ಖಾಸಗಿ ಶಾಲೆಗೆ ಕಮ್ಮಿ ಇಲ್ಲ ಈ ಸರ್ಕಾರಿ ಪ್ರೌಢಶಾಲೆ

| Published : Jan 05 2024, 01:45 AM IST

ಸಾರಾಂಶ

ಮೈಸೂರಿನ ಕುಂಬಾರಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ಅಭಿವೃದ್ಧಿ ಪರ್ವಸ್ಮಾರ್ಟ್ ಬೋರ್ಡ್ ತರಗತಿ, ಪ್ರಯೋಗಾಲಯ ಸೇರಿ ಹಲವು ಸೌಲಭ್ಯ

- ಮೈಸೂರಿನ ಕುಂಬಾರಕೊಪ್ಪಲು ಸರ್ಕಾರಿ ಪ್ರೌಢಶಾಲೆಯಲ್ಲಿ ಅಭಿವೃದ್ಧಿ ಪರ್ವ

- ಸ್ಮಾರ್ಟ್ ಬೋರ್ಡ್ ತರಗತಿ, ಪ್ರಯೋಗಾಲಯ ಸೇರಿ ಹಲವು ಸೌಲಭ್ಯ

----

ಬಿ. ಶೇಖರ್‌ ಗೋಪಿನಾಥಂ

ಕನ್ನಡಪ್ರಭ ವಾರ್ತೆ ಮೈಸೂರು

ಮೈಸೂರಿನ ಕುಂಬಾರಕೊಪ್ಪಲಿನಲ್ಲಿರುವ ಸರ್ಕಾರಿ ಪ್ರೌಢಶಾಲೆಯು ಯಾವುದೇ ಖಾಸಗಿ ಶಾಲೆಗೂ ಕಮ್ಮಿ ಇಲ್ಲದಂತೆ ಅಭಿವೃದ್ಧಿಗೊಂಡಿದೆ.

ಹಸಿರುಮಯ ವಾತಾವರಣ, ಸರ್ಕಾರಿ ಶಾಲೆ ಎಂದರೆ ಈ ರೀತಿಯಲ್ಲೂ ಇರಲು ಸಾಧ್ಯವೇ? ಎಂಬಂತೆ ನೋಡುಗರನ್ನು ಆಶ್ಚರ್ಯಗೊಳಿಸುವ ರೀತಿಯಲ್ಲಿ ಸ್ವಚ್ಛವಾಗಿ ಸುಂದರವಾಗಿದೆ ಶಾಲೆಯ ಆವರಣ ಮತ್ತು ವಾತಾವರಣ.

ಈ ಶಾಲೆಗೆ ಪ್ರವೇಶಿಸುತ್ತಿದ್ದಂತೆ ವಾಲಿಬಾಲ್, ಖೋ ಖೋ ಅಂಕಣಗಳನ್ನು ಒಳಗೊಂಡ ಸುಸಜ್ಜಿತವಾದ ಆಟದ ಮೈದಾನ, ನಾಲ್ಕಾರು ಹೆಜ್ಜೆಗಳನ್ನು ಇಟ್ಟರೆ ಕಣ್ಣಿಗೆ ಗೋಚರಿಸುವ ಜ್ಞಾನಭರಿತವಾದ ಕುವೆಂಪು ರಂಗಮಂದಿರ, ಅದರ ಎಡ ಭಾಗದಲ್ಲಿ ವಾಹನ ನಿಲ್ದಾಣ, ರಂಗಮಂದಿರದ ಬಲಭಾಗಕ್ಕೆ ಇರುವ ಮುಖ್ಯ ಶಿಕ್ಷಕರ ಮತ್ತು ಸಹ ಶಿಕ್ಷಕರ ಕೊಠಡಿಗಳು, ಒಂದು ಕೊಠಡಿಯಲ್ಲಿ ಅಂಗನವಾಡಿ ಕೇಂದ್ರ ಇದೆ.

ಎರಡನೇ ಅಂಕಣಕ್ಕೆ ಪ್ರವೇಶಿಸಿದರೆ ಸುತ್ತಲೂ ಕಲ್ಲಿನ ಬೆಂಚುಗಳು, ಸ್ವಚ್ಛವಾದ ಮತ್ತು ಶುದ್ಧವಾದ ಕುಡಿಯುವ ನೀರನ್ನು ಒಳಗೊಂಡ ಸುಸಜ್ಜಿತವಾದ ಅಡುಗೆಮನೆ. ಅಡುಗೆಮನೆ ಹಿಂಭಾಗ ಗಂಡು, ಹೆಣ್ಣು ಮತ್ತು ವಿಶೇಷ ಅಗತ್ಯವುಳ್ಳ ವಿದ್ಯಾರ್ಥಿಗಳಿಗೆ ಇರುವ ಪ್ರತ್ಯೇಕ ಶೌಚಾಲಯ ಸಂಕಿರಣ ಇದೆ. ಅದಕ್ಕೆ ಹೊಂದಿಕೊಂಡಂತೆ ಹೂ ತೋಟ, ಸ್ವಚ್ಛವಾದ ಸಿಂಕ್ ಇದೆ.

ಈ ಶಾಲೆಯಲ್ಲಿ ಒಟ್ಟು 12 ಕೊಠಡಿಗಳಿದ್ದು, ತರಗತಿಗೆ 3 ಕೊಠಡಿಗಳನ್ನು ಬಳಸಿಕೊಳ್ಳಲಾಗಿದ್ದು, ಇನ್ನುಳಿದ 9 ಕೊಠಡಿಗಳನ್ನು ಸುವ್ಯವಸ್ಥಿತವಾಗಿ ಬಳಸಿಕೊಳ್ಳಲಾಗುತ್ತಿದೆ. ಸುಸಜ್ಜಿತವಾದ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಸ್ಮಾರ್ಟ್ ಬೋರ್ಡ್ ತರಗತಿ, ಗ್ರೀನ್ ಬೋರ್ಡ್, ಬೆಳಕಿನ ವ್ಯವಸ್ಥೆ, ಫ್ಯಾನ್. ಎಲೆಕ್ಟ್ರಿಕಲ್ ಬೆಲ್ ವ್ಯವಸ್ಥೆ ಇದೆ. ವಿದ್ಯಾರ್ಥಿಗಳು ಊಟವನ್ನು ಮಾಡಲು ಸ್ವಚ್ಛಂದವಾದ ಭೋಜನಾಲಯವು ಇದೆ.

ಮೈಸೂರು ಉತ್ತರ ವಲಯ ವ್ಯಾಪ್ತಿಯ ಕುಂಬಾರಕೊಪ್ಪಲು ಸರ್ಕಾರಿ ಪ್ರೌಢಶಾಲೆಯು 2007ರಲ್ಲಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಪ್ರಾರಂಭವಾಗಿ, 2014ರಲ್ಲಿ ನಿಂಗಯ್ಯನಕೆರೆಯ ಹೊಸ ಕಟ್ಟಡಕ್ಕೆ ಸ್ಥಳಾಂತರವಾಗಿದೆ.

ವಿಶಾಲವಾದ ಮೈದಾನವನ್ನು ಹೊಂದಿದ್ದರೂ ಪೂರ್ಣ ಪ್ರಮಾಣದ ಕಾಂಪೌಂಡ್ ವ್ಯವಸ್ಥೆ ಇಲ್ಲದೆ ಜೊತೆಗೆ ಶಾಲೆಯ ಗೇಟ್ ಊರಿನ ಸ್ಮಶಾನಕ್ಕೆ ಮುಖ ಮಾಡಿದ್ದರಿಂದ ಸರ್ಕಾರದ, ಗ್ರಾಮಸ್ಥರ, ದಾನಿಗಳ ಸಹಕಾರ ಪಡೆಯುತ್ತಾ ಶಾಲೆಯ ಗೇಟಿನ ದಿಕ್ಕನ್ನ ಬದಲಾಯಿಸಿ, ಪೋಷಕರಿಗೆ ಶಾಲೆಯ ಬಗ್ಗೆ ಉತ್ತಮ ಅಭಿಪ್ರಾಯ ಮೂಡಿ ದಾಖಲಾತಿ ಹೆಚ್ಚಾಗಲು ಇಲ್ಲಿನ ಶಿಕ್ಷಕರು ಪ್ರಯತ್ನಿಸಿದ್ದಾರೆ.

ಈ ಶಾಲೆಯನ್ನು ದತ್ತು ತೆಗೆದುಕೊಂಡಿರುವ ಫ್ರಾಚ್ಚರ್ ಸೆನ್ಸಾರ್ ಟೆಕ್ನಾಲಜಿಸ್ ಕಂಪನಿಯವರು ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಕಾರಣಕರ್ತರಾಗಿದ್ದಾರೆ.

ಎಸ್ಸೆಸ್ಸೆಲ್ಸಿ ಫಲಿತಾಂಶ 2020-21ನೇ ಸಾಲಿನಲ್ಲಿ ಶೇ.94. 2021-22ನೇ ಸಾಲಿನಲ್ಲಿ ಶೇ.96 ಹಾಗೂ 2022- 23ನೇ ಸಾಲಿನಲ್ಲಿ ಶೇ.80 ರಷ್ಟು ಇದ್ದು, ಇದರಿಂದ ಶಾಲೆಯ ದಾಖಲಾತಿ ಪ್ರಮಾಣ ಹೆಚ್ಚಾಗಿದೆ. ಪ್ರಸ್ತುತ 8ನೇ ತರಗತಿಯಲ್ಲಿ 23, 9ನೇ ತರಗತಿಯಲ್ಲಿ 42 ಹಾಗೂ 10ನೇ ತರಗತಿಯಲ್ಲಿ 72 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಆದರೆ, ಈ ಶಾಲೆಯಲ್ಲಿ ಇರುವ ಸೌಲಭ್ಯಕ್ಕೆ ಇನ್ನೂ ಹೆಚ್ಚಿನ ವಿದ್ಯಾರ್ಥಿಗಳು ದಾಖಲಾಗಬೇಕಿದ್ದು, ಸರ್ಕಾರಿ ಶಾಲೆಯಲ್ಲಿ ತಮ್ಮ ಮಕ್ಕಳನ್ನು ಓದಿಸಲು ಪೋಷಕರು ಮನಸ್ಸು ಮಾಡಬೇಕಿದೆ.

ಪ್ರಸ್ತುತ ಈ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಆಗಿ ಆರ್. ಯೋಗಲಕ್ಷ್ಮಿ, ಶಿಕ್ಷಕರಾಗಿ ಎಂ.ಎಂ. ನಾಗರಾಜಪ್ಪ, ಅರುಣ್ ಕುಮಾರ್, ರಿಜ್ವಾನ್ ತಬಸುಮ್, ಪಿ. ಸುಮಿತ್ರ, ಎಂ. ಪ್ರಭುಸ್ವಾಮಿ, ಕೆ.ಎಸ್. ಪ್ರವೀಣ್ ಕಾರ್ಯ ನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿಗಳ ಮಾತ್ರವಲ್ಲದೇ ಶಾಲೆಯ ಅಭಿವೃದ್ಧಿಗೆ ಹೆಚ್ಚಿನ ಶ್ರಮ ವಹಿಸುತ್ತಿದ್ದಾರೆ.

ಈ ಶಾಲೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ಶಾಲೆಯ ghskumbarkoppalmysorenorth.netlify.app ವೆಬ್ ಸೈಟ್ ವೀಕ್ಷಿಸಬಹುದು.

ನಮ್ಮ ಸರ್ಕಾರಿ ಪ್ರೌಢಶಾಲೆಯಲ್ಲಿ 8 ರಿಂದ 10ನೇ ತರಗತಿವರೆಗೆ ಗುಣಮಟ್ಟದ ಶಿಕ್ಷಣ ಜೊತೆಗೆ ಉತ್ತಮ ಕಲಿಕಾ ವಾತಾವರಣ ಇದೆ. ಯಾವುದೇ ಖಾಸಗಿ ಶಾಲೆ ಕಡಿಮೆ ಇಲ್ಲದ ರೀತಿಯಲ್ಲಿ ಸೌಲಭ್ಯ ಇದೆ. ನುರಿತ ಶಿಕ್ಷಕರಿದ್ದು, ವಿದ್ಯಾರ್ಥಿಗಳಿಗೆ ಉಚಿತ ಸಮವಸ್ತ್ರ, ಮಧ್ಯಾಹ್ನದ ಊಟ, ಕಂಪ್ಯೂಟರ್ ಶಿಕ್ಷಣ, ವಿಜ್ಞಾನ ಪ್ರಯೋಗಾಲಯ, ಸ್ಮಾರ್ಟ್ ಬೋರ್ಡ್ ತರಗತಿ ಸೇರಿದಂತೆ ವಿವಿಧ ಸೌಲಭ್ಯ ಕಲ್ಪಿಸಲಾಗಿದೆ. ಹೀಗಾಗಿ, ಹೆಚ್ಚಿನ ಪೋಷಕರು ತಮ್ಮ ಮಕ್ಕಳನ್ನು ನಮ್ಮ ಶಾಲೆಗೆ ದಾಖಲಿಸಲು ಮುಂದಾಗಬೇಕು.

- ಆರ್. ಯೋಗಲಕ್ಷ್ಮಿ, ಮುಖ್ಯೋಪಾಧ್ಯಾಯಿನಿ, ಸರ್ಕಾರಿ ಪ್ರೌಢಶಾಲೆ, ಕುಂಬಾರಕೊಪ್ಪಲು, ಮೈಸೂರು