ಸಾರಾಂಶ
ಅಜೀಜಅಹ್ಮದ ಬಳಗಾನೂರ
ಕನ್ನಡಪ್ರಭ ವಾರ್ತೆ ಹುಬ್ಬಳ್ಳಿನಗರದ ಹಳೇ ಬಸ್ ನಿಲ್ದಾಣದ ಎದುರು ಕಳೆದ ಒಂದು ತಿಂಗಳಿನಿಂದ ಒಳಚರಂಡಿ ಬಂದ್ ಆಗಿ ರಸ್ತೆಯ ಮೇಲೆಯೇ ಕೊಳಚೆ ನೀರು ಹರಿದು ದುರ್ನಾತ ಬೀರುತ್ತಿದೆ.
ಹೊರಗಿನಿಂದ ಬರುವವರಿಗೆ ಹುಬ್ಬಳ್ಳಿ ಎಂದರೆ ಮೊದಲಿಗೆ ಕಣ್ಮುಂದೆ ಬರುವುದು ರಾಣಿ ಚೆನ್ನಮ್ಮ ವೃತ್ತ. ಅದರ ಪಕ್ಕದಲ್ಲಿರುವ ಹಳೇ ಬಸ್ ನಿಲ್ದಾಣ. ಆದರೆ, ಈಗ ಈ ಬಸ್ ನಿಲ್ದಾಣದ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ನಿಲ್ದಾಣದ ಹೊರಗಡೆ ಚರಂಡಿ ನೀರು ನಿಲ್ಲುತ್ತಿದೆ. ಹೊರಗಿನಿಂದ ಯಾರಾದರೂ ಮಹಾನಗರಕ್ಕೆ ಬಂದು ಇಳಿದರೆ ಸಾಕು ಅವರಿಗೆ ಮೊದಲಿಗೆ ದರ್ಶನವಾಗುವುದೇ ಈ ದುರ್ನಾತ ಬೀರುವ ಕೊಳಚೆ ನೀರು. ಪ್ರಯಾಣಿಕರು ಬಸ್ ಇಳಿಯುವ ವೇಳೆ ಇಲ್ಲಿನ ವ್ಯವಸ್ಥೆಯನ್ನು ಕಂಡು ಬೈಯುತ್ತ, ಮೂಗು ಮುಚ್ಚಿಕೊಳ್ಳುತ್ತಾರೆ.ಮೂಗು ಮುಚ್ಚಿಕೊಂಡೇ ನಿಲ್ಲಬೇಕು:
ಬೆಳಗಾದರೆ ಸಾಕು ಚರಂಡಿ ನೀರು ರಸ್ತೆಯಲ್ಲಿಯೇ ಹರಿಯುತ್ತಿದ್ದರೆ ವಾಹನ ಸವಾರರು ಇದೇ ದುರ್ನಾತ ಬೀರುವ ಕೊಳಕು ನೀರಲ್ಲಿ ಸಂಚರಿಸುತ್ತಾರೆ. ಕೊಳಚೆ ನೀರಿನ ಮೇಲೆ ವಾಹನಗಳು ಹಾದು ಹೋದರೆ ಸಾಕು ಅಲ್ಲಿ ಬೀರುವ ದುರ್ನಾತ ತಡೆಯಲು ಆಗುವುದಿಲ್ಲ. ಮೂಗು ಮುಚ್ಚಿಕೊಂಡೇ ಇಲ್ಲಿ ಸಂಚರಿಸಬೇಕು. ಇನ್ನು ಹಳೇ ಬಸ್ ನಿಲ್ದಾಣದ ಕಾಮಗಾರಿ ನಡೆಯುತ್ತಿದ್ದು, ನಿಲ್ದಾಣದ ಹೊರಭಾಗದಲ್ಲಿ ತಾತ್ಕಾಲಿಕವಾಗಿ ಬಸ್ ತಂಗುದಾಣದ ವ್ಯವಸ್ಥೆ ಮಾಡಲಾಗಿದೆ.ಇಲ್ಲಿ ನಿಲ್ಲುವವರು ಮೂಗು ಮುಚ್ಚಿಕೊಂಡೇ ನಿಲ್ಲುವ ಪರಿಸ್ಥಿತಿ ಎದುರಾಗಿದೆ. ಎದುರಿಗಿರುವ ಬಿಆರ್‌ಟಿಎಸ್ ಬಸ್ ನಿಲ್ದಾಣದಲ್ಲಿ ನಿಲ್ಲುವ ಪ್ರಯಾಣಿಕರಿಗೂ ಇದು ಕಿರಿಕಿರಿ ಆಗುತ್ತಿದೆ.
ಸಾಂಕ್ರಾಮಿಕ ರೋಗದ ಭೀತಿ:ಚರಂಡಿ ನೀರು ರಸ್ತೆಯ ಮೇಲೆಯೇ ಕೊಳದಂತೆ ನಿಲ್ಲುತ್ತಿದ್ದು, ಇದರಿಂದಾಗಿ ಸೊಳ್ಳೆಗಳ ಹಾವಳಿ ಹೆಚ್ಚಾಗಿದೆ. ಸಂಜೆಯಾದರೆ ಸಾಕು ಸೊಳ್ಳೆಗಳ ಕಾಟಕ್ಕೆ ಅಂಗಡಿಗಳಲ್ಲಿ ಕುಳಿತುಕೊಳ್ಳದ ಸ್ಥಿತಿ ನಿರ್ಮಾಣವಾಗಿದೆ. ನಿತ್ಯ ದುರ್ನಾತ ಸೇವಿಸಿ ಸಾಂಕ್ರಾಮಿಕ ರೋಗಗಳು ಆವರಿಸುವ ಭಯದಲ್ಲಿ ಕಾಲಕಳೆಯುತ್ತಿದ್ದಾರೆ ಜನ. ಸೊಳ್ಳೆಗಳಿಗೆ ಅಂಜಿ ಸಂಜೆಯಾಗುತ್ತಿದ್ದಂತೆ ಈ ಭಾಗದ ಹಲವರು ಅಂಗಡಿಗಳನ್ನು ಬಂದ್ ಮಾಡುತ್ತಿದ್ದಾರೆ.
ಹೊಸ ಪೈಪ್ಲೈನ್ಹಳೇ ಬಸ್ ನಿಲ್ದಾಣದ ಎದುರಿಗಿರುವ ರೇಣುಕಾ ಹೊಟೇಲ್‌ನ ಮುಂದಿನ ಒಳಚರಂಡಿ ಬಂದಾಗಿ ತಿಂಗಳು ಮೇಲೆಯೇ ಆಗಿದೆ. ದುರಸ್ತಿ ಮಾಡುತ್ತಿಲ್ಲ ಎಂಬುದು ಅಕ್ಕಪಕ್ಕದ ಅಂಗಡಿಯವರ ಆರೋಪ. ಪಾಲಿಕೆ ಅಧಿಕಾರಿಗಳನ್ನು ಕೇಳಿದರೆ ಈಗಾಗಲೇ ಈ ಒಳ ಚರಂಡಿಯನ್ನು 4-5 ಬಾರಿ ದುರಸ್ತಿ ಮಾಡಲಾಗಿದೆ. ಪದೇ ಪದೇ ಬಂದಾಗುತ್ತಿದೆ. ಕಳೆದ ಒಂದು ವಾರದಿಂದ ಬಸವ ವನದಿಂದ ಹೊಸದಾಗಿ ಒಳಚರಂಡಿ ಯೋಜನೆಗೆ ಪೈಪ್‌ಲೈನ್ ಹಾಕಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಳ್ಳುವ ವರೆಗೆ ಈ ಸಮಸ್ಯೆ ಇತ್ಯರ್ಥವಾಗುವುದಿಲ್ಲ ಎನ್ನುತ್ತಿದ್ದಾರೆ.
ಇಲ್ಲಿನ ಜನರು ಚರಂಡಿ ನೀರಿನಿಂದ ಹೊರಸೂಸುವ ದುರ್ವಾಸನೆಯಿಂದ ಅಂಗಡಿ ತೆರೆಯದಂತಹ ಸ್ಥಿತಿ ಉದ್ಭವವಾಗಿದೆ. ಈ ಕೊಳಚೆ ನೀರು ಹರಿದು ಹೋಗಲು ತಾತ್ಕಾಲಿಕವಾಗಿ ವ್ಯವಸ್ಥೆಯನ್ನಾದರೂ ಮಾಡಲಿ ಎಂಬುದು ಸ್ಥಳೀಯರ ಮನವಿ. ಆದರೆ, ಈ ವರೆಗೂ ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾದರೆ ನಾವು ಇಲ್ಲಿ ವ್ಯಾಪಾರ ಮಾಡುವುದಾದರೂ ಹೇಗೆ? ಎಂದು ಸ್ಥಳಿಯ ಅಂಗಡಿಗಳ ಮಾಲೀಕರು ಆಕ್ರೋಶ ವ್ಯಕ್ತಪಡಿಸುತ್ತಾರೆ.ಕಳೆದ ಒಂದು ತಿಂಗಳಿನಿಂದ ಒಳಚರಂಡಿ ಬಂದ್ ಆಗಿದೆ. ದುರಸ್ತಿಗಾಗಿ ಪಾಲಿಕೆ ಅಧಿಕಾರಿಗಳಿಗೆ ಕರೆ ಮಾಡಿ ಸಾಕಾಗಿದೆ. ಸಮಸ್ಯೆ ಮಾತ್ರ ಪರಿಹಾರವಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿ ಜಾಫರಅಲಿ ಶೇಖ್ ದೂರುತ್ತಾರೆ, ಬಸವವನದಿಂದ ಚೆನ್ನಮ್ಮ ವೃತ್ತದ ವರೆಗೆ ಒಳಚರಂಡಿಗಳಿಗೆ ಹೊಸ ಪೈಪ್‌ಲೈನ್ ಹಾಕುವ ಕಾರ್ಯ ನಡೆಯುತ್ತಿದೆ. ಇನ್ನೊಂದು ವಾರದೊಳಗೆ ಸಮಸ್ಯೆ ಪರಿಹರಿಸಲಾಗುವುದು ಎಂದು ಹು-ಧಾ ಮಹಾನಗರ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ತಿಳಿಸಿದ್ದಾರೆ.