ಈ ಹಾಸ್ಟೆಲ್‌ನಲ್ಲಿ ಸಮಸ್ಯೆಗಳು ಒಂದೆರಡಲ್ಲ...!

| Published : Aug 06 2024, 12:36 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ಇಳಕಲ್ಲ ನಗರದ ಹೊರವಲಯದಲ್ಲಿರುವ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ್ ದಿಢೀರ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು. ಶಾಸಕರು ಭೇಟಿ ನೀಡಿದ ಸಂದರ್ಭದಲ್ಲಿ ವಸತಿ ನಿಲಯದಲ್ಲಿದ್ದ ಬಾಲಕಿಯರು ಅಲ್ಲಿನ ಸಮಸ್ಯೆಗಳ ಸರಮಾಲೆಗಳನ್ನೇ ಶಾಸಕರ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟರು.

ಕನ್ನಡಪ್ರಭ ವಾರ್ತೆ ಇಳಕಲ್ಲ

ನಗರದ ಹೊರವಲಯದಲ್ಲಿರುವ ಡಿ.ದೇವರಾಜ ಅರಸು ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ್ ದಿಢೀರ್ ಭೇಟಿ ನೀಡಿ ವ್ಯವಸ್ಥೆಯನ್ನು ಪರಿಶೀಲನೆ ನಡೆಸಿದರು. ಶಾಸಕರು ಭೇಟಿ ನೀಡಿದ ಸಂದರ್ಭದಲ್ಲಿ ವಸತಿ ನಿಲಯದಲ್ಲಿದ್ದ ಬಾಲಕಿಯರು ಅಲ್ಲಿನ ಸಮಸ್ಯೆಗಳ ಸರಮಾಲೆಗಳನ್ನೇ ಶಾಸಕರ ಮುಂದೆ ಎಳೆಎಳೆಯಾಗಿ ಬಿಡಿಸಿಟ್ಟರು.

ಈ ವೇಳೆ ಮಾತನಾಡಿದ ಬಾಲಕಿಯರು, ಇಲ್ಲಿನ ಸಮಸ್ಯೆಗಳು ಒಂದಲ್ಲ ಎರಡಲ್ಲ ಬಹಳಷ್ಟಿವೆ ಎಂದು ಅಳಲು ತೋಡಿಕೊಂಡರು. ಸಮಸ್ಯೆಗಳ ಬಗ್ಗೆ ವಾರ್ಡನ್‌ಗೆ ಹೇಳಿದರೆ, ನಮ್ಮ ಚಾರಿತ್ರ್ಯದ ಬಗ್ಗೆ ಮಾತನಾಡುತ್ತಾರೆ. ಮನೆಗೆ ಫೋನ್ ಮಾಡುವಂತೆ ಸುಮ್ಮನೆ ಅಪವಾದ ಮಾಡುತ್ತಾರೆ. ಫ್ಯಾನ್ ಕೆಟ್ಟು ಹೋಗಿದೆ ಮಾಡಿಸಿ ಎಂದರೆ ಒಂದು ತಿಂಗಳುವರೆಗೂ ಆಗಲ್ಲ ಎನ್ನುತ್ತಾರೆ, ಫ್ಯಾನ್ ಸೌಂಡ್ ಆಗಿ ಬೀಳುವ ಹಂತದಲ್ಲಿದೆ ಎಂದು ಹೇಳಿದರೆ ಬಿದ್ದರ ಬೀಳಲಿ ಎಂದು ನಮ್ಮನ್ನೇ ಹೆದರಿಸುತ್ತಾರೆ. ಈ ಬಗ್ಗೆ ಹೇಳಿ ಹೇಳಿ ಸಾಕಾಗಿದ್ದು, ಸುಮ್ಮನಿರಬೇಕಾದ ಪರಿಸ್ಥಿತಿ ಬಂದಿದೆ ಎಂದು ವಿದ್ಯಾರ್ಥಿನಿಯರು ಶಾಸಕರ ಗಮನಕ್ಕೆ ತಂದರು.

ಊಟದ ವ್ಯವಸ್ಥೆಯಲ್ಲಿ ಕೂಡ ಅವ್ಯವಸ್ಥೆ ಇದ್ದು, ಬಾಲಕಿಯರು ತಮ್ಮ ಮೊಬೈಲ್‌ನಲ್ಲಿನ ದಾಖಲೆಗಳನ್ನು ಶಾಸಕರಿಗೆ ತೋರಿಸಿದರು. ಊಟದಲ್ಲಿ ಹುಳುಗಳು ಇದ್ದರೂ ಹಾಗೆ ಊಟ ಮಾಡಿ ಎನ್ನುತ್ತಾರೆ. ಸರಿಯಾಗಿ ಊಟ ನೀಡಿ ಎಂದರೆ ಜಬರ್‌ದಸ್ತ್‌ ಮಾಡುತ್ತಾರೆ. ಅಲ್ಲದೆ ಕುಡಿಯುವ ನೀರಿಗೂ ತೊಂದರೆ ಇದೆ.

ಹೀಗಾಗಿ ನಮಗೆ ತೊಂದರೆ ನೀಡುತ್ತಿರುವ ವಾರ್ಡನ್‌ ಅನ್ನು ಮೊದಲು ಬದಲಾವಣೆ ಮಾಡಿ. ಸರಿಯಾಗಿ ಓದಿಕೊಂಡು ಇಲ್ಲಿ ಇರಲು ಅವಕಾಶ ಮಾಡಿಕೊಡಿ ಎಂದು ಬಾಲಕಿಯರು ಮನವಿ ಪತ್ರ ಕೊಟ್ಟರು. ಅಲ್ಲದೆ ಶಾಸಕರ ಬಳಿ ಕಳಕಳಿಯಾಗಿ ವಿನಂತಿಸಿಕೊಂಡ ಪ್ರಸಂಗ ಕೂಡ ನಡೆಯಿತು.

ಹಾಸ್ಟೆಲ್‌ ವಿದ್ಯಾರ್ಥಿಗಳ ಸಮಸ್ಯೆಗಳನ್ನು ಆಲಿಸಿದ ಶಾಸಕ ವಿಜಯಾನಂದ ಕಾಶಪ್ಪನವರ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ವಸತಿ ನಿಲಯದ ವಾರ್ಡನ್ ಹಾಗೂ ಅಡಿಗೆ ಸಿಬ್ಬಂದಿಯನ್ನು ಬದಲಾವಣೆ ಮಾಡುವಂತೆ ಸೂಚನೆ ನೀಡಿದ್ದಾರೆ. ಆದಷ್ಟು ಬೇಗನೆ ಹೊಸ ಕಟ್ಟಡವಾದ ಬಾಲಕಿರ ವಸತಿ ನಿಲಯಕ್ಕೆ ಇವರಿಗೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಮೇಲಾಧಿಕಾರಿಗಳಾಗಿ ಪ್ರತಿ ನಿಲಯಗಳಿಗೆ ಭೇಟಿ ನೀಡಿ ಸಮಸ್ಯೆಗಳನ್ನು ಆಲಿಸಬೇಕು, ನಿಮ್ಮ ಕರ್ತವ್ಯ ಕೇವಲ ಆಫೀಸ್‌ನಲ್ಲಿ ಕುಳಿತುಕೊಳ್ಳುವುದಲ್ಲ ಎಂದು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.

ಯಾವುದೇ ಸಮಸ್ಯೆಗಳಿದ್ದರೆ ನನಗೆ ನೇರವಾಗಿ ಕರೆ ಮಾಡಿ ಎಂದು ಬಾಲಕಿಯರಿಗೆ ಶಾಸಕರು ಸೂಚನೆ ನೀಡಿದ್ದಾರೆ. ಇನ್ನು ಮುಂದೆ ಯಾವುದೇ ತೊಂದರೆ ಆಗುವುದಿಲ್ಲ ಎಂದು ಭರವಸೆ ನೀಡಿದ್ದು, ಚನ್ನಾಗಿ ಓದಿ ಭವಿಷ್ಯ ರೂಪಿಸಿಕೊಳ್ಳಿ ಎಂದು ಶುಭ ಹಾರೈಸಿದರು.

----------------------------------

ಕೋಟ್‌

ದೇವರಾಜ ಅರಸ್ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯಕ್ಕೆ ಭೇಟಿ ನೀಡಿದಾಗ ಸಮಸ್ಯೆಗಳು ಕಂಡುಬಂದಿವೆ. ಅಲ್ಲದೇ ವಿದ್ಯಾರ್ಥಿಗಳು ಹಲವಾರು ಸಮಸ್ಯೆಗಳನ್ನು ಹೇಳಿದ್ದಾರೆ. ಊರು ಬಿಟ್ಟು ಓದಲು ಬಂದ ಮಕ್ಕಳಿಗೆ ತೊಂದರೆಯಾಗಬಾರದು. ಸಮಸ್ಯೆಗಳನ್ನು ಬಗೆಹರಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ.

- ವಿಜಯಾನಂದ ಕಾಶಪ್ಪನವರ್, ಶಾಸಕರು.