ಈ ಬಾರಿಯ ಬಜೆಟ್‌ ಗಾತ್ರ ₹3.80 ಲಕ್ಷ ಕೋಟಿ: ಸಿಎಂ ಸಿದ್ದರಾಮಯ್ಯ

| Published : Jan 30 2024, 02:06 AM IST / Updated: Feb 14 2024, 03:04 PM IST

Siddaramaiah

ಸಾರಾಂಶ

 2024-25ನೇ ಸಾಲಿನಲ್ಲಿ 3.80 ಲಕ್ಷ ಕೋಟಿ ರು. ಬಜೆಟ್ ಮಂಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ಕನ್ನಡಪ್ರಭ ವಾರ್ತೆ ತುಮಕೂರು

ರಾಜ್ಯ ಸರ್ಕಾರ ಜಾರಿಗೆ ತಂದಿರುವ ಐದು ಗ್ಯಾರಂಟಿ ಯೋಜನೆಗಳನ್ನು ಯಾವುದೇ ಕಾರಣಕ್ಕೂ ನಿಲ್ಲಿಸುವುದಿಲ್ಲ. ಈ ಯೋಜನೆಗಳ ಜಾರಿಯಿಂದಾಗಿ ಸರ್ಕಾರ ಆರ್ಥಿಕವಾಗಿ ದಿವಾಳಿಯೂ ಆಗಿಲ್ಲ. 

2024-25ನೇ ಸಾಲಿನಲ್ಲಿ 3.80 ಲಕ್ಷ ಕೋಟಿ ರು. ಬಜೆಟ್ ಮಂಡಿಸಲು ಯೋಜನೆ ರೂಪಿಸಲಾಗುತ್ತಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.

ತುಮಕೂರಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿ, ಕಳೆದ ವರ್ಷ 3.27 ಲಕ್ಷ ಕೋಟಿ ರು. ಬಜೆಟ್ ಮಂಡನೆ ಮಾಡಿದ್ದೆ. ಈ ಬಾರಿ 3.80 ಲಕ್ಷ ಕೋಟಿ ರು. ಬಜೆಟ್ ಮಂಡಿಸುತ್ತೇನೆ ಎಂದರು.

ಇಷ್ಟು ದೊಡ್ಡ ಗಾತ್ರದ ಬಜೆಟ್ ಮಂಡನೆ ಮಾಡುತ್ತೇವೆಂದರೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿವೆ ಎಂದರ್ಥ ಎಂದು ಹೇಳಿದ ಅವರು, ಸರ್ಕಾರ ಅಧಿಕಾರಕ್ಕೆ ಬಂದ 8 ತಿಂಗಳಲ್ಲಿ ಜಾರಿಗೆ ತಂದ ಐದು ಗ್ಯಾರಂಟಿ ಯೋಜನೆಗಳಾದ ಶಕ್ತಿ, ಗೃಹಲಕ್ಷ್ಮಿ, ಗೃಹಜ್ಯೋತಿ, ಅನ್ನಭಾಗ್ಯ ಹಾಗೂ ಯುವನಿಧಿಯಿಂದ ಸರ್ಕಾರದ ಖಜಾನೆ ಖಾಲಿಯಾಗಿದೆ.

ಸರ್ಕಾರ ಆರ್ಥಿಕವಾಗಿ ದಿವಾಳಿಯಾಗಿದೆ ಎನ್ನುವವರಿಗೆ ತುಮಕೂರಲ್ಲಿ ಆಯೋಜಿಸಿರುವ ಇಂಥ ಕಾರ್ಯಕ್ರಮಗಳೇ ಉತ್ತರವಾಗಲಿವೆ ಎಂದು ತಿಳಿಸಿದರು.

ಗ್ಯಾರಂಟಿ ಯೋಜನೆಗಳ ಜಾರಿಯಿಂದ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಕ್ರಮಗಳು ನಿಂತಿಲ್ಲ. ಹೊಸ ಹೊಸ ಅಭಿವೃದ್ಧಿ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ. 

ಬೆಲೆ ಏರಿಕೆಯಿಂದಾಗಿ ಎದುರಾಗಿದ್ದ ಸಂಕಷ್ಟವನ್ನು ಕಡಿಮೆ ಮಾಡುವ ಸಲುವಾಗಿ ಈ ಗ್ಯಾರಂಟಿ ಯೋಜನೆಗಳ ಮೂಲಕ ನಾಡಿನ ಜನರ ಕೊಳ್ಳುವ ಶಕ್ತಿ ಹೆಚ್ಚಿಸಲಾಗಿದೆ ಎಂದು ತಿಳಿಸಿದರು.