ಈ ಬಾರಿ ಸೇಡು ತೀರಿಸಿಕೊಳ್ಳುವ ಚುನಾವಣೆಯಲ್ಲ: ಬಿ.ವೈ.ರಾಘವೇಂದ್ರ

| Published : Apr 01 2024, 12:46 AM IST

ಈ ಬಾರಿ ಸೇಡು ತೀರಿಸಿಕೊಳ್ಳುವ ಚುನಾವಣೆಯಲ್ಲ: ಬಿ.ವೈ.ರಾಘವೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಪಕ್ಷದವರು ಈ ಬಾರಿ ಚುನಾವಣೆ ಸೇಡಿನ ರಾಜಕಾರಣ ಅನ್ನುತ್ತಿದ್ದಾರೆ, ಮತ್ತೊಬ್ಬರು ಯಡಿಯೂರಪ್ಪ ಕುಟುಂಬದ ವಿರುದ್ಧ ಅನ್ನುತ್ತಿದ್ದಾರೆ. ಇನ್ನೊಬ್ಬರು ರಾಘವೇಂದ್ರನನ್ನು ಸೋಲಿಸಲು ಅನ್ನುತ್ತಿದ್ದಾರೆ. ಆದರೆ ಇದು ಅಭಿವೃದ್ಧಿ ಪರ ಮತ್ತು ಮೋದಿಯವರ ಗೆಲ್ಲಿಸುವ ಚುನಾವಣೆ. ಈ ಬಾರಿ ರಾಘವೇಂದ್ರನನ್ನು ಗೆಲ್ಲಿಸುವ ಚುನಾವಣೆಯಲ್ಲ.

ಕನ್ನಡಪ್ರಭ ವಾರ್ತೆ ಭದ್ರಾವತಿ

ಈ ಬಾರಿ ಲೋಕಸಭಾ ಚುನಾವಣೆ ಸೇಡು ತೀರಿಸಿಕೊಳ್ಳುವ ರಾಜಕಾರಣವಲ್ಲ. ಅಭಿವೃದ್ಧಿಗಾಗಿ ಆದ್ಯತೆ ನೀಡುವ ರಾಜಕಾರಣ ಎಂದು ಬಿಜೆಪಿ ಅಭ್ಯರ್ಥಿ, ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ನಗರದ ಕೆಎಸ್‌ಆರ್‌ಟಿಸಿ ಡಿಪೋ ಸಮೀಪ ಬಿಜೆಪಿ ಕಾರ್ಯಾಲಯದಲ್ಲಿ ಪಕ್ಷದ ವತಿಯಿಂದ ಆಯೋಜಿಸಿದ್ದ ಭಾರತ ವಿಶ್ವಗುರು ಸಂಕಲ್ಪ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿ ಒಂದು ಪಕ್ಷದವರು ಈ ಬಾರಿ ಚುನಾವಣೆ ಸೇಡಿನ ರಾಜಕಾರಣ ಅನ್ನುತ್ತಿದ್ದಾರೆ, ಮತ್ತೊಬ್ಬರು ಯಡಿಯೂರಪ್ಪ ಕುಟುಂಬದ ವಿರುದ್ಧ ಅನ್ನುತ್ತಿದ್ದಾರೆ. ಇನ್ನೊಬ್ಬರು ರಾಘವೇಂದ್ರನನ್ನು ಸೋಲಿಸಲು ಅನ್ನುತ್ತಿದ್ದಾರೆ. ಆದರೆ ಇದು ಅಭಿವೃದ್ಧಿ ಪರ ಮತ್ತು ಮೋದಿಯವರ ಗೆಲ್ಲಿಸುವ ಚುನಾವಣೆ. ಈ ಬಾರಿ ರಾಘವೇಂದ್ರನನ್ನು ಗೆಲ್ಲಿಸುವ ಚುನಾವಣೆಯಲ್ಲ. ಭವಿಷ್ಯದ ದೃಷ್ಟಿಯಿಂದ ನಡೆಯುತ್ತಿರುವ ಚುನಾವಣೆ. ವಿಐಎಸ್‌ಎಲ್ ಕಾರ್ಖಾನೆ ೪ ವರ್ಷದ ಹಿಂದೆಯೇ ಮುಚ್ಚಬೇಕಿತ್ತು. ಆದರೂ ಉಳಿಸಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದರು.

ಉಡುಪಿ ಕ್ಷೇತ್ರದ ಮಾಜಿ ಶಾಸಕ ರಘುಪತಿ ಭಟ್ ಮಾತನಾಡಿ, ದೇಶದಲ್ಲಿ ಭಾರತೀಯತೆ ಉಳಿಯಲು ಮೋದಿ ಪ್ರಧಾನಿಯಾಗಬೇಕು. ಮೋದಿ ಪ್ರಧಾನಿ ಆಗಬೇಕೆಂದರೆ ರಾಘವೇಂದ್ರರನ್ನು ನೀವು ಗೆಲ್ಲಿಸಬೇಕು ಎಂದರು. ಮೋದಿಯವರ ಇಚ್ಛಾಶಕ್ತಿಯಿಂದ ರಾಮಮಂದಿರ ನಿರ್ಮಾಣವಾಯಿತು. ರಾಷ್ಟ್ರೀಯ ವಿಚಾರಗಳು ಮತ್ತು ಭಾರತೀಯ ಸಂಸ್ಕೃತಿ ಉಳಿಯಬೇಕಾದರೆ ಮೋದಿಯವರು ಮತ್ತೆ ಪ್ರಧಾನಿ ಆಗಬೇಕೆಂದರು.

ವಿಧಾನ ಪರಿಷತ್ ಸದಸ್ಯ ಎಸ್. ರುದ್ರೇಗೌಡ, ಮಾಜಿ ಸದಸ್ಯ ಎಂ.ಬಿ ಭಾನುಪ್ರಕಾಶ್, ಬಿಜೆಪಿ ಮಂಡಲ ಅಧ್ಯಕ್ಷ ಜಿ. ಧರ್ಮಪ್ರಸಾದ್, ಹಿರಿಯ ಮುಖಂಡರಾದ ವಿ.ಕದಿರೇಶ್, ಮಂಜುನಾಥ್, ಮಂಗೋಟೆ ರುದ್ರೇಶ್, ಜಿ. ಆನಂದ ಕುಮಾರ್, ಬಿ.ಕೆ ಶ್ರೀನಾಥ್, ಕೂಡ್ಲಿಗೆರೆ ಹಾಲೇಶ್, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾರದ ಅಪ್ಪಾಜಿ, ತಾಲೂಕು ಅಧ್ಯಕ್ಷ ಆರ್. ಕರುಣಾಮೂರ್ತಿ, ಗ್ರಾಮಾಂತರ ಅಧ್ಯಕ್ಷ ಧರ್ಮಕುಮಾರ್, ಜೆ.ಪಿ ಯೋಗೇಶ್ ಸೇರಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ವಿವಿಧ ಘಟಕಗಳ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಇದ್ದರು.