ಇದು ನಿಜಕ್ಕೂ ಕಾಡು ಗೊಲ್ಲರಹಟ್ಟಿ

| Published : Apr 28 2025, 12:45 AM IST

ಸಾರಾಂಶ

ತಾಪಂ, ಗ್ರಾಪಂ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬರ ಒತ್ತಡಕ್ಕೆ ಮಣಿದ ಪರಿಣಾಮ ತಾಲೂಕಿನ ಮುಗದಾಳಬೆಟ್ಟ ಕಾಡುಗೊಲ್ಲರ ಹಟ್ಟಿಯ ಅಭಿವೃದ್ಧಿ ಎನ್ನೋದು ಮರೀಚಿಕೆ ಆಗಿದೆ.

ಜೆ, ನಾಗೇಂದ್ರ

ಕನ್ನಡಪ್ರಭ ವಾರ್ತೆ ಪಾವಗಡ ತಾಪಂ, ಗ್ರಾಪಂ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳೀಯ ಪ್ರಭಾವಿ ವ್ಯಕ್ತಿಯೊಬ್ಬರ ಒತ್ತಡಕ್ಕೆ ಮಣಿದ ಪರಿಣಾಮ ತಾಲೂಕಿನ ಮುಗದಾಳಬೆಟ್ಟ ಕಾಡುಗೊಲ್ಲರ ಹಟ್ಟಿಯ ಅಭಿವೃದ್ಧಿ ಎನ್ನೋದು ಮರೀಚಿಕೆ ಆಗಿದೆ. ಮನೆಮನೆಗೆ ಶೌಚಗೃಹ ಕಲ್ಪಿಸದೆ ಇರುವ ಕಾರಣ ಬಯಲೇ ಇಲ್ಲಿನ ಮಹಿಳೆಯರಿಗೆ ಶೌಚಗೃಹವಾಗಿದೆ. ಮನೆಯ ಬಳಿ ಹಳೇ ಸೀರೆಗಳಿಂದ ಸುತ್ತುವರಿದ ಬಟ್ಟೆ ಡೇರೆಗಳ ನಡುವೆಯೇ ಸ್ನಾನ ಮಾಡುವ ದುಸ್ಥಿತಿಯಿದೆ.

ಕಳೆದ ಎರಡು ತಲೆಮಾರುಗಳಿಂದ ಗೊಲ್ಲರಹಟ್ಟಿಯಲ್ಲಿ ಸುಮಾರು 40ಕ್ಕಿಂತ ಹೆಚ್ಚು ಕುಟುಂಬಗಳು ನೆಲೆಯಾಗಿವೆ. ಇವರು ಮುಗದಾಳಬೆಟ್ಟ ಸರ್ವೆ ನಂ.166/1ರ ಎರಡು ಎಕರೆ ನಾಲ್ಕು ಗುಂಟೆ ಸರ್ಕಾರಿ ಖರಾಬಿನಲ್ಲಿ ವಾಸವಾಗಿದ್ದು ಈ ಜಮೀನು ಸರ್ಕಾರಿ ಖರಾಬು ಎಂದು ಜಿಲ್ಲಾಧಿಕಾರಿಯಿಂದ ದೃಢಪಟ್ಟಿದೆ. ಇದೇ ಸರ್ವೆ ನಂ.ಪಹಣಿಯಲ್ಲಿಯೂ ಗೊಲ್ಲರಹಟ್ಟಿ ಎಂದು ನಮೂದಾಗಿದೆ.ಹೀಗಿದ್ದರೂ ಸರ್ಕಾರದ ನಿಯಮಾನುಸಾರ ವಾಸದ ದಾಖಲೆ ಕಲ್ಪಿಸಲು ಅವಕಾಶವಿದ್ದರೂ ಮನೆಗಳ ಖಾತೆ ಹಾಗೂ ಇತರೆ ಸರ್ಕಾರದ ಸೌಲಭ್ಯ ಕಲ್ಪಿಸುವಲ್ಲಿ ತಾಪಂ ಇಒ ಜಾನಕಿರಾಮ್‌ ಹಾಗೂ ಗ್ರಾಪಂ ಪಿಡಿಒ ಮಂಜುನಾಥ್‌ ಮೀನಮೇಷ ಎಣಿಸುತ್ತಿರುವುದಾಗಿ ಅನೇಕ ಮಂದಿ ಇಲ್ಲಿನ ನೊಂದ ಕುಟುಂಬದ ನಾಗರಿಕರು ತಮ್ಮ ಒಡಲಾಳದ ನೋವು ವ್ಯಕ್ತಪಡಿಸಿದ್ದಾರೆ.ಅರ್ಧಕ್ಕೆ ನಿಂತ ಅಂಗನವಾಡಿ

ಇಲ್ಲಿನ ಜನತೆ ಹೈನುಗಾರಿಕೆ, ಕುರಿಮೇಕೆ ಸಾಕಾಣಿಕೆಯಿಂದ ಬದುಕು ಕಟ್ಟಿಕೊಂಡಿದ್ದು, ಇಲ್ಲಿನ ಪುಟಾಣಿ ಮಕ್ಕಳು ಹಾಗೂ ಪ್ರಾಥಮಿಕ ಹಾಗೂ ಪ್ರೌಢಶಾಲೆಗೆ ಹೋಗುವ ವಿದ್ಯಾರ್ಥಿಗಳು ಬೇರೆ ಗ್ರಾಮಗಳಿಗೆ ತೆರಳಿ ವ್ಯಾಸಂಗ ಮಾಡುತ್ತಿದ್ದಾರೆ. ಕಳೆದ ನಾಲ್ಕು ವರ್ಷದ ಹಿಂದೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ಹಣ ಬಿಡುಗಡೆಯಾಗಿದೆ. ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯ ಪರಿಣಾಮ ಅಂಗನವಾಡಿ ಕಟ್ಟದ ಅರ್ಧಕ್ಕೆ ನಿಂತಿದೆ. ಪರಿಣಾಮ ತಮ್ಮ ಮಕ್ಕಳನ್ನು ಎರಡು ಕಿಮೀ ದೂರದ ಅಂಗನವಾಡಿ ಕೇಂದ್ರಕ್ಕೆ ಬಿಡುವ ಮತ್ತು ಕರೆತರುವ ಕೆಲಸ ಮಾಡುತ್ತಿದ್ದಾರೆ.

ವಿದ್ಯುತ್‌ ಸಂಪರ್ಕ, ಚರಂಡಿ, ಸಿಸಿ ರಸ್ತೆ ಇಲ್ಲದೇ ಪಾಳುಬಿದ್ದ ಹಾಳೂರಲ್ಲಿ ವಾಸ ಮಾಡಿದಂತಿದೆ ನಮ್ಮ ಸ್ಥಿತಿ. ಸೊಳ್ಳೆ ಹಾಗೂ ಕ್ರೀಮಿಕೀಟದ ಹಾವಳಿಯಿಂದ ತತ್ತರಿಸಿದ್ದೇವೆ. ಜೆಜೆಎಂ ಅಡಿ ಮನೆಮನೆ ಕೊಳಾಯಿ ಅಳವಡಿಕೆ ಮಾಡಿಲ್ಲ. ಇಲ್ಲಿ ಗ್ರಾಪಂನ ಕುಡಿಯುವ ನೀರಿನ ಟ್ಯಾಂಕ್‌ ಇದ್ದು ಸ್ವಚ್ಛತೆ ಕಾಣದೇ ವರ್ಷಗಳೇ ಉರುಳಿವೆ. ಈ ಬಗ್ಗೆ ಗ್ರಾಪಂಗೆ ಭೇಟಿ ನೀಡಿ ಮನವಿ ಮಾಡಿದ್ದರೂ ಅಧಿಕಾರಿಗಳು ಉದಾಸೀನತೆ ತೋರುತ್ತಿದ್ದಾರೆ. ನಮ್ಮ ಗೋಳು ಕೇಳೋರೇ ಇಲ್ಲ ಎಂದು ಮಹಿಳೆಯರು ಅಳಲು ತೋಡಿಕೊಂಡಿದ್ದಾರೆ.ಬಾಕ್ಸ್‌... 1ಪ್ರಭಾವಿಗಳ ಒತ್ತಡಕ್ಕೆ ಮಣಿದ ಅಧಿಕಾರಿಗಳುಕಳೆದ ಹಲವಾರು ವರ್ಷಗಳಿಂದಲೂ ಕಾಡುಗೊಲ್ಲರಹಟ್ಟಿ ನಿವಾಸಿಗಳು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದರೂ ಅಧಿಕಾರಿಗಳ ಬೇಜವಾಬ್ದಾರಿ ಹಾಗೂ ಆಡಳಿತಗಾರರ ನಿರ್ಲಕ್ಷ್ಯದಿಂದಾಗಿ ಇವರಿಗೆ ನ್ಯಾಯ ಸಿಕ್ಕಿಲ್ಲ. ಪ್ರಭಾವಿ ವ್ಯಕ್ತಿಗಳು ಸಲ್ಲಿಸಿರುವ ತಕರಾರು ಅರ್ಜಿಯನ್ನೇ ನೆಪವಾಗಿಟ್ಟುಕೊಂಡು ಇಲ್ಲಿನ ನಿವಾಸಿಗಗಳಿಗೆ ಮೂಲ ಸೌಕರ್ಯ ಕಲ್ಪಿಸದೆ ಇರುವುದು ಯಾವ ನ್ಯಾಯ ಎನ್ನುವುದನ್ನು ಜಿಲ್ಲಾಧಿಕಾರಿಗಳೇ ಹೇಳಬೇಕಿದೆ. ಜಿಲ್ಲಾ ದಂಡಾಧಿಕಾರಿಗಳು ಸಹ ಅವರೇ ಆಗಿದ್ದು ಪಕ್ಕದ ಜಮೀನಿನ ಮಾಲೀಕ ನರಸಿಂಹಮೂರ್ತಿ ಅರ್ಜಿಗೆ ಅಷ್ಟೊಂದು ಮನ್ನಣೆ ನೀಡಿದ್ದೇಕೆ ಎಂಬುದಕ್ಕೆ ಅವರೇ ಉತ್ತರಿಸಬೇಕಿದೆ.

---------------

ಕೋಟ್‌... 1 ಅನೇಕ ವರ್ಷದಿಂದ 40ಕ್ಕಿಂತ ಹೆಚ್ಚು ಕಾಡುಗೊಲ್ಲ ಕುಟುಂಬಗಳು ವಾಸವಾಗಿವೆ. ಅಗತ್ಯ ದಾಖಲೆಗಳಿವೆ. ನಿವಾಸಿಗಳ ಮನೆಯ ಖಾತೆ ಮಾಡಿಕೊಡುವಲ್ಲಿ ತಾಪಂ ಇಒ ಹಾಗೂ ಗ್ರಾಪಂ ಪಿಡಿಒ ಉದಾಸೀನತೆ ತೋರುತ್ತಿದ್ದಾರೆ. ಇಲ್ಲಿನ ಸರ್ಕಾರಿ ಖರಾಬು ಜಾಗದ ಪಕ್ಕದಲ್ಲಿ ಸರ್ವೆ ನಂ.166 /2ರಲ್ಲಿ ಗ್ರಾಮದ ಪ್ರಭಾವಿ ವ್ಯಕ್ತಿ ವಾಸ್ತು ನರಸಿಂಹಮೂರ್ತಿ ಎನ್ನುವವರ ಜಮೀನಿದೆ. ಈ ಸರ್ಕಾರಿ ಖರಾಬು ನನಗೆ ಸೇರಿದೆ ಎಂದು ತಕರಾರು ಮಾಡುತ್ತಿದ್ದು ಇವರ ಪ್ರ‍ಭಾವಕ್ಕೆ ಒಳಗಾದ ಅಧಿಕಾರಿಗಳು ಕಳೆದ 20 ವರ್ಷದಿಂದ ಇದೇ ನೆಪವೊಡ್ಡಿ ಗೊಲ್ಲರಹಟ್ಟಿಗೆ ಸೌಲಭ್ಯ ಒದಗಿಸುತ್ತಿಲ್ಲ - ಸಿ.ರಾಮಪ್ಪ ಗೊಲ್ಲರಹಟ್ಟಿ, ವಕೀಲರು.

ಕೋಟ್‌ 2 ಸರ್ಕಾರ ಅನೇಕ ಯೋಜನೆ ರೂಪಿಸಿದೆ. ಆಧುನಿಕ ಯುಗದಲ್ಲಿ ಬದುಕುತ್ತಿದ್ದೇವೆ. ಸ್ವಂತ ಹಣದಲ್ಲಿ ಶೌಚಗೃಹ ಕಟ್ಟಿಕೊಳ್ಳಲು ಬಿಡುತ್ತಿಲ್ಲ. ಗ್ರಾಪಂ ಸಹ ಶೌಚಗೃಹ ಕಟ್ಟುತ್ತಿಲ್ಲ. ಬಟ್ಟೆ ಟೆಂಟ್‌ಗಳಲ್ಲಿ ಸ್ನಾನ ಹಾಗೂ ಬಹಿರ್ದೆಸೆಗೆ ರೈತರ ಜಮೀನುಗಳಿಗೆ ಹೋಗಬೇಕು. ಇಲ್ಲಿ ಜಮೀನು ಮಾಲೀಕರು ಫೋಟೋ ವಿಡಿಯೋ ಚಿತ್ರೀಕರಣ ನಡೆಸುತ್ತಾರೆ. ಇಲ್ಲಿನ ಸಮೀಪದ ಬೆಟ್ಟಕ್ಕೆ ಹೋದರೆ ಕರಡಿ ಹಾಗೂ ಚಿರತೆಗಳ ಭೀತಿ ಇದೆ.

- ಭಾಗ್ಯಲಕ್ಷ್ಮೀ ಸ್ಥಳೀಯ ನಿವಾಸಿ