ಸಾರಾಂಶ
ಸಭೆ । ಹೊಳೆನರಸೀಪುರ ಪುರಸಭೆಯ ೨೦೨೪-೨೦೨೫ ನೇ ಸಾಲಿನ ಆಯವ್ಯಯ ಕುರಿತು ಚರ್ಚೆಕನ್ನಡಪ್ರಭ ವಾರ್ತೆ ಹೊಳೆನರಸೀಪುರ
ವಿಶೇಷ ಚೇತನರಿಗೆ ೩ ಚಕ್ರದ ವಾಹನಗಳ ಸರಬರಾಜಿಗೆ ಅನುಮತಿ ನೀಡುವ ಮುನ್ನ ಜಿಲ್ಲಾ ಪಂಚಾಯಿತಿಯಲ್ಲಿಯೂ ಟೆಂಡರ್ ಕರೆದಿದ್ದಾರೆ. ಅವರಿಂದ ಮಾಹಿತಿ ಪಡೆದು ಉತ್ತಮ ದರ್ಜೆಯ ಜತೆಗೆ ಟೆಂಡರ್ ಹಣ ಕಡಿಮೆ ಇದ್ದರೆ, ಆ ಕಂಪನಿಗೆ ಟೆಂಡರ್ ನೀಡಿ ಎಂದು ಶಾಸಕ ಎಚ್.ಡಿ.ರೇವಣ್ಣ ಸಲಹೆ ನೀಡಿದರು.ಪಟ್ಟಣದ ಪುರಸಭೆಯ ಎಚ್.ಡಿ.ದೇವೇಗೌಡ ಸಭಾಂಗಣದಲ್ಲಿ ಬುಧವಾರ ಶಾಸಕ ಎಚ್.ಡಿ.ರೇವಣ್ಣ ಉಪಸ್ಥಿತಿಯಲ್ಲಿ, ಉಪ ವಿಭಾಗಾಧಿಕಾರಿ ಜೆ.ಬಿ.ಮಾರುತಿ ಅವರ ಅಧ್ಯಕ್ಷತೆಯಲ್ಲಿ ಆಯೋಜಿಸಲಾಗಿದ್ದ ೨೦೨೪-೨೦೨೫ ನೇ ಸಾಲಿನ ಆಯವ್ಯಯ ಸಭೆಯಲ್ಲಿ ಮಾತನಾಡಿದರು. ರಾಜ್ಯದ ೧೫ ನೇ ಹಣಕಾಸು ಯೋಜನೆಯಡಿ ಯುಜಿಡಿ ಸಮರ್ಪಕತೆ ಮತ್ತು ರಸ್ತೆ ಅಭಿವೃದ್ಧಿಗೆ ಅನುದಾನ ಕೋರಲಾಗುವುದು. ಪಟ್ಟಣದ ಒಳಾಂಗಣ ಕ್ರೀಡಾಂಗಣಕ್ಕಾಗಿ ೧ ಕೋಟಿ ರು. ಮತ್ತು ಪಾಳು ಬಿದ್ದ ಪುರಸಭೆಯ ಈಜುಕೊಳ ಪುನರ್ ಬಳಕೆಗೆ ಅಗತ್ಯ ಅನುದಾನ ಕೋರಲಾಗಿದೆ ಎಂದು ಶಾಸಕ ರೇವಣ್ಣ ಹೇಳಿದರು.
ಮುಂದಿನ ಆರ್ಥಿಕ ವರ್ಷದ ಹಲವು ಅಭಿವೃದ್ಧಿ ಕಾಮಗಾರಿ ಕೈಗೊಳ್ಳುವ ನಿಮಿತ್ತ ೩೦ ಲಕ್ಷದ ೮೪ ಸಾವಿರ ರು. ಉಳಿತಾಯ ನಿರೀಕ್ಷಿತ ಬಜೆಟ್ ಮಂಡಿಸಲಾಯಿತು. ಮುಖ್ಯಾಧಿಕಾರಿ ಮಹೇಂದ್ರ ಆಯವ್ಯಯ ಮಂಡಿಸಿದರು. ಸಭೆಯಲ್ಲಿ ಹಾಜರಿದ್ದ ಸದಸ್ಯರ ಸಮ್ಮತಿ ಮೇರೆಗೆ ಜಿಲ್ಲಾ ಉಪವಿಭಾಗಾಧಿಕಾರಿ ಮಾರುತಿ ಅನುಮೋದಿಸಿದರು.ಪ್ರಸಕ್ತ ಆರಂಭಿಕ ಶುಲ್ಕವಾಗಿ ೨೯.೫೪ ಲಕ್ಷ ರು ಇದ್ದು, ಮುಂದಿನ ಆರ್ಥಿಕ ವರ್ಷದಲ್ಲಿ ರಾಜಸ್ವ, ಬಂಡವಾಳ ಹಾಗೂ ಅಸಾಧಾರಣ ಸ್ವೀಕೃತಿಗಳು ಸೇರಿದಂತೆ ಒಟ್ಟು ೧೮೬.೮೮ ಕೋಟಿ ರು. ಆದಾಯ ನಿರೀಕ್ಷಿಸಲಾಗಿದ್ದು, ೧೮೬.೫೭ ಕೋಟಿ ರು. ನಾನಾ ಅಭಿವೃದ್ಧಿ ಕೆಲಸಗಳಿಗೆ ವಿನಿವಿಯೋಗಿಸಲು ಯೋಜಿಸಲಾಗಿದೆ. ಪಟ್ಟಣದ ನೀರು ಸರಬರಾಜು ನಿರ್ವಹಣೆ ಮತ್ತು ವಾರ್ಡ್ ನಂ.೧೧ ಮತ್ತು ೯ ರಲ್ಲಿ ಅತಿ ತುರ್ತು ರಸ್ತೆ, ಚರಂಡಿ ಕೆಲಸ ಕೈಗೊಳ್ಳಲು ಟೆಂಡರ್ ಕರೆದು ಒಪ್ಪುವ ವಿಚಾರ ಪ್ರಸ್ತಾಪಿಸಿ ನಿಯಮ ಅನುಸರಿಸಲು ಸದಸ್ಯರು ಸಮ್ಮತಿಸಿದರು. ಈಗಾಗಲೇ ಪಟ್ಟಣದ ಅಗ್ನಿಶಾಮಕ ದಳದ ಪಕ್ಕದಲ್ಲಿ ಮಾರುಕಟ್ಟೆ ನಿರ್ಮಿಸಲಾಗಿದ್ದು, ಮೂಲಸೌಕರ್ಯ ಒದಗಿಸಲು ನಗರೋತ್ಥಾನ ಯೋಜನೆಯಡಿ ಹಣ ವಿನಿಯೋಗಿಸಲಾಗುವುದು. ನಾಗರಿಕರು ತಮ್ಮ ಆಸ್ತಿ ವಿವರ ಕುರಿತಂತೆ ಮಾಹಿತಿ ಪಡೆಯಲು ಇ ತಂತ್ರಾಂಶ ರೂಪಿಸಲಾಗುವುದು. ಮೂಲಭೂತ ಸೌಕರ್ಯದ ಸಮಸ್ಯೆಗಳಿಗೆ ನಾಗರಿಕರು ಜನಸ್ಪಂದನ ಮೂಲಕ ಪರಿಹರಿಸಿಕೊಳ್ಳಲು ವ್ಯವಸ್ಥೆಗೊಳಿಸಲಾಗುತ್ತಿದೆ ಎಂದು ಮುಖ್ಯಾಧಿಕಾರಿ ತಿಳಿಸಿದರು.
೨೩ ಸದಸ್ಯರ ಪುರಸಭೆಯಲ್ಲಿ ೨೨ ಜೆಡಿಎಸ್ ಸದಸ್ಯರ ಪೈಕಿ ೬ ಸದಸ್ಯರು ಗೈರಾಗಿದ್ದರು. ಕಾಂಗ್ರೆಸ್ ಸದಸ್ಯ ಇದ್ದರು.ಪಟ್ಟಣ ವ್ಯಾಪ್ತಿಯಲ್ಲಿ ದಿನದ ಮಾರುಕಟ್ಟೆ ಸುಂಕ ವಸೂಲಿ ಕೈಬಿಡುವಂತೆ ಪುರಸಭೆಗೆ ಸೂಚಿಸುವಂತೆ ಪತ್ರಕರ್ತರು ಶಾಸಕರಲ್ಲಿ ಮನವಿ ಮಾಡಿದರು. ರೈತರು ತಾವು ಬೆಳೆದು ತಂದ ಅಷ್ಟಿಷ್ಟು ಉತ್ಪನ್ನಗಳನ್ನು ಚಿಲ್ಲರೆಯಾಗಿ ನೇರ ಮಾರಾಟಕ್ಕೆ ತರುತ್ತಾರೆ. ಸುಂಕ ವಸೂಲಿ ಅವರ ಅಲ್ಪ ಆದಾಯಕ್ಕೆ ಕತ್ತರಿ ಬೀಳುವ ಕಾರಣ ದಿನದ ಮಾರುಕಟ್ಟೆ ಸುಂಕ ರದ್ದು ಮಾಡುವಂತೆ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ವಿ.ಸುರೇಶ್‌ಕುಮಾರ್ ಕೋರಿದರು.
ಹೊಳೆನರಸೀಪುರ ಪಟ್ಟಣದಲ್ಲಿ ಶಾಸಕ ಎಚ್.ಡಿ.ರೇವಣ್ಣ ಹಾಗೂ ಉಪ ವಿಭಾಗಾಧಿಕಾರಿ ಜೆ.ಬಿ.ಮಾರುತಿ ೨೦೨೪-೨೦೨೫ ನೇ ಸಾಲಿನ ಆಯವ್ಯಯ ಪ್ರತಿಯನ್ನು ಪ್ರದರ್ಶಿಸಿದರು