ಇದು ಭರವಸೆ v/s ಬುರುಡೆ ನಡುವಿನ ಚುನಾವಣೆ: ಡಿಕೆಶಿ

| Published : May 06 2024, 12:30 AM IST

ಸಾರಾಂಶ

ದೇಶದಲ್ಲಿ ಈ ಬಾರಿ ನಡೆಯುತ್ತಿರುವುದು ಕಾಂಗ್ರೆಸ್‌ನ ಭರವಸೆ ಹಾಗೂ ಬಿಜೆಪಿ ಬುರುಡೆ ನಡುವೆ ನಡೆಯುತ್ತಿರುವ ಚುನಾವಣೆ ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

- ಬಿಜೆಪಿಗೆ ಮತ ಕೇಳಲು ನೈತಿಕತೆ ಇಲ್ಲ

- ನಾವು ಕೊಟ್ಟ ಭರವಸೆ ಈಡೇರಿಸಿದ್ದೇವೆ

ಕನ್ನಡಪ್ರಭ ವಾರ್ತೆ ಬೆಳಗಾವಿ

ದೇಶದಲ್ಲಿ ಈ ಬಾರಿ ನಡೆಯುತ್ತಿರುವುದು ಕಾಂಗ್ರೆಸ್‌ನ ಭರವಸೆ ಹಾಗೂ ಬಿಜೆಪಿ ಬುರುಡೆ ನಡುವೆ ನಡೆಯುತ್ತಿರುವ ಚುನಾವಣೆ ಎಂದು ಕೆಪಿಸಿಸಿ ಅಧ್ಯಕ್ಷ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಮ್ಮ ಗ್ಯಾರಂಟಿ ಬಗ್ಗೆ ಟೀಕಿಸುತ್ತಿರುವ ಬಿಜೆಪಿಯವರು ಭ್ರಮೆಯಲ್ಲಿದ್ದಾರೆ. ಬೆಳಗಾವಿಯಲ್ಲಿ ಅವರು ಎಸ್ಸಿ, ಎಸ್ಟಿ ಹಣದ ಬಗ್ಗೆ ಮಾತನಾಡಿದ್ದಾರೆ. ಆದರೆ ಇದೇ ಬೆಳಗಾವಿಯಲ್ಲಿ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಕಾಯ್ದೆ ತಂದು ಎಸ್ಸಿ, ಎಸ್ಟಿ ವರ್ಗದವರಿಗೆ ಆಯಾ ಜನಸಂಖ್ಯೆಗನುಗುಣವಾಗಿ ₹39 ಸಾವಿರ ಕೋಟಿ ಮೀಸಲಿಟ್ಟಿದ್ದಾರೆ. ಇಂಥ ಒಂದು ಕಾಯ್ದೆ, ಕಾನೂನನ್ನು ಬೊಮ್ಮಾಯಿ, ಬಿ.ಎಸ್.ಯಡಿಯೂರಪ್ಪ ಬುರುಡೆ ಸರ್ಕಾರ ಇದ್ದಾಗ ಡಾರಿ ಮಾಡಿದ್ದರೆ ಹೇಳಲಿ ಎಂದು ಸವಾಲು ಹಾಕಿದರು.

ಬಿಜೆಪಿಯವರು ಯಾವ ಕೆಲಸ ಮಾಡಿದ್ದಾರೆಂದು ಮತ ಕೇಳುತ್ತಿದ್ದಾರೆ? ಅವರಿಗೆ ಮತ ಕೇಳಲು ಯಾವುದೇ ನೈತಿಕತೆ ಇಲ್ಲ. ಮೇಕೆದಾಟು ಯೋಜನೆ, ಮಹದಾಯಿ ವಿಚಾರ, ಭದ್ರಾ ಯೋಜನೆಗೆ ₹5,300 ಕೋಟಿ ಬೊಮ್ಮಾಯಿ ಸರ್ಕಾರದಲ್ಲೇ ಬಜೆಟ್‌ನಲ್ಲಿ ಮೀಸಲಿಟ್ಟಿದ್ದರು. ಆದರೆ ಈವರೆಗೂ ಆ ಹಣ ಬಂದಿಲ್ಲ ಎಂದು ದೂರಿದರು.

ಬಿಜೆಪಿಯವರು ತಮ್ಮ ಪ್ರಣಾಳಿಕೆಯಲ್ಲಿ ಏನು ಭರವಸೆ ನೀಡಿದ್ದರೋ ಅದನ್ನು ಈಡೇರಿಸಿಲ್ಲ. ದೇಶದ ಜನರ ಭಾವನೆ ಬಗ್ಗೆ ಮಾತನಾಡುತ್ತಿದ್ದಾರೆಯೇ ಹೊರತು ಬದುಕಿನ ಬಗ್ಗೆ ಅಲ್ಲ. ಬಿಜೆಪಿಯವರು ಸುಳ್ಳು ಹೇಳುತ್ತಾರೆ. ಆದರೆ ನಾವು ಏನು ಹೇಳುತ್ತೇವೋ ಅದನ್ನು ಮಾಡಿ ತೋರಿಸುತ್ತೇವೆ ಎಂದರು.

ಪ್ರಧಾನಿ ಮೋದಿ ಅವರು ಮಾಂಗಲ್ಯ ಸರದ ಬಗ್ಗೆ ಮಾತನಾಡುತ್ತಾರೆ. ಈಗ 10 ಗ್ರಾಂ.ಗೆ ₹74 ಸಾವಿರ ಆಗಿದೆ. ಹೀಗಾಗಿ ಅವರಿಗೆ ಮಾಂಗಲ್ಯ ಸರದ ಬಗ್ಗೆ ಮಾತನಾಡುವ ನೈತಿಕತೆ ಏನಿದೆ? ಮನಮೋಹನ ಸಿಂಗ್ ಪ್ರಧಾನಿಯಾಗಿದ್ದಾಗ 10 ಗ್ರಾಂ. ಚಿನ್ನದ ದರ ₹23 ಸಾವಿರ ಇತ್ತು. ನಾವು ಜನರ ಬದುಕಿನ ಬಗ್ಗೆ ಯೋಚನೆ ಮಾಡುತ್ತಿದ್ದೇವೆ. ನಾವು ಕೊಟ್ಟ ಭರವಸೆ ಈಡೇರಿಸಿದ್ದೇವೆ ಎಂದರು.