ಸಾರಾಂಶ
ಗದಗ: ಕೌಟುಂಬಿಕ ಕಲಹಗಳಿಂದಾಗಿ ಮಹಿಳೆಯರು ಎದುರಿಸುವ ದೌರ್ಜನ್ಯಗಳಿಂದ ಅವರನ್ನು ಕಾನೂನಿನಡಿ ಸಂರಕ್ಷಿಸುವ ಕೆಲಸವಾಗಬೇಕಿದೆ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಸವರಾಜ ಹೇಳಿದರು. ಅವರು ಗುರುವಾರ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಪಂಚಾಯತ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಗದಗ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿರುವ ಎ.ಡಿ.ಆರ್ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿರುವ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆಯ ಅನುಷ್ಠಾನ ಕುರಿತ 2 ದಿನದ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಇಂದಿನ ದಿನಗಳಲ್ಲಿ ಕೌಟುಂಬಿಕ ಕಲಹಗಳಿಂದಾಗಿ ಮಹಿಳೆಯರನ್ನು ರಾತ್ರೋ ರಾತ್ರಿ ಹೊರ ಹಾಕುವಂತಹ ಘಟನೆ ನಡೆಯುತ್ತಿವೆ, ಇದು ಹೀನ ಕೃತ್ಯ. ಇಂತಹ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸಂಬಂಧಿತ ಇಲಾಖೆಗಳಿಗೆ ಒಂದೆಡೆ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಅನುಷ್ಠಾನ ಕುರಿತು ಪುನಶ್ಚೇತನ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಎಂದರು. ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ.ಐ. ಹಿರೇಮನಿಪಾಟೀಲ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಎಲ್ಲೆಡೆ ಕೌಟುಂಬಿಕ ಕಲಹಗಳು ಹೆಚ್ಚಾಗಿ ಕಂಡುಬರುತ್ತಿವೆ. ಈ ಹಿನ್ನೆಲೆಯಲ್ಲಿ ದೌರ್ಜನ್ಯಕ್ಕೊಳಗಾದವರಿಗೆ ಕಾನೂನು ರೀತಿ ನ್ಯಾಯ ದೊರಕಿಸಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಪರಶುರಾಮ ಶೆಟ್ಟೆಪ್ಪನವರ ಮಾತನಾಡಿ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಕಾಯ್ದೆ ಅನುಷ್ಠಾನಕ್ಕೆ ಸಂಬಂಧಿತ ಎಲ್ಲಾ ಇಲಾಖೆಗಳ ಸಹಕಾರ ಹಾಗೂ ಭಾಗವಹಿಸುವಿಕೆ ಅವಶ್ಯ ಎಂದರು.ಮುಖ್ಯ ಅತಿಥಿಗಳಾಗಿ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆ. ಗುರುಪ್ರಸಾದ ಪಾಲ್ಗೊಂಡಿದ್ದರು. ಜಿಲ್ಲಾ ನಿರೂಪಣಾಧಿಕಾರಿ ರಾಧಾ ಮಣ್ಣೂರ ಉಪಸ್ಥಿತರಿದ್ದರು. ಕಚೇರಿ ಅಧೀಕ್ಷಕಿ ಸುನಿತಾ ನಾಡಗೇರ ಕಾಯ್ದೆ ಸ್ವರೂಪ ಅನುಷ್ಠಾನಕ್ಕಾಗಿ ಸರ್ಕಾರ ಕೈಗೊಂಡಿರುವ ಕಾರ್ಯಕ್ರಮಗಳ ಕುರಿತು, ಮಹಿಳಾ ಸಂರಕ್ಷಣಾಧಿಕಾರಿ ರಾಜೇಶ್ವರಿ ಮೇಟಿ ಕಾಯ್ದೆ ಅನುಷ್ಠಾನದಲ್ಲಿ ಸಂರಕ್ಷಣಾಧಿಕಾರಿಗಳ ಪಾತ್ರದ ಕುರಿತು ಹಾಗೂ ವಕೀಲರಾದ ಬಸವರಾಜ ಸಂಶಿ ನ್ಯಾಯಾಲಯಗಳ ಆದೇಶಗಳ ಅನುಷ್ಠಾನ ಹಾಗೂ ದಂಡಾಧಿಕಾರಿಗಳೊಂದಿಗೆ ಸಮನ್ವಯ ಕುರಿತು ಉಪನ್ಯಾಸ ನೀಡಿದರು. ಹಿರಿಯ ಮೇಲ್ವಿಚಾರಕರಾದ ಪ್ರಭಾವತಿ ಮುದಿಗೌಡ್ರ ಸ್ವಾಗತಿಸಿದರು.