ಬಸವರಾಜ ಹಿರೇಮಠ

ಧಾರವಾಡ: ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನು ಹತ್ತೇ ದಿನಗಳು ಬಾಕಿ. ಈ ಬಾರಿ ಅತ್ಯುತ್ತಮ ಫಲಿತಾಂಶ ಪಡೆಯಲು ಶಾಲಾ ಶಿಕ್ಷಣ ಇಲಾಖೆಯು ಹಲವು ಉಪಕ್ರಮಗಳನ್ನು ಜಾರಿ ಮಾಡಿದ್ದು, ಏನಿಲ್ಲದ ಕಸರತ್ತು ನಡೆಸಿದೆ. ಪ್ರಮುಖವಾಗಿ ಪ್ರತಿ ವಿದ್ಯಾರ್ಥಿ ಕನಿಷ್ಠ 40 ಅಂಕಗಳನ್ನು ಪಡೆದು ಪಾಸಾಗಲು ಮಿಶನ್‌ 40 ಪ್ಲಸ್‌ ಎಂಬ ಕಾರ್ಯ ಯೋಜನೆ ರೂಪಿಸಿದೆ.

ಮಾ. 18ರಿಂದ ಎಸ್‌ಎಸ್‌ಎಲ್‌ಸಿ ಬೋರ್ಡ್ ಪರೀಕ್ಷೆಗಳು ಶುರುವಾಗುತ್ತಿದ್ದು, ಬೆಳಗಾವಿ ವಿಭಾಗದ ಒಂಭತ್ತು ಶೈಕ್ಷಣಿಕ ಜಿಲ್ಲೆಗಳಲ್ಲಿ ಉತ್ತಮ ಫಲಿತಾಂಶದ ನಿರೀಕ್ಷೆ ಹೊಂದಲಾಗಿದೆ. ವಿಜಯಪುರ, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಚಿಕ್ಕೋಡಿ, ಶಿರಸಿ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡು 2.22 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದಾರೆ.

40 ಪ್ಲಸ್‌ ಗುರಿ ತಲುಪಲು ಇಲಾಖೆ ಶೈಕ್ಷಣಿಕ ಆರಂಭದಿಂದಲೇ ಪ್ರಯತ್ನ ಶುರು ಮಾಡಿದೆ. ಶೈಕ್ಷಣಿಕ ಕೇಂದ್ರ ಧಾರವಾಡ, ಉತ್ತರ ಕನ್ನಡ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳ ಎಸ್‌ಎಸ್‌ಎಲ್‌ಸಿ ಫಲಿತಾಂಶ ಅಸಮಾಧಾನ ತಂದಿದೆ. ಆದ್ದರಿಂದ ಮಿಷನ್ 40 ಪ್ಲಸ್‌ ಜತೆಗೆ ಸೇತುಬಂಧ ಮತ್ತು 29-ಅಂಶಗಳ ಸುಧಾರಣಾ ಕಾರ್ಯಕ್ರಮ ಪ್ರಮುಖ ಉಪಕ್ರಮಗಳನ್ನು ಅಳವಡಿಸಿ ಈ ಮೂಲಕ ಫಲಿತಾಂಶ ಸುಧಾರಣೆಗೆ ಕಸರತ್ತು ನಡೆಸಿದೆ.

ಏನಿದು 40 ಪ್ಲಸ್‌?


ಪ್ರತಿ ವಿದ್ಯಾರ್ಥಿಯು ಪ್ರತಿ ವಿಷಯದಲ್ಲೂ ಕನಿಷ್ಠ 40 ಅಂಕಗಳನ್ನು ಗಳಿಸುವುದೇ ಮಿಶನ್‌ 40 ಪ್ಲಸ್‌. ಪ್ರಮುಖ ಅಧ್ಯಾಯಗಳ ಆಧಾರದ ಮೇಲೆ ನೀಲನಕ್ಷೆಗಳನ್ನು ಸಿದ್ಧಪಡಿಸಿ ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ. ಸಂಭವನೀಯ ಪರೀಕ್ಷಾ ಪ್ರಶ್ನೆಗಳ ಮೇಲೆ ಗಮನಹರಿಸಿದ್ದು, ನಾಲ್ಕು ಮಾದರಿ ಪ್ರಶ್ನೆಪತ್ರಿಕೆಗಳನ್ನು ಬಳಸಿಕೊಂಡು ಪಾಠ ಆಧಾರಿತ ಮೌಲ್ಯಮಾಪನಗಳು (LBA) ಮತ್ತು ಅಭ್ಯಾಸ ಅವಧಿಗಳನ್ನು ಸಹ ನಡೆಸಲಾಗಿದೆ. ನೋಡಲ್ ಅಧಿಕಾರಿಗಳು ಮೇಲ್ವಿಚಾರಣೆ ಮಾಡಿದ್ದು, ವಿಭಾಗದಾದ್ಯಂತ 476 ತಪಾಸಣಾ ತಂಡಗಳನ್ನು ರಚಿಸಲಾಗಿತ್ತು. ಈ ತಂಡಗಳು 11,711 ಸರ್ಕಾರಿ ಮತ್ತು 1,906 ಅನುದಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಗಳನ್ನು ಒಳಗೊಂಡಿದ್ದು, ವಿದ್ಯಾರ್ಥಿಗಳ ಕಲಿಕಾ ಪ್ರಗತಿಯನ್ನು ನಿರ್ಣಯಿಸಲು ನಿಯಮಿತವಾಗಿ ಸಂಸ್ಥೆಗಳಿಗೆ ಭೇಟಿ ನೀಡಿ ಈಗ ಅಂತಿಮ ಪರೀಕ್ಷೆ ಹಂತಕ್ಕೆ ಬಂದಿದೆ.

ಶೈಕ್ಷಣಿಕ ವರ್ಷದ ಆರಂಭದಲ್ಲಿ ಓದುವ ಮತ್ತು ಬರೆಯುವಲ್ಲಿ ತೊಂದರೆ ಇರುವ ವಿದ್ಯಾರ್ಥಿಗಳನ್ನು ಗುರುತಿಸಲು ಇಲಾಖೆ ಸೇತುಬಂಧ ಪ್ರಾರಂಭಿಸಿತು. ಶೈಕ್ಷಣಿಕವಾಗಿ ದುರ್ಬಲ ವಿದ್ಯಾರ್ಥಿಗಳು ತಮ್ಮ ಮೂಲಭೂತ ಕೌಶಲ್ಯ ಸುಧಾರಿಸಲು ಸಹಾಯ ಮಾಡಲು ಫೌಂಡೇಶನಲ್ ಲಿಟರಸಿ ಮತ್ತು ಸಂಖ್ಯಾಶಾಸ್ತ್ರ (ಎಫ್‌ಎಲ್‌ಎನ್) ಉಪಕ್ರಮದ ಅಡಿಯಲ್ಲಿ ವಿಶೇಷ ತರಗತಿಗಳನ್ನು ನಡೆಸಲಾಗಿದೆ. ಬೆಳಗಿನ ತರಗತಿಯಲ್ಲಿ ವಿಶೇಷ ಕಲಿಕಾ ಚಟುವಟಿಕೆ ಪರಿಚಯಿಸಿದ್ದು, ಇದು ವಿದ್ಯಾರ್ಥಿಗಳು ಮತ್ತು ಶಿಕ್ಷಕರಿಂದ ಸಕಾರಾತ್ಮಕ ಪ್ರತಿಕ್ರಿಯೆ ಸಹ ಪಡೆದಿದೆ. ಜತೆಗೆ ಕಳೆದ ಡಿಸೆಂಬರ್ ವೇಳೆಗೆ ಪಠ್ಯಕ್ರಮ ಪೂರ್ಣಗೊಂಡಿದ್ದು, ಮೂರು ಪೂರ್ವಸಿದ್ಧತಾ ಪರೀಕ್ಷೆಗಳಾಗಿವೆ. ಈ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಹ ಬಂದಿದೆ ಎಂದು ಶಿಕ್ಷಣ ಸಂಯೋಜನಾಧಿಕಾರಿಗಳು ಮಾಹಿತಿ ನೀಡಿದರು.

ಗೈರುಹಾಜರಾದ ವಿದ್ಯಾರ್ಥಿಗಳನ್ನು ಮತ್ತೆ ಶಾಲೆಗೆ ಕರೆತರುವುದು, ಗೆಳೆಯರೊಂದಿಗೆ ಓದು, ಬರಹ, ಮೊಬೈಲ್ ಫೋನ್ ಮತ್ತು ಸಾಮಾಜಿಕ ಮಾಧ್ಯಮದಿಂದ ವಿದ್ಯಾರ್ಥಿಗಳು ದೂರ ಉಳಿಯುವಂತೆ ಅಂತಿಮ ಪರೀಕ್ಷೆ ವರೆಗೂ ಶಾಲೆಗೆ ಬರುವುದು ಅಂತಹ ಹಲವು ಯೋಜನೆಗಳನ್ನು ಸಹ ಹಾಕಿಕೊಂಡ ಶಿಕ್ಷಣ ಇಲಾಖೆಯು ಈ ಬಾರಿ ಬೆಳಗಾವಿ ವಿಭಾಗ ಎಸ್‌ಎಸ್‌ಎಲ್‌ಸಿಯಲ್ಲಿ ಎಷ್ಟು ಗುರಿ ಸಾಧನೆ ಮಾಡಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯುತ್ತಿರುವ ಪ್ರತಿಯೊಬ್ಬ ವಿದ್ಯಾರ್ಥಿ ಪಾಸಾಗಬೇಕು ಎಂಬುದೇ ಶಿಕ್ಷಣ ಇಲಾಖೆ ಗುರಿಯಾಗಿದೆ. ಅದಕ್ಕೆ ಬೇಕಾದ ತರಬೇತಿ, ಪರೀಕ್ಷಾ ಸಿದ್ಧತೆ ಪೂರ್ಣಗೊಂಡಿದೆ. ಗುಣಮಟ್ಟದ ಕಲಿಕೆ, ಶೈಕ್ಷಣಿಕ ಪ್ರಗತಿ ಹೆಚ್ಚಿಸುವುದು ಮತ್ತು ಹಿಂದುಳಿದ ವಿದ್ಯಾರ್ಥಿಗಳನ್ನು ಬೆಂಬಲಿಸಲು ಶಿಕ್ಷಕರು ಪರಿಣಾಮಕಾರಿ ತಂತ್ರಗಳನ್ನು ಮಕ್ಕಳಿಗೆ ಹೇಳಿಕೊಟ್ಟಿದ್ದು, ಸುಸೂತ್ರವಾಗಿ ಪರೀಕ್ಷೆ ನಡೆಸಿ ಉತ್ತಮ ಫಲಿತಾಂಶ ಪಡೆಯಲಿದ್ದೇವೆ ಎಂಬ ಭರವಸೆ ಇದೆ ಎಂದು ಶಾಲಾ ಶಿಕ್ಷಣ ಇಲಾಖೆ ಅಪರ ಆಯುಕ್ತ ಈಶ್ವರ ಉಳ್ಳಾಗಡ್ಡಿ ಹೇಳಿದ್ದಾರೆ.

ನೋಂದಣಿ ಮಾಡಿದ ವಿದ್ಯಾರ್ಥಿಗಳ ಸಂಖ್ಯೆ

ಜಿಲ್ಲೆ ವಿದ್ಯಾರ್ಥಿಗಳ ಸಂಖ್ಯೆ

ಬಾಗಲಕೋಟೆ 30094

ಬೆಳಗಾವಿ 30767

ಚಿಕ್ಕೋಡಿ 41334

ಧಾರವಾಡ 26025

ಗದಗ 14506

ಹಾವೇರಿ 21343

ಶಿರಸಿ 9098

ಕಾರವಾರ 8813

ವಿಜಯಪುರ 38261

ಒಟ್ಟು 220241