕಾರಿಗಳಾದ ಶಿವಣ್ಣ ಹಾಗೂ ಗೌತಮ್ ಹಾಜರಿದ್ದರು.