ಇದು ರಸ್ತೆ ಅಲ್ಲ, ಇದು ಸುಂದರ ಸ್ವಿಮ್ಮಿಂಗ್ ಪೂಲ್!

| Published : Jul 17 2025, 12:31 AM IST

ಸಾರಾಂಶ

ಕೊಪ್ಪತಾಲೂಕಿನ ಕುಂಚೂರು ಗ್ರಾಮದಲ್ಲಿ ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ರಸ್ತೆಯ ದುಃಸ್ಥಿತಿಯ ವಿರುದ್ಧ ವಿನೂತನವಾಗಿ ಗ್ರಾಮದ ಯುವಕನೋರ್ವ ಆಕ್ರೋಶ ಹೊರ ಹಾಕಿದ್ದಾನೆ.

ಕನ್ನಡಪ್ರಭ ವಾರ್ತೆ, ಕೊಪ್ಪ

ತಾಲೂಕಿನ ಕುಂಚೂರು ಗ್ರಾಮದಲ್ಲಿ ಮಳೆಯಿಂದಾಗಿ ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು ರಸ್ತೆಯ ದುಃಸ್ಥಿತಿಯ ವಿರುದ್ಧ ವಿನೂತನವಾಗಿ ಗ್ರಾಮದ ಯುವಕನೋರ್ವ ಆಕ್ರೋಶ ಹೊರ ಹಾಕಿದ್ದಾನೆ.

ವೀಡಿಯೋ ಮೂಲಕ ಗ್ರಾಮ ಪಂಚಾಯತಿ ಅಧ್ಯಕ್ಷ ಮತ್ತು ಅಧಿಕಾರಿಗಳಿಗೆ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂದು ವ್ಯಂಗ್ಯವಾಡಿದ್ದಾರೆ.ನರಸೀಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂಚೂರು ಗ್ರಾಮದಲ್ಲಿ ಭಾರಿ ಮಳೆಗೆ ರಸ್ತೆಯಲ್ಲಿ ನೀರು ತುಂಬಿ ಸಾರ್ವಜನಿಕರು ಓಡಾಡದಂತಾಗಿದ್ದು ಇದನ್ನು ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಾಕಿ, "ಇದು ರಸ್ತೆ ಅಲ್ಲ, ಇದು ನಮ್ಮ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಅಧಿಕಾರಿಗಳಿಂದ ನಿರ್ಮಾಣವಾದ ಸುಂದರ ಸ್ವಿಮ್ಮಿಂಗ್ ಪೂಲ್! ಉದ್ಘಾಟನೆಗೆ ಬಾರದವರು ಪ್ರಶಸ್ತಿಗೆ ಪಾತ್ರರು” ಎಂಬ ವ್ಯಂಗ್ಯ ಮಾತುಗಳಿಂದ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಗ್ರಾಮದ ರಸ್ತೆ ನೀರಿನಿಂದ ಕೂಡಿದ್ದು, ಸ್ಥಳೀಯರು ನಿತ್ಯದ ಸಂಚಾರದಲ್ಲಿ ಸಂಕಷ್ಟ ಅನುಭವಿಸುತ್ತಿದ್ದರೂ ಯಾವುದೇ ರೀತಿ ರಸ್ತೆ ನಿರ್ವಹಣೆಯ ಕುರಿತು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕ್ರಮ ಕೈಗೊಂಡಿಲ್ಲವೆಂದು ಆರೋಪಿಸಲಾಗಿದೆ. ಈ ಬೆನ್ನಲ್ಲೇ ಯುವಕನ ವಿಡಿಯೋ ವೈರಲ್ ಆಗಿದ್ದು, ಜಿಲ್ಲೆಯಲ್ಲಿ ಗ್ರಾಮೀಣ ರಸ್ತೆಗಳ ಸ್ಥಿತಿಗತಿ ಬಗ್ಗೆ ಚರ್ಚೆ ಆರಂಭಗೊಂಡಿದೆ.ತಹಸೀಲ್ದಾರ್ ಲಿಖಿತಾ ಮೋಹನ್‌, ತಾ.ಪಂ ಕಾರ್ಯನಿರ್ವಹಣಾಧಿಕಾರಿ ನವೀನ್‌ ಕುಮಾರ್‌ ಸ್ಥಳಕ್ಕೆ ಭೇಟಿನೀಡಿ ಪರಿಶೀಲನೆ ನಡೆಸಿದ್ದಾರೆ.