ಸಾರಾಂಶ
ಊರಿಗೊಂದು ಗೌರವ, ಮನೆಗೊಂದು ವಿಳಾಸ, ಬದುಕಿಗೊಂದು ನೆಮ್ಮದಿ
ಕನ್ನಡಪ್ರಭ ವಾರ್ತೆ ಹೊಸಪೇಟೆಲಂಬಾಣಿ, ಬೋವಿ, ಗೊಲ್ಲ, ಕಾವಲಿ, ಸೊಲಿಗ, ಕಾಡು ಕುರುಬ, ನಾಯಕ ಹಾಗೂ ಅಲೆಮಾರಿಗಳು ವಾಸಿಸುವ ತಾಂಡಾ, ಹಾಡಿ, ಹಟ್ಟಿ, ಮಜೆರೆ, ಕ್ಯಾಂಪ್ ಸೇರಿದಂತೆ ದಾಖಲೆ ರಹಿತ ಗ್ರಾಮಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿ ಸರ್ಕಾರದಿಂದ ಶಾಶ್ವತ ಪರಿಹಾರ ದೊರಕಿಸಲಾಗಿದೆ. 1,11,111 ಕುಟುಂಬಗಳಿಗೆ ಮನೆ ಹಕ್ಕುಪತ್ರ ನೀಡಲಾಗುತ್ತಿದ್ದು, ಇದೊಂದು ಐತಿಹಾಸಿಕ ಕಾರ್ಯಕ್ರಮವಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಬನ್ನಿಸಿದರು.
ಮಂಗಳವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಂದಾಯ ಇಲಾಖೆ ಹಾಗೂ ವಿಜಯನಗರ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾದ ‘ಪ್ರಗತಿಯತ್ತ ಕರ್ನಾಟಕ-ಸಮರ್ಪಣೆ ಸಂಕಲ್ಪ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.ದಾಖಲೆಗಳು ಇಲ್ಲದೆ ಇರುವ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನು ಪರಿವರ್ತಿಸಿ, ಅಲ್ಲಿ ವಾಸಿಸುವ ಕುಟುಂಬಗಳಿಗೆ ಮನೆಗಳಿಗೆ ಹಕ್ಕುಪತ್ರ ನೀಡಿ, ಊರಿಗೊಂದು ಗೌರವ, ಮನೆಗೊಂದು ವಿಳಾಸ, ಬದುಕಿಗೊಂದು ನೆಮ್ಮದಿಯನ್ನು ರಾಜ್ಯ ಸರ್ಕಾರ ನೀಡಿದೆ. ಶತಮಾನಗಳಿಂದ ಜನವಸತಿ ಇದ್ದರೂ, ಗ್ರಾಮ ಎನ್ನುವ ಮಾನ್ಯತೆ ಇಲ್ಲದ ಕಾರಣ ಈ ಊರುಗಳಿಗೆ ಸೌಕರ್ಯ ನೀಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಕುಟುಂಬಗಳು ಆಶ್ರಯ ಯೋಜನೆಯ ಲಾಭವನ್ನು ಸಹ ಪಡೆಯಲಾಗುತ್ತಿರಲಿಲ್ಲ. ಮನೆ ಆಸ್ತಿ ವರ್ಗಾವಣೆಯು ಸಾಧ್ಯವಿರಲಿಲ್ಲ. ಈ ಸಮಸ್ಯೆಗಳಿಗೆ ಸರ್ಕಾರ ಅಂತ್ಯ ಹಾಡಿದೆ. ಸರ್ಕಾರ ಬರಿ ಹಕ್ಕುಪತ್ರಗಳನ್ನು ಮಾತ್ರ ನೀಡುತ್ತಿಲ್ಲ. ನೋಂದಣಿ ಕಚೇರಿಯಲ್ಲಿ ಸ್ವತಃ ತಹಸೀಲ್ದಾರರು ಮನೆ ಆಸ್ತಿಯನ್ನು ವಾರಸುದಾರರಿಗೆ ನೋಂದಣಿ ಮಾಡಿಕೊಡುತ್ತಾರೆ. ಗ್ರಾಮ ಪಂಚಾಯಿತಿಯಿಂದ ಫಾರಂ-11ಇ ಸೇರಿದಂತೆ ಖಾತೆ ದಾಖಲೆಗಳನ್ನು ಸಹ ನೀಡಲಾಗುತ್ತದೆ. ಅನಿಶ್ಚಿತತೆಯ ಬದುಕಿಗೆ ನಿಶ್ಚಿತತೆಯ ಆಧಾರ ಕಲ್ಪಿಸಿ ಇಂದು ಜನರಿಗೆ ಸಮರ್ಪಿಸಲಾಗುತ್ತಿದೆ ಎಂದು ಕಂದಾಯ ಸಚಿವರು ತಿಳಿಸಿದರು.
ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷ ಸಂದಿದೆ. ಜನರು ನೀಡಿದ ಅಧಿಕಾರವನ್ನು ಜನರ ಸೇವೆಗಾಗಿಯೇ ಮುಡಿಪು ಇಟ್ಟಿದ್ದೇವೆ. ಪಂಚ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ, ಇದುವರೆಗೂ 90 ಸಾವಿರ ಕೋಟಿಯಷ್ಟು ಹಣವನ್ನು, ರಾಜ್ಯದ 5 ಕೋಟಿ ಜನರಿಗೆ ನೇರವಾಗಿ ತಲುಪಿಸುವ ಮೂಲಕ ಜನರಿಗೆ ಶಕ್ತಿ ತುಂಬಲಾಗಿದೆ. ಕಂದಾಯ ಇಲಾಖೆಯ ದಶಕಗಳ ಸಮಸ್ಯೆಗಳಿಗೆ ಪರಿಹಾರ ನೀಡಿದ್ದೇವೆ. ಜನರನ್ನು ಕಚೇರಿಗೆ ಅಲೆದಾಡಿಸದೇ ಮನೆ ಬಾಗಿಲಿಗೆ ತೆರಳಿ ಸೇವೆ ನೀಡುತ್ತಿದ್ದೇವೆ. ತಂತ್ರಜ್ಞಾನ ಹಾಗೂ ಹೆಚ್ಚಿನ ಸಿಬ್ಬಂದಿ ಬಳಸಿ ಪಾರದರ್ಶಕವಾಗಿ ಕೆಲಸ ಮಾಡುತ್ತಿದ್ದೇವೆ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲಾಗಿದೆ ಎಂದರು.ರೈತರ ಜಮೀನು ಆರ್‌ಟಿಸಿಗಳಿಗೆ ಆಧಾರ ಜೋಡಣೆ ಕಾರ್ಯ ಮಾಡಲಾಗುತ್ತಿದೆ. ರಾಜ್ಯಾದ್ಯಂತ ಮೃತರ ಹೆಸರನಲ್ಲಿರುವ 52 ಲಕ್ಷ ಆಸ್ತಿಗಳನ್ನು ವಾರಸುದಾರರಿಗೆ ವರ್ಗಾಯಿಸಲಾಗುತ್ತಿದೆ. ಕೇವಲ 6 ತಿಂಗಳಲ್ಲಿ 30 ಸಾವಿರ ಆಸ್ತಿಗಳ ದರಖಾಸ್ತು ಮಾಡಿ ದಾಖಲೆ ನಿರ್ಮಿಸಲಾಗಿದೆ. ಈಗಾಗಲೇ 1.6 ಲಕ್ಷ ಪೋಡಿ ಮಾಡಲಾಗಿದ್ದು, ಮುಂಬರುವ ವರ್ಷದಲ್ಲಿ 2 ಲಕ್ಷ ಪೋಡಿ ಮಾಡುವ ಗುರಿ ಹೊಂದಲಾಗಿದೆ. ಆಸ್ತಿ ಹದ್ದುಬಸ್ತು ಕೋರಿಕೆ ಸಲ್ಲಿಕೆಯಾಗುವ ಅರ್ಜಿಗಳನ್ನು ಕೇವಲ 6 ದಿನದಲ್ಲಿ ಪರಿಹರಿಸಲಾಗುತ್ತಿದೆ. ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ತಹಸೀಲ್ದಾರ್ ಹಂತದಲ್ಲಿದ್ದ 10,747 ಬಾಕಿ ಕೇಸುಗಳು ಈಗ 600ಕ್ಕೆ ಇಳಿದಿದೆ. ಭೂಸುರಕ್ಷಾ ಕಾರ್ಯಕ್ರಮದ ಮೂಲಕ ಸರ್ಕಾರಿ ಆಸ್ತಿ ರಕ್ಷಣೆ ಕ್ರಮ ಕೈಗೊಂಡಿದ್ದು, ಲ್ಯಾಂಡ್ ಬೀಟ್ ವ್ಯವಸ್ಥೆ ಜಾರಿ ಮಾಡಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಈ ಸಂದರ್ಭದಲ್ಲಿ ಹೇಳಿದರು.
ಬರಗಾಲದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಸಕಾಲದಲ್ಲಿ ನೆರವು ನೀಡದೆ ತೊಂದರೆ ಉಂಟಾಗಿತ್ತು. ಈ ಹಿನ್ನಲೆಯಲ್ಲಿ ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಕೇಂದ್ರ ಸರ್ಕಾರದಿಂದ ₹3450 ಕೋಟಿ ಪರಿಹಾರ ಪಡೆದು, ರಾಜ್ಯ ರೈತರಿಗೆ ನೀಡಲಾಗಿದೆ. ಕಂದಾಯ ಇಲಾಖೆ ಸೇವೆಗಳಲ್ಲಿ ಸುಧಾರಣೆ ತಂದು ಭೂ ಗ್ಯಾರೆಂಟಿ ನೀಡುವುದು ಸರ್ಕಾರ ಅಂತಿಮ ಗುರಿಯಾಗಿದೆ. ಇದರಲ್ಲಿ ರಾಜ್ಯದ ಎಲ್ಲ ಕಂದಾಯ ಇಲಾಖೆ ಅಧಿಕಾರಿಗಳ ಶ್ರಮವಿದೆ. ಜನರು ನೀಡಿದ ಅಧಿಕಾರದಿಂದ ಸಾಧನೆಯ ಸಮರ್ಪಣೆ ಇಂದು ಸಾಧ್ಯವಾಗಿದೆ. ಬರುವ ವರ್ಷದಲ್ಲಿ ಇನ್ನಷ್ಟು ಸೇವೆ ಮಾಡಲು ಪ್ರತಿಜ್ಞೆ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.ಕಂದಾಯ ಗ್ರಾಮ ಘೋಷಿಸುವಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ರಾಜ್ಯಸಭೆಯ ವಿರೋಧ ಪಕ್ಷದ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಪ್ರೇರಣೆಯಾಗಿದ್ದನ್ನು ಸ್ಮರಿಸಿದರು. 2015ರಲ್ಲಿ ರಾಹುಲ್ ಗಾಂಧಿ ಹಾವೇರಿಗೆ ಭೇಟಿ ನೀಡಿದ್ದಾಗ ತಾಂಡಾಗಳ ಜನರ ಕಷ್ಟ ಆಲಿಸಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಘೋಷಿಸುವ ಭರವಸೆ ನೀಡಿದ್ದರು. ಇದೇ ರೀತಿ 1990ರಲ್ಲಿ ಅಂದು ರಾಜ್ಯದ ಕಂದಾಯ ಸಚಿವರಾಗಿದ್ದ ಮಲ್ಲಿಕಾರ್ಜುನ ಖರ್ಗೆ ಸಹ ಈ ಯೋಜನೆಗೆ ಹಸ್ತಿಬಾರ ಹಾಕಿದ್ದರು. ಈ ಅಂಶಗಳನ್ನು ಮನದಲ್ಲಿ ಇಟ್ಟುಕೊಂಡು ರಾಜ್ಯ ಸರ್ಕಾರ ದಾಖಲೆ ಇಲ್ಲದ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ಪರಿವರ್ತಿಸಿದೆ ಎಂದು ಸಚಿವ ಬೈರೇಗೌಡ ಹೇಳಿದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))