ಕನ್ನಡಪ್ರಭ ವಾರ್ತೆ ಬೆಂಗಳೂರು

ಯಾರು ಮುಖ್ಯಮಂತ್ರಿ ಆಗಬೇಕು ಎಂಬುದರ ಬಗ್ಗೆ ಚರ್ಚಿಸಲು ಇನ್ನೂ ಸಮಯವಿದೆ. ಈಗಲೇ ಮಾತನಾಡಿದರೆ ಕೂಸು ಹುಟ್ಟುವ ಮುನ್ನವೇ ಕುಲಾವಿ ಹೊಲಿಸಿದಂತಾಗುತ್ತದೆ ಎಂದು ಕೇಂದ್ರ ಸಚಿವ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶನಿವಾರ ಪಕ್ಷದ ರಾಜ್ಯ ಕಚೇರಿ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ನಾವು ಇನ್ನೂ ಮಾಡಬೇಕಾದ ಕೆಲಸ ಬೇಕಾದಷ್ಟಿದೆ. ಈಗಲೇ ಮುಖ್ಯಮಂತ್ರಿ ಬಗ್ಗೆ ಮಾತನಾಡುವುದು ಸರಿಯಲ್ಲ. ರಾಜ್ಯದಲ್ಲಿ ಅತ್ಯಂತ ಕೆಟ್ಟ ಸರ್ಕಾರ ಇದೆ. ಅದನ್ನು ತೊಲಗಿಸಿ ಜನಪರ ಸರ್ಕಾರ ತರಬೇಕು. ಈ ಭ್ರಷ್ಟ ಕೆಟ್ಟ ಸರ್ಕಾರ ತೆಗೆಯುವುದೇ ನನ್ನ ಅಜೆಂಡಾ. ಜೆಡಿಎಸ್ ಮತ್ತು ಬಿಜೆಪಿ ಎರಡೂ ಸೇರಿ ಈ ಕೆಲಸ ಮಾಡುತ್ತೇವೆ ಎಂದರು.

ಮೈತ್ರಿ, ಸಿಎಂ ಸ್ಥಾನ ಮಾತಿಗೆ ಉತ್ತರ ಕೊಡಲ್ಲ:

ಕೆಲವರು ಮೈತ್ರಿ, ಮುಖ್ಯಮಂತ್ರಿ ಸ್ಥಾನದ ಬಗ್ಗೆ ಮಾತನಾಡುತ್ತಿದ್ದಾರೆ. ಅವರಿಗೆ ಉತ್ತರ ಕೊಡಬೇಕು ಎಂದು ನನಗೆ ಅನಿಸುತ್ತಿಲ್ಲ. ಒಂದು ವೇಳೆ ನಾನು ಅವರಿಗೆಲ್ಲ ಉತ್ತರ ಕೊಡುತ್ತಾ ಹೋದರೆ ನನಗೆ ಪ್ರಬುದ್ಧತೆ ಇಲ್ಲ ಎಂದು ಜನ ಅಂದುಕೊಳ್ಳುತ್ತಾರೆ. ಹೀಗಾಗಿ ನಾನು ಆ ಬಗ್ಗೆ ಮಾತಾಡುವುದಿಲ್ಲ. ಒಟ್ಟಾಗಿ ಮೈತ್ರಿಕೂಟ ಬಲಪಡಿಸುತ್ತೇವೆ, ಒಟ್ಟಾಗಿ ಚುನಾವಣೆ ಎದುರಿಸುತ್ತೇವೆ. ಜನಪರ ಸರ್ಕಾರ ತರುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.


ಎರಡೂ ಪಕ್ಷಗಳ ನಡುವೆ ಮಾತುಕತೆ ನಡೆದಿಲ್ಲ:

ಕೆಲ ವ್ಯಕ್ತಿಗಳ ಹೇಳಿಕೆ ಬಗ್ಗೆ ನಾನು ಚರ್ಚೆ ಮಾಡಲು ಹೋಗಲ್ಲ. ಒಂದೊಂದು ಪಕ್ಷದಲ್ಲಿ ಒಂದೊಂದು ರೀತಿ ಚರ್ಚೆ ಮಾಡುತ್ತಾರೆ. ಇದೇ ಅಂತಿಮ ಅಲ್ಲ. ವಿಧಾನಸಭೆ ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಇನ್ನೂ ನಾಲ್ಕೈದು ತಿಂಗಳು ಇದೆ. ಉಳಿದಂತೆ ಸ್ಥಳೀಯ ಸಂಸ್ಥೆಗಳು ಅಥವಾ ಗ್ರೇಟರ್ ಬೆಂಗಳೂರು ಚುನಾವಣೆ ಸಂಬಂಧ ಈವರೆಗೆ ಎರಡೂ ಪಕ್ಷಗಳ ನಡುವೆ ಮಾತುಕತೆ ನಡೆದಿಲ್ಲ. ಸಮಯ ಬಂದಾಗ ಖಂಡಿತಾ ಚರ್ಚಿಸಲಿದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಮೈತ್ರಿ ವಿಚಾರದಲ್ಲಿ ನಾವು ಮುಕ್ತ:

ಮೈತ್ರಿ ವಿಚಾರದಲ್ಲಿ ನಾನು, ನಮ್ಮ ಪಕ್ಷ ಮುಕ್ತವಾಗಿದ್ದೇವೆ. ಸಂದರ್ಭ ಬಂದಾಗ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ. ಮೈತ್ರಿ ವಿಚಾರದಲ್ಲಿ ಯಾವುದೇ ಗೊಂದಲ ಇಲ್ಲ, ಮುಂದೆಯೂ ಗೊಂದಲ ಆಗುವುದಿಲ್ಲ. ಇದು ನನ್ನ ನಿಲುವು ಎಂದು ಕೇಂದ್ರ ಸಚಿವರು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಶಾಸಕರು ವಿದೇಶ ಪ್ರವಾಸ ಕುರಿತು ಪ್ರಶ್ನೆಗೆ, ಅವರು ಎಲ್ಲಿಗಾದರೂ ಹೋಗಲಿ, ಅಧ್ಯಯನ ಮಾಡುವುದಕ್ಕೆ ಹೋದರೆ ಹೋಗಲಿ. ಆದರೆ ಜನ ಎದುರಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರ ನೀಡಲಿ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಒತ್ತಾಯಿಸಿದರು.

---

- ಕೋಟ್‌-ಸಾಲ ಹೊರಿಸಿದ್ದೇ ಸಾಧನೆ

ನಾಡಿನ ಜನರ ಮೇಲೆ ಸಾಲ ಹೊರಿಸಿರುವುದೇ ಕಾಂಗ್ರೆಸ್‌ ಸರ್ಕಾರದ ದೊಡ್ಡ ಅಭಿವೃದ್ಧಿ. 33 ಸಚಿವರೂ ಸಂಪದ್ಭರಿತವಾಗಿದ್ದಾರೆ. ಯಾರೂ ಸಾಲಗಾರರಾಗಿಲ್ಲ. ಇದೇ ಕಾಂಗ್ರೆಸ್‌ ಸರ್ಕಾರದ ಸಾಧನೆ.

-ಎಚ್‌.ಡಿ.ಕುಮಾರಸ್ವಾಮಿ, ಕೇಂದ್ರ ಸಚಿವ