ಸಾರಾಂಶ
ಬೆಂಗಳೂರು : ರಾಜ್ಯದಲ್ಲಿ ಈ ಬಾರಿ ಪೂರ್ವ ಮುಂಗಾರು ಮಳೆ ಅಬ್ಬರ ತೀವ್ರಗೊಂಡಿದ್ದು, ವಾಡಿಕೆಗಿಂತ ದುಪ್ಪಟ್ಟು ಮಳೆಯಾದ ವರದಿಯಾಗಿದೆ.
ಮಾರ್ಚ್‌ನಿಂದ ಆರಂಭಗೊಳ್ಳುವ ಪೂರ್ವ ಮುಂಗಾರು ಮಳೆ ಜೂನ್ ವರೆಗೂ ಮುಂದುವರಿಯಲಿದೆ. ಕಳೆದ ಒಂದೂವರೆ ತಿಂಗಳಲ್ಲಿ ರಾಜ್ಯದಲ್ಲಿ ವಾಡಿಕೆ ಪ್ರಕಾರ 25 ಸೆಂ.ಮೀ. ನಷ್ಟು ಮಳೆಯಾಗಬೇಕು. ಆದರೆ, 48.9 ಸೆಂ.ಮೀ. ನಷ್ಟು ಮಳೆ ಸುರಿದಿದೆ. ಈ ಮೂಲಕ ವಾಡಿಕೆಗಿಂತ ಶೇ.98ರಷ್ಟು ಹೆಚ್ಚಿನ ಮಳೆಯಾಗಿದೆ.
ಕರಾವಳಿಯ ಮೂರು ಜಿಲ್ಲೆಗಳಲ್ಲಿ ವಾಡಿಕೆಯಂತೆ ಈ ಅವಧಿಗೆ 22.7 ಸೆಂ.ಮೀ. ಮಳೆಯಾಗಬೇಕು. ಆದರೆ, 43.1 ಸೆಂ.ಮೀ. ಮಳೆಯಾಗಿದೆ. ಅಂದರೆ ಶೇ.90ರಷ್ಟು ಮಳೆ ಹೆಚ್ಚಾಗಿದೆ. ದಕ್ಷಿಣ ಒಳನಾಡಿನಲ್ಲಿ 30.5 ಸೆಂ.ಮೀ. ಮಳೆಯಾಗಬೇಕು. ಆದರೆ, 62.7 ಸೆಂ.ಮೀ. ನಷ್ಟು ಮಳೆ ಸುರಿಯುವ ಮೂಲಕ ಮಳೆ ಪ್ರಮಾಣ ಶೇ.106ರಷ್ಟು ಹೆಚ್ಚಾಗಿದೆ.
ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ 19.2 ಸೆಂ.ಮೀ. ಮಳೆಯಾಗಬೇಕು. ಆದರೆ, ಈ ಬಾರಿ 33.8 ಸೆಂ.ಮೀ. ಮಳೆಯಾಗಿದ್ದು, ವಾಡಿಕೆಗಿಂತ ಶೇ.76ರಷ್ಟು ಹೆಚ್ಚು ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಉಷ್ಣ ಅಲೆ, ಸೆಕೆ ಕಡಿಮೆ: ಬೇಸಿಗೆ ಅವಧಿಯಾಗಿರುವುದರಿಂದ ಭಾರೀ ಬಿಸಿಲಿಂದ ಸೆಕೆ ಹಾಗೂ ಉಷ್ಣ ಅಲೆ ಭೀತಿ ಉಂಟಾಗುತ್ತಿತ್ತು. ಈ ಬಾರಿ ಪೂರ್ವ ಮುಂಗಾರು ಅವಧಿಯಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಸೆಕೆ ಮತ್ತು ಉಷ್ಣ ಅಲೆ ಭೀತಿ ಕಡಿಮೆಯಾಗಿದೆ. ಮಳೆ ವಾತಾವರಣ ಇರುವುದರಿಂದ ಗರಿಷ್ಠ ಉಷ್ಣಾಂಶವೂ ಕಡಿಮೆಯಾಗಿದೆ.
ಪೂರ್ವ ಮುಂಗಾರು ಮಳೆಯೂ ರಾಜ್ಯದಲ್ಲಿ ಇನ್ನೂ ಒಂದು ವಾರ ಕಾಲ ಮುಂದುವರೆಯುವ ಸಾಧ್ಯತೆ ಇದೆ. ಏ.20ರಿಂದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸ್ವಲ್ಪಮಟ್ಟಿಗೆ ಹೆಚ್ಚಾಗುವ ಸಾಧ್ಯತೆ ಇದೆ.