ಜಂಬೂಸವಾರಿ ವೀಕ್ಷಣೆಗೆ ಇರುವ ತೊಡಕನ್ನು ಮುಂದಿನ ಬಾರಿಯಾದರೂ ನಿವಾರಿಸಿ

| Published : Oct 25 2024, 12:47 AM IST

ಜಂಬೂಸವಾರಿ ವೀಕ್ಷಣೆಗೆ ಇರುವ ತೊಡಕನ್ನು ಮುಂದಿನ ಬಾರಿಯಾದರೂ ನಿವಾರಿಸಿ
Share this Article
  • FB
  • TW
  • Linkdin
  • Email

ಸಾರಾಂಶ

ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ 40 ರಿಂದ 50 ಸಾವಿರ ಆಸನ ವ್ಯವಸ್ಥೆ ಮಾಡಲಾಗುತ್ತದೆ.

ಕನ್ನಡಪ್ರಭ ವಾರ್ತೆ ಮೈಸೂರು

ದಸರಾ ಜಂಬೂಸವಾರಿ ವೀಕ್ಷಣೆಗೆ ಅರಮನೆ ಆವರಣದಲ್ಲಿ ಉಂಟಾಗುವ ಆಸನ ವ್ಯವಸ್ಥೆಯ ಸಮಸ್ಯೆಯನ್ನು ಮುಂದಿನ ಬಾರಿಯಿಂದಲಾದರೂ ಶಾಶ್ವತವಾಗಿ ಪರಿಹರಿಸಲು ಸರ್ಕಾರ ಮುಂದಾಗಬೇಕು ಎಂದು ಮಾಜಿ ಮೇಯರ್‌ ಸಂದೇಶ್‌ ಸ್ವಾಮಿ ಒತ್ತಾಯಿಸಿದ್ದಾರೆ.

ಈ ಬಾರಿ ದಸರಾವನ್ನು ಹೆಚ್ಚು ಮಂದಿ ಕಣ್ತುಂಬಿಕೊಂಡಿದ್ದಾರೆ. ಆದರೆ ಹಲವು ನ್ಯೂನತೆಗಳು, ವೈಫಲ್ಯಗಳಿಂದಾಗಿ ಜನರ ದಸರೆ ಆಗಿಲ್ಲ. ಅರಮನೆ ಆವರಣದಲ್ಲಿ ಜಂಬೂಸವಾರಿ ಮೆರವಣಿಗೆ ವೀಕ್ಷಣೆಗೆ 40 ರಿಂದ 50 ಸಾವಿರ ಆಸನ ವ್ಯವಸ್ಥೆ ಮಾಡಲಾಗುತ್ತದೆ. ಆರೂವರೆ ಸಾವಿರ ಪಾವತಿಸಿ ಗೋಲ್ಡ್ ಕಾರ್ಡ್ ಪಡೆದವರು, ಭಾರೀ ದರದ ಟಿಕೆಟ್ ಕೊಂಡವರು, ಉಚಿತ ಪಾಸ್ ಗಳು ದಕ್ಕಿದವರಿಗಷ್ಟೇ ಅರಮನೆ ಆವರಣಕ್ಕೆ ಪ್ರವೇಶ ಸಿಗುತ್ತದೆ. ಈ ವ್ಯವಸ್ಥೆಯಲ್ಲಿನ ಗೊಂದಲಕ್ಕೆ ಇನ್ನೂ ಪರಿಹಾರ ಸಿಕ್ಕಿಲ್ಲ. ಟಿಕೆಟ್, ಗೋಲ್ಡ್ ಕಾರ್ಡ್, ಪಾಸ್ ಇದ್ದವರಿಗೂ ಆಸನ ಸಿಗುವುದಿಲ್ಲ. ಸ್ಥಳಾವಕಾಶಕ್ಕಿಂತ ಮೂರ್ನಾಲ್ಕು ಪಟ್ಟು ಹೆಚ್ಚು ಪಾಸ್ ವಿತರಣೆ ಆಗಿದೆ. ಇಂತಹ ಹತ್ತಾರು ದೂರುಗಳು ಪ್ರತಿವರ್ಷ ಕೇಳಿ ಬರುತ್ತವೆ ಎಂದಿದ್ದಾರೆ..

ಇನ್ನು ಸಾಮಾನ್ಯರಿಗೆ ಅರಮನೆ ಆವರಣದಲ್ಲಿ ದಸರಾ ನೋಡುವುದು ಕಷ್ಟ. ಮೆರವಣಿಗೆ ಸಾಗುವ ಮಾರ್ಗದಲ್ಲಾದರೂ ಕುಳಿತು ನೆಮ್ಮದಿಯಿಂದ ಜಂಬೂಸವಾರಿ ನೋಡಲಾಗದು. ಅದರಲ್ಲೂ ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು, ವಿಶೇಷಚೇತನರು ನೂಕು ನುಗ್ಗಲಲ್ಲಿ ಬೆಳಗ್ಗೆಯಿಂದ ಕಾದು ನಿಲ್ಲುತ್ತಾರೆ. ನೀರಿಲ್ಲದೆ, ಶೌಚಾಲಯಕ್ಕೂ ಹೋಗಲಾಗದೆ ಜಂಬೂಸವಾರಿ ಸಾಗುವವರೆಗೂ ನಿಂತಲ್ಲೇ ನಿಂತಿರುತ್ತಾರೆ. ಅಂಬಾರಿ ಆನೆ ಹತ್ತಿರ ಬರುತ್ತಿದ್ದಂತೆ ನೂಕು ನುಗ್ಗಲು ಹೆಚ್ಚಾಗುತ್ತದೆ. ಒಬ್ಬರ ಮೇಲೊಬ್ಬರು ಬೀಳುತ್ತಾರೆ. ಇದರಿಂದ ಹೆಣ್ಣು ಮಕ್ಕಳು ನರಕಯಾತನೆ ಅನುಭವಿಸುತ್ತಾರೆ. ಜನದಟ್ಟಣೆಯಲ್ಲಿ ಸಿಲುಕಿ ಮಕ್ಕಳು ನರಳುತ್ತಾರೆ. ಕಳ್ಳತನ, ಜಗಳ, ಹೊಡೆದಾಟಗಳಾಗುತ್ತವೆ. ಆ ವೇಳೆ ರಸ್ತೆ ಭಾಗದಲ್ಲಿರುವ ಪೊಲೀಸರೂ ಅಸಹಾಯಕರಾಗಿರುತ್ತಾರೆ ಎಂದು ತಿಳಿಸಿದ್ದಾರೆ.

ಪುರಭವನ ಆವರಣ ಮಾದರಿಯಲ್ಲಿ ಕೆ.ಆರ್. ಆಸ್ಪತ್ರೆ ಆವರಣದಲ್ಲೂ ಹಲವು ಹಂತಗಳ ಆಸನ ವ್ಯವಸ್ಥೆ ಮಾಡಿ, ಹಿರಿಯನಾಗರಿಕರು, ಮಹಿಳೆಯರು, ಮಕ್ಕಳಿಗೆ ದಸರಾ ವೀಕ್ಷಣೆಗೆ ಅವಕಾಶ ಮಾಡಿಕೊಡಬೇಕು. ಚಾಮರಾಜ ಒಡೆಯರ್ ವೃತ್ತದಿಂದ ಬನ್ನಿಮಂಟಪದವರೆಗೂ ಫುಟ್ ಪಾತ್ ನಲ್ಲಿ ಖಾಸಗಿ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ವ್ಯವಸ್ಥಿತವಾಗಿ ಆಸನ ವ್ಯವಸ್ಥೆ ಮಾಡಬಹುದು. ಮಹಿಳೆಯರು- ಮಕ್ಕಳು, ಹಿರಿಯರು, ವಿದೇಶಿ ಪ್ರವಾಸಿಗರಿಗೆ ಪ್ರತ್ಯೇಕ ಗ್ಯಾಲರಿಯನ್ನೂ ಕಾಯ್ದಿರಿಸಬಹುದು. ಇದರಿಂದ ನೂಕುನುಗ್ಗಲು ಇಲ್ಲದಂತೆ 10 ಲಕ್ಷಕ್ಕೂ ಹೆಚ್ಚು ಜನ ಸುರಕ್ಷಿತವಾಗಿ ನೆಮ್ಮದಿಯಿಂದ ದಸರಾ ವೀಕ್ಷಣೆ ಮಾಡಬಹುದು ಎಂದು ಅವರು ಸಲಹೆ ನೀಡಿದ್ದಾರೆ.