ಸಾರಾಂಶ
ಜಿಟಿಜಿಟಿ ಸುರಿಯುತ್ತಿರುವ ಮಳೆಯ ನಡುವೆಯೂ ತಾಲೂಕಿನಲ್ಲಿ ಒಟ್ಟು 260 ಕಡೆಗಳಲ್ಲಿ ಗಣಪತಿಯನ್ನು ಸ್ಥಾಪಿಸಲಾಗಿದ್ದು ಎಲ್ಲೆಡೆ ಅತ್ಯಂತ ಶ್ರದ್ದೆಯಿಂದ ಶಾಂತಿಯುತವಾಗಿ ಆಚರಿಸಲಾಗುತ್ತಿದೆ. ನಾಲ್ಕಾರು ದಿನ ಬಿಡುವು ನೀಡಿದ್ದ ಮಳೆ ಗೌರಿ ಹಬ್ಬದ ದಿನದಿಂದಲೇ ಎಡಬಿಡದೇ ಸುರಿದಿದ್ದು ಮಳೆಯಿಂದಾಗಿ ಜನರ ಸಂಭ್ರಮಕ್ಕೆ ಕೊಂಚ ಅಡಚಣೆಯಾಗಿತ್ತು.
ಕನ್ನಡಪ್ರಭವಾರ್ತೆ ತೀರ್ಥಹಳ್ಳಿ
ಜಿಟಿಜಿಟಿ ಸುರಿಯುತ್ತಿರುವ ಮಳೆಯ ನಡುವೆಯೂ ತಾಲೂಕಿನಲ್ಲಿ ಒಟ್ಟು 260 ಕಡೆಗಳಲ್ಲಿ ಗಣಪತಿಯನ್ನು ಸ್ಥಾಪಿಸಲಾಗಿದ್ದು ಎಲ್ಲೆಡೆ ಅತ್ಯಂತ ಶ್ರದ್ದೆಯಿಂದ ಶಾಂತಿಯುತವಾಗಿ ಆಚರಿಸಲಾಗುತ್ತಿದೆ. ನಾಲ್ಕಾರು ದಿನ ಬಿಡುವು ನೀಡಿದ್ದ ಮಳೆ ಗೌರಿ ಹಬ್ಬದ ದಿನದಿಂದಲೇ ಎಡಬಿಡದೇ ಸುರಿದಿದ್ದು ಮಳೆಯಿಂದಾಗಿ ಜನರ ಸಂಭ್ರಮಕ್ಕೆ ಕೊಂಚ ಅಡಚಣೆಯಾಗಿತ್ತು.ಗುರುವಾರ ಪಟ್ಟಣದ ನೇತಾಜಿ ಸರ್ಕಲ್‌ನಲ್ಲಿ ಸಾಂಪ್ರದಾಯಿಕ ಶೈಲಿಯ ಅಲಂಕಾರದೊಂದಿಗೆ ಸ್ಥಾಪಿಸಿ ಪೂಜಿಸಲಾದ ಶಾಂತಿಪ್ರಿಯ ಗಣಪತಿಯ ಮೆರವಣಿಗೆ ಮಳೆಯ ನಡುವೆಯೂ ವೈಭವದಿಂದ ಕೂಡಿತ್ತು. ಮೊದಲ ದಿನದಂದು ಒಟ್ಟು 80 ಗಣಪತಿಯನ್ನು ಪೂಜಿಸುವುದರೊಂದಿಗೆ ಸಂಜೆಯ ಹೊತ್ತಿಗೆ ವಿಸರ್ಜಿಸಲಾಗಿದೆ. ಪಟ್ಟಣದ ಕೋಳಿಕಾಲುಗುಡ್ಡದಲ್ಲಿ ಸ್ಥಾಪಿಸಿರುವ ಗಣಪತಿಯನ್ನು ಅತೀ ಹೆಚ್ಚು 13 ದಿನಗಳ ಕಾಲ ಪೂಜಿಸಿ ನಂತರ ವಿಸರ್ಜಿಸಲಾಗುವುದು ಎಂದೂ ತಿಳಿದು ಬಂದಿದೆ.
ತಾಲೂಕಿನ ಹೊದಲ ಸಾರ್ವಜನಿಕ ಗಣೇಶೋತ್ಸವದಲ್ಲಿ ಪ್ರತಿವರ್ಷದಂತೆ ಕಲಾವಿದ ಉಪೇಂದ್ರ ಆಚಾರ್ಯ ಕೈ ಚಳಕದಲ್ಲಿ ನಿರ್ಮಿಸಲಾದ ಆಪರೇಷನ್ ಸಿಂದೂರ ಹೆಸರಿನಲ್ಲಿ ಬ್ರಹ್ಮೋಸ್ ಕ್ಷಿಪಣಿ ಮಾದರಿ ದೇಶಾಭಿಮಾನಕ್ಕೆ ಮಾದರಿಯಾಗಿದ್ದು ಜನಾಕರ್ಷಣೆಯನ್ನು ಗಳಿಸಿತ್ತು. ಪಟ್ಟಣದ ಛತ್ರಕೇರಿಯ ಸಿದ್ದಿವಿನಾಯಕ ಸಂಘದ ಗಣಪತಿ ಕಲಾತ್ಮಕವಾಗಿದ್ದು ವಿಗ್ರಹ ಬೆಳ್ಳಿಯ ಪ್ರಭಾವಳಿಯಿಂದ ಶೋಭಿತವಾಗಿತ್ತು. ಆಗುಂಬೆ ಸಮೀಪದ ಅಗರಸಕೋಣೆ ಸಾರ್ವಜನಿಕ ಗಣಪತಿ ಉತ್ಸವದಲ್ಲಿ ಹಿರಿಯರಾದ ಖ್ಯಾತ ನಾಟಿವೈದ್ಯೆ ಶಾರದಮ್ಮ ಮಂಜಪ್ಪನಾಯ್ಕರನ್ನು ಗೌರವಿಸಲಾಯಿತು.