ಈ ಬಾರಿಯೂ ಬಿಜೆಪಿ ಬೆಂಬಲಿತರ ಕೈಗೆ ಧಾರವಾಡ ಹಾಲು ಒಕ್ಕೂಟ

| Published : Jul 01 2024, 01:47 AM IST

ಈ ಬಾರಿಯೂ ಬಿಜೆಪಿ ಬೆಂಬಲಿತರ ಕೈಗೆ ಧಾರವಾಡ ಹಾಲು ಒಕ್ಕೂಟ
Share this Article
  • FB
  • TW
  • Linkdin
  • Email

ಸಾರಾಂಶ

ಧಾರವಾಡ ಹಾಲು ಒಕ್ಕೂಟದಿಂದ ಹಾವೇರಿ ಜಿಲ್ಲೆಯು ಪ್ರತ್ಯೇಕವಾದ ಆನಂತರ ಮೊದಲ ಬಾರಿಗೆ ನಡೆದ ಒಕ್ಕೂಟದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಜಯಗಳಿಸಿದ್ದು, ಕಾಂಗ್ರೆಸ್‌ ಬೆಂಬಲಿತರಿಗೆ ಹೀನಾಯ ಸೋಲಾಗಿದೆ.

ಕನ್ನಡಪ್ರಭ ವಾರ್ತೆ ಧಾರವಾಡ

ಧಾರವಾಡ ಹಾಲು ಒಕ್ಕೂಟದಿಂದ ಹಾವೇರಿ ಜಿಲ್ಲೆಯು ಪ್ರತ್ಯೇಕವಾದ ಆನಂತರ ಮೊದಲ ಬಾರಿಗೆ ನಡೆದ ಒಕ್ಕೂಟದ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿತರು ಜಯಗಳಿಸಿದ್ದು, ಕಾಂಗ್ರೆಸ್‌ ಬೆಂಬಲಿತರಿಗೆ ಹೀನಾಯ ಸೋಲಾಗಿದೆ.

ಕಳೆದ ಬಾರಿಯೂ ಬಿಜೆಪಿ ಬೆಂಬಲಿತರ ಸಂಖ್ಯೆ ಜಾಸ್ತಿ ಇದ್ದು, ಶಂಕರ ಮುಗದ ಅಧ್ಯಕ್ಷರಾಗಿದ್ದರು. ಈ ಬಾರಿಯೂ ಶಂಕರ ಮುಗದ ಹಾಗೂ ಅವರ ತಂಡ ಜಯಗಳಿಸುವ ಮೂಲಕ ಮತ್ತೊಮ್ಮೆ ಧಾರವಾಡ ಹಾಲು ಒಕ್ಕೂಟದ ಅಧಿಕಾರದ ಗದ್ದುಗೆ ಏರಿದೆ. ಒಟ್ಟು ಒಂಭತ್ತು ಸ್ಥಾನಗಳ ಪೈಕಿ ಆರು ಸ್ಥಾನಗಳಲ್ಲಿ ಬಿಜೆಪಿ ಬೆಂಬಲಿತರು ಗೆಲವು ಸಾಧಿಸಿದ್ದಾರೆ ಎಂದು ತಿಳಿದು ಬಂದಿದೆ.

5ನೇ ಬಾರಿಗೆ ಮುಗದ ಗೆಲವು:

5ನೇ ಬಾರಿಗೆ ಜಯ ಗಳಿಸುವ ಮೂಲಕ ಹಾಲಿ ಅಧ್ಯಕ್ಷ ಶಂಕರ ಮುಗದ 82 ಮತಗಳ ಪೈಕಿ 78 ಮತಗಳನ್ನು ಪಡೆದಿದ್ದು, ಫಲಿತಾಂಶ ಬರುವ ತಡವೇ ಅವರ ಬೆಂಬಲಿಗರು ಬಣ್ಣ ಹಚ್ಚಿ, ಹೂವಿನ ಹಾರ ಹಾಕಿ, ಹೆಗಲ ಮೇಲೆ ಎತ್ತಿ ವಿಜಯೋತ್ಸವ ಆಚರಿಸಿದರು. ಪ್ರತಿಸ್ಪರ್ಧಿ ಕಾಂಗ್ರೆಸ್‌ ಬೆಂಬಲಿತ ಹೇಮರಡ್ಡಿ ನಾಗರಡ್ಡಿ ಲಿಂಗರೆಡ್ಡಿ ಬರೀ ನಾಲ್ಕು ಮತಗಳನ್ನು ಪಡೆಯಲು ಶಕ್ಯವಾದರು. ಶಂಕರ ಮುಗದ ಅವರು ಧಾರವಾಡ, ಅಳ್ನಾವರ, ನವಲಗುಂದ, ಅಣ್ಣಿಗೇರಿ ತಾಲೂಕು ಪ್ರತಿನಿಧಿಸಿ ಚುನಾವಣೆಗೆ ಸ್ಪರ್ಧಿಸಿದ್ದರು. ಕಲಘಟಗಿ ತಾಲೂಕು ಪ್ರತಿನಿಧಿಸಿ ಸ್ಪರ್ಧಿಸಿದ್ದ ಜಿಪಂ ಮಾಜಿ ಸದಸ್ಯರು ಗೀತಾ ಮರಲಿಂಗಣ್ಣವರ 38 ಮತಗಳ ಪೈಕಿ 21 ಮತಗಳನ್ನು ಪಡೆದು ಮೂರನೇ ಬಾರಿ ಗೆಲವು ಸಾಧಿಸಿದ್ದು, ಪ್ರತಿಸ್ಪರ್ಧಿ ಕಾಂಗ್ರೆಸ್‌ ಬೆಂಬಲಿತ ಹನುಮಂತಪ್ಪ ಕೊರವರ 17 ಮತಗಳನ್ನು ಪಡೆಯಲು ಸಫಲರಾದರು. ಕುಂದಗೋಳ, ಹುಬ್ಬಳ್ಳಿ ಗ್ರಾಮೀಣ ಹಾಗೂ ಹುಬ್ಬಳ್ಳಿ ನಗರ ತಾಲೂಕು ಪ್ರತಿನಿಧಿಸಿ ಸ್ಪರ್ಧಿಸಿದ್ದ ಸುರೇಶ ಬಣವಿ ಒಟ್ಟು 67 ಮತಗಳ ಪೈಕಿ 36 ಮತಗಳನ್ನು ಪಡೆದು ಮರು ಆಯ್ಕೆಯಾದರು. ಪ್ರತಿಸ್ಪರ್ಧಿ ಗಂಗಪ್ಪ ಮೊರಬದ 31 ಮತಗಳನ್ನು ಪಡೆದರು.

ಗದಗ ಜಿಲ್ಲೆ:

ಗದಗ ಜಿಲ್ಲೆಯ ಪೈಕಿ ಗದಗ–ನರಗುಂದ ತಾಲೂಕು ನಿರ್ದೇಶಕ ಸ್ಥಾನಕ್ಕೆ ಹನುಮಂತಗೌಡ ‌ಗೋವಿಂದ ಗೌಡ ಹಿರೇಗೌಡರ ಒಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧ ಆಯ್ಕೆಯನ್ನು ಮೊದಲೇ ಘೋಷಿಸಲಾಗಿತ್ತು. ರೋಣ, ಗಜೇಂದ್ರಗಡ ತಾಲೂಕು ಪ್ರತಿನಿಧಿಸಿದ್ದ ನೀಲಕಂಠಪ್ಪ ಅಸೂಟಿ ಮೂಲತಃ ಕಾಂಗ್ರೆಸ್‌ ಬೆಂಬಲಿತರಿದ್ದರೂ ಈ ಬಾರಿ ಸ್ಥಳೀಯ ಕಾಂಗ್ರೆಸ್‌ ಶಾಸಕರು ಸೇರಿದಂಕೆ ಪಕ್ಷ ಬೆಂಬಲ ಮಾಡಿರಲಿಲ್ಲ. ಇಷ್ಟಾಗಿಯೂ ಒಕ್ಕೂಟದ ಮತದಾರರನ್ನು ತಮ್ಮತ್ತ ಸೆಳೆಯುವಲ್ಲಿ ಯಶಸ್ವಿಯಾದ ಅಸೂಟಿ ಒಟ್ಟು 42 ಮತಗಳಲ್ಲಿ 29 ಮತಗಳನ್ನು ಪಡೆದು ಐದನೆ ಬಾರಿ ಆಯ್ಕೆಯಾದರು. ಕಾಂಗ್ರೆಸ್‌ ಬೆಂಬಲಿತ ಪ್ರತಿಸ್ಪರ್ಧಿ ಗದಿಗೆಪ್ಪ ಕಿರೇಸೂರ 13 ಮತಗಳನ್ನು ಪಡೆದು ಸೋಲುಂಡರು. ಗದಗ ಜಿಲ್ಲೆಯ ಮುಂಡರಗಿ, ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕು ಪ್ರತಿನಿಧಿಸಿದ್ದ ಲಿಂಗರಾಜ ಗೌಡ ಪಾಟೀಲ 71 ಮತಗಳ ಪೈಕಿ ಬರೋಬ್ಬರಿ 50 ಮತಗಳನ್ನು ಪಡೆದು ಶೇಖಣ್ಣ ಕಾಳೆ ಅವರನ್ನು ಮಣಿಸಿದರು.

ಉತ್ತರ ಕನ್ನಡ ಜಿಲ್ಲೆ:

ಇನ್ನು, ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕು ಪ್ರತಿನಿಧಿಸಿದ್ದ ಬಿಜೆಪಿ ಬೆಂಬಲಿತ ಸುರೇಶ್ಚಂದ್ರ ಹೆಗಡೆ ಹ್ಯಾಟ್ರಿಕ್‌ ಗೆಲವು ಸಾಧಿಸಿದ್ದು 84 ಮತಗಳ ಪೈಕಿ 70 ಮತಗಳನ್ನು ಪಡೆದಿದ್ದಾರೆ. ಉಮಾಮಹೇಶ್ವರ ಹೆಗಡೆ 14 ಮತಗಳನ್ನು ಪಡೆದರು. ಸಿದ್ದಾಪುರ, ಕುಮಟಾ, ಹೊನ್ನಾವರ, ಭಟ್ಕಳ ತಾಲೂಕು ಪ್ರತಿನಿಧಿಸಿ ಸ್ಪರ್ಧಿಸಿದ್ದ ಪರಶುರಾಮ ನಾಯ್ಕ್‌ 74 ಮತಗಳ ಪೈಕಿ 37 ಮತ ಪಡೆದು ವಿಜೇತರಾದರು. ಪ್ರತಿಸ್ಪರ್ಧಿಗಳಾದ ಮಂಜುನಾಥ ಹೆಗಡೆ ಒಂಭತ್ತು ಮತ್ತು ಸಾಧನಾ ರಾಜೇಶ ಭಟ್ಟ 7 ಮತಗಳನ್ನು ಪಡೆದರು. ಕೊನೆಯದಾಗಿ ಯಲ್ಲಾಪುರ ದಾಂಡೇಲಿ, ಹಳಿಯಾಳ, ಮುಂಡಗೋಡ, ಅಂಕೋಲಾ, ಜೋಯಿಡಾ, ಕಾರವಾರ ತಾಲೂಕು ಪ್ರತಿನಿಧಿಸಿದ ಶಂಕರ ಪರಮೇಶ್ವರ ಹೆಗಡೆ 94 ಮತಗಳ ಪೈಕಿ 66 ಮತ ಪಡೆದು ಪ್ರತಿಸ್ಪರ್ಧಿ ಪ್ರಶಾಂತ ಸುಬ್ರಾಯ ಸಭಾಹಿತ (24) ಅವರನ್ನು ಮಣಿಸಿದರು. ಚುನಾವಣಾಧಿಕಾರಿಯೂ ಆಗಿರುವ ಹುಬ್ಬಳ್ಳಿ–ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಸಂತೋಷಕುಮಾರ ಬಿರಾದಾರ ಫಲಿತಾಂಶ ಪ್ರಕಟಿಸಿದರು.