ಇದು ಸನಾತನ ಧರ್ಮ ಉಳಿಸುವ ಚುನಾವಣೆ: ಯತ್ನಾಳ್

| Published : Apr 04 2024, 01:03 AM IST

ಸಾರಾಂಶ

ಮೋದಿ ಅವರ 10 ವರ್ಷದ ಆಡಳಿತ ಟ್ರೈಲರ್ ಮಾತ್ರ, ಪಿಚ್ಚರ್ ಬಾಕಿ ಹೈ. ಈ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿ ಆದರೆ ಪರಿವಾರ ವಾದ ನಿರ್ನಾಮ ಆಗುತ್ತದೆ. ದೇಶ ಉಳಿದರೆ ಹಿಂದುತ್ವ ಉಳಿಯುತ್ತದೆ ಅಂತ ಜನತೆಗೆ ಗೊತ್ತಾಗಿದೆ ಎಂದು ಯತ್ನಾಳ್‌ ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿಇದು ಮೋದಿ ಚುನಾವಣೆ ಅಲ್ಲ, ಇದು ಸನಾತಮ ಧರ್ಮ ಉಳಿಸುವ ಚುನಾವಣೆ ಎಂದು ಬಿಜೆಪಿ ನಾಯಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದರು.

ಅವರು ಉಡುಪಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ ಮಾತನಾಡಿದರು.

ಮೋದಿ ಅವರ 10 ವರ್ಷದ ಆಡಳಿತ ಟ್ರೈಲರ್ ಮಾತ್ರ, ಪಿಚ್ಚರ್ ಬಾಕಿ ಹೈ. ಈ ಚುನಾವಣೆಯಲ್ಲಿ ಮೋದಿ ಮತ್ತೆ ಪ್ರಧಾನಿ ಆದರೆ ಪರಿವಾರ ವಾದ ನಿರ್ನಾಮ ಆಗುತ್ತದೆ. ದೇಶ ಉಳಿದರೆ ಹಿಂದುತ್ವ ಉಳಿಯುತ್ತದೆ ಅಂತ ಜನತೆಗೆ ಗೊತ್ತಾಗಿದೆ ಎಂದರು.

ಬಿಜೆಪಿ ಬಂದ್ರೆ ಸಂವಿಧಾನ ಬದಲಾಯಿಸ್ತಾರೆ ಎಂದು ಕಾಂಗ್ರೆಸ್‌ನವರು ಸುಳ್ಳು ಹೇಳುತ್ತಿದ್ದಾರೆ. ಅಂಬೇಡ್ಕರ್ ಅವರ ಸಂವಿಧಾನ ಯಾರಿಂದಲೂ ಬದಲಾಯಿಸಲು ಸಾಧ್ಯವಿಲ್ಲ ಎಂದವರು ಹೇಳಿದರು.

ಕೇಜ್ರಿವಾಲ್ ಜೈಲಿಗೆ ಹೋಗಿದ್ದಾರೆ, ಮುಂದೆ ಡಿಂಗ್ರಿವಾಲನೂ, ಎಲ್ಲರೂ ಜೈಲಿಗೆ ಹೋಗ್ತಾರೆ, ಯಾರೂ ತಪ್ಪಿಸಿಕೊಳ್ಳುವುದಕ್ಕಾಗುವುದಿಲ್ಲ ಎಂದು ತಮ್ಮದೇ ಶೈಲಿಯಲ್ಲಿ ಮಾತನಾಡಿದರು. ಮಂಗಳೂರಿನ ಚೌಟ, ಉಡುಪಿಯ ಕೋಟ, ಕಾಂಗ್ರೆಸ್‌ಗೆ ಗೂಟ ಎಂದು ಹೇಳಿ ಭಾರಿ ಚಪ್ಪಾಳೆ ಗಿಟ್ಟಿಸಿಕೊಂಡರು.

ಮಾಜಿ ಸಚಿವ ಜೆ.ಸಿ.ಮಾಧುಸ್ವಾಮಿ ಮಾತನಾಡಿ, ಅಭಿವೃದ್ಧಿ ಮಾಡುವವರು ಬೇಕಾ, ಗ್ಯಾರಂಟಿ ನೀಡಿ ಓಟು ಕೇಳುವವರು ಬೇಕಾ ಮತದಾರರೇ ನಿರ್ಧರಿಸಿ ಎಂದರು.

ಮಾಜಿ ರಾ.ಪ್ರ. ಕಾರ್ಯದರ್ಶಿ ಸಿ.ಟಿ.ರವಿ ಮಾತನಾಡಿ, ಈ ಬಾರಿ ಬಿಜೆಪಿ ನೀತಿ, ನೇತೃತ್ವ ಮತ್ತು ನಿಯತ್ತಿನ ಆಧಾರದಲ್ಲಿ ಚುನಾವಣೆ ಎದುರಿಸುತ್ತಿದೆ ಎಂದರು.

ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿದರೆ ದೇಶ ಯಜಮಾನನಿಲ್ಲದ ಮನೆಯಂತಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮಂಗಳೂರು ಕ್ಷೇತ್ರದ ಅಭ್ಯರ್ಥಿ ಬೃಜೇಶ್ ಚೌಟ, ಮೋದಿ ಅವರ ವಿಕಸಿತ ಭಾರತ ಪರಿಕಲ್ಪನೆಗೆ ಪೂರಕವಾಗಿ ವಿಕಸಿತ ಅವಿಭಜಿತ ದ.ಕ. ಜಿಲ್ಲೆಯನ್ನಾಗಿ ಮಾಡಲು ತನ್ನನ್ನು ಮತ್ತು ಕೋಟ ಅವರನ್ನು ಆರಿಸಿ ಎಂದು ಕೇಳಿದರು.

ಉಡುಪಿ- ಚಿಕ್ಕಮಗಳೂರು ಕ್ಷೇತ್ರದ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಇದು ದೇಶದ ಭವಿಷ್ಯವನ್ನು ಬರೆಯುವ ಚುನಾವಣೆ, ಮೋದಿಗೆ ರಾಜಕೀಯ ವೃತ್ತಿಯಲ್ಲ, ಅದೊಂದು ವೃತ. ಲೋಕಸಭೆಯಲ್ಲಿ ಮೋದಿ ಅವರಿಗೆ ಬೆಂಬಲವಾಗಿ ಜನತೆಯ ಪರವಾಗಿ ಕೈ ಎತ್ತಲು ನಿಮ್ಮೂರಿನ ಈ ಹುಡುಗನಿಗೆ ಅವಕಾಶ ನೀಡಿ ಎಂದು ವಿನಂತಿಸಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧ್ಯಕ್ಷ ಕಿಶೋರ್ ಕುಮಾರ್ ಸ್ವಾಗತಿಸಿದರು.

ವೇದಿಕೆಯಲ್ಲಿ ಚಿಕ್ಕಮಗಳೂರು ಜಿಲ್ಲಾಧ್ಯಕ್ಷ ದೇವರಾಜ ಶೆಟ್ಟಿ, ದ.ಕ. ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ಯಶ್ಪಾಲ್ ಸುವರ್ಣ, ಕಿರಣ್ ಕೊಡ್ಗಿ, ವಿ.ಪ. ಸದಸ್ಯರಾದ ಪ್ರತಾಪ್ ಸಿಂಹ ನಾಯಕ್ ಮತ್ತು ಭೋಜೆ ಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ಮತ್ತು ರಂಜಿತ್ ಅಜಿತ್ ಕುಮಾರ್, ಉಭಯ ಪಕ್ಷಗಳ ನಾಯಕರಾದ ಆರಗ ಜ್ಞಾನೇಂದ್ರ, ಎಂ.ಕೆ.ಪ್ರಾಣೇಶ್, ಉದಯಕುಮಾರ್ ಶೆಟ್ಟಿ, ಕುಯಿಲಾಡಿ ಸುರೇಶ್ ನಾಯಕ್, ಜೀವರಾಜ್, ಕಲ್ಮುರಡಪ್ಪ, ರಘುಪತಿ ಭಟ್, ಮಟ್ಟಾರು ರತ್ನಾಕರ ಹೆಗ್ಡೆ, ಮಣಿರಾಜ್ ಶೆಟ್ಟಿ, ಕೃಷ್ಣ ಪಾಲೆಮಾರ್, ಶಿಲ್ಪ ಸುವರ್ಣ ಮತ್ತಿತರರಿದ್ದರು.

ಜಿಲ್ಲಾ ಪ್ರ.ಕಾರ್ಯದರ್ಶಿಗಳಾದ ರಾಘವೇಂದ್ರ ಕಿಣಿ ಕಾರ್ಯಕ್ರಮ ನಿರೂಪಿಸಿದರು. ರೇಶ್ಮಾ ಉದಯ ಶೆಟ್ಟಿ ವಂದಿಸಿದರು.