ಸಾರಾಂಶ
ಕನ್ನಡಪ್ರಭ ವಾರ್ತೆ ಸೋಮವಾರಪೇಟೆ
ಪ್ರಸಕ್ತ ಲೋಕಸಭಾ ಚುನಾವಣೆ ಭಾರತದ ಎರಡನೇ ಸ್ವಾತಂತ್ರ್ಯ ಸಂಗ್ರಾಮವಿದ್ದಂತೆ, ಸರ್ವಾಧಿಕಾರದ ಆಡಳಿತವನ್ನು ಕಿತ್ತೊಗೆಯಲು ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಅಭ್ಯರ್ಥಿಗಳಿಗೆ ಮತದಾರರು ಆಶೀರ್ವಾದ ಮಾಡಬೇಕು ಎಂದು ಮಾಜಿ ಸಂಸದ ವಿ.ಎಸ್. ಉಗ್ರಪ್ಪ ಮನವಿ ಮಾಡಿದರು.ಜೇಸಿ ವೇದಿಕೆಯಲ್ಲಿ ಲೋಕಸಭಾ ಚುನಾವಣೆ ಪ್ರಯುಕ್ತ ಸೋಮವಾರ ಕಾಂಗ್ರೆಸ್ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದರು.ಪ್ರಧಾನಿ ಮೋದಿ ನೇತೃತ್ವದ ಬಿಜೆಪಿ ಕಳೆದ ಹತ್ತು ವರ್ಷಗಳ ಕಾಲ ಬಡವರ, ಕಾರ್ಮಿಕರ, ರೈತರ, ಅಲ್ಪಸಂಖ್ಯಾತರ ವಿರೋಧಿಯಾಗಿ ಸರ್ಕಾರ ನಡೆಸಿದೆ. ಇಡೀ ದೇಶ ಸಾಲದ ಸುಳಿಯಲ್ಲಿ ದಿವಾಳಿಯಾಗಿದೆ. ಸರ್ಕಾರಿ ಸ್ವಾಯತ್ತ ಸಂಸ್ಥೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. ಇನ್ನೊಂದು ಅವಧಿಗೆ ಅವರಿಗೆ ಅಧಿಕಾರ ಸಿಕ್ಕರೆ, ಸಂವಿಧಾನ, ಪ್ರಜಾಪ್ರಭುತ್ವ ಎಲ್ಲವನ್ನು ಬುಡಮೇಲು ಮಾಡಲಿದ್ದಾರೆ ಎಂದು ಆರೋಪಿಸಿದರು.ಚುನಾವಣೆ ಸಂದರ್ಭದಲ್ಲೇ ಇಂಡಿಯಾದ ಪ್ರಮುಖ ನಾಯಕರನ್ನು ಜೈಲಿಗೆ ತಳ್ಳಲಾಗುತ್ತಿದೆ. ಸಾಂವಿಧಾನಿಕ ಸಂಸ್ಥೆಗಳಾದ ಸಿ.ಬಿ.ಐ., ಇಡಿ, ಐಟಿ ಇಲಾಖೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಅಧಿಕಾರಿಗಳು ವಿರೋಧ ಪಕ್ಷದ ನಾಯಕರ ಮನೆ ಬಾಗಿಲು ತಟ್ಟುತ್ತಿದ್ದಾರೆ ಎಂದು ದೂಷಿಸಿದರು.ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಕೊಡಗಿನಿಂದ ಬಿಜೆಪಿಯನ್ನು ಬುಡಸಮೇತ ಕಿತ್ತು ಹಾಕಿದ್ದೇವೆ. ಕಷ್ಟದ ಕಾಲದಲ್ಲಿ ಕಾಂಗ್ರೆಸ್ ಕೈಹಿಡಿಯುತ್ತದೆ ಎಂದು ಜನರಿಗೆ ಗೊತ್ತಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಗಳಾದ ಚಂದ್ರಮೌಳಿ, ಕೆ.ಪಿ.ಚಂದ್ರಕಲಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಬಿ.ಸತೀಶ್, ಡಿಸಿಸಿ ಉಪಾಧ್ಯಕ್ಷ ಕೆ.ಎಂ. ಲೋಕೇಶ್, ಪಕ್ಷದ ಪ್ರಮುಖರಾದ ಹನೀಪ್, ಕೆ.ಎ. ಯಾಕುಬ್, ಸುರಯ್ಯ ಅಬ್ರಾರ್, ಮಿಥುನ್ ಹಾನಗಲ್, ವಿ.ಪಿ. ಶಶಿಧರ್, ಬಿ.ಇ. ಜಯೇಂದ್ರ, ಎಚ್.ಆರ್. ಸುರೇಶ್, ಸಿ.ಪಿ.ಐ ನ ಸೋಮಪ್ಪ, ಶೀಲಾ ಡಿಸೋಜ ಮತ್ತಿತರರು ಇದ್ದರು.