ನಾರಾಯಣ ಹೆಗಡೆ

ಹಾವೇರಿ: ಸಿದ್ದರಾಮಯ್ಯ ನೇತೃತ್ವದ ಸಂಪುಟದಲ್ಲಿ ಮೂರು ವರ್ಷಗಳಿಂದ ಜಿಲ್ಲೆಗೆ ಮಂತ್ರಿ ಸ್ಥಾನ ಸಿಗದೇ ಪಕ್ಷದೊಳಗೆ ನಿರ್ಮಾಣವಾಗಿದ್ದ ನಿರ್ವಾತ ಮುಂದುವರಿದಿದೆ. ರಾಜ್ಯದ ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ನೇತೃತ್ವದ ಸಂಪುಟದಲ್ಲೂ ಜಿಲ್ಲೆಗೆ ಪ್ರಾಶಸ್ತ್ಯ ಸಿಗದಿರುವುದು ಕೈ ಕಾರ್ಯಕರ್ತರಲ್ಲಿ ಬೇಸರ ಮೂಡಿಸಿದೆ.

ಕಾಂಗ್ರೆಸ್‌ ಅಧಿಕಾರಕ್ಕೆ ಬಂದಾಗಲೆಲ್ಲ ಬೇರೆ ಜಿಲ್ಲೆಯವರೇ ಉಸ್ತುವಾರಿ ಸಚಿವರಾಗುತ್ತಾರೆ ಎಂಬ ಮಾತು ಮತ್ತೊಮ್ಮೆ ನಿಜವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಮೊದಲ ಹಂತದಲ್ಲೇ ಮಂತ್ರಿಗಿರಿ ಸಿಗುವ ವಿಶ್ವಾಸದಲ್ಲಿದ್ದ ಜಿಲ್ಲೆಯ ಹಿರಿಯ ಶಾಸಕರು, ಬಳಿಕ ಸಂಪುಟ ವಿಸ್ತರಣೆ ವೇಳೆ ಅವಕಾಶ ಸಿಗುವ ವಿಶ್ವಾಸದಲ್ಲಿದ್ದರು. ಆದರೆ, ಸಂಪುಟ ವಿಸ್ತರಣೆ ಆಗದ್ದರಿಂದ ಇಲ್ಲಿ ವರೆಗೂ ಕಾಯುತ್ತಲೇ ಬಂದಿದ್ದರು. ಈಗ ಸಿಎಂ ಹುದ್ದೆ ಅಧಿಕಾರ ಹಸ್ತಾಂತರದಿಂದ ಡಿ.ಕೆ. ಶಿವಕುಮಾರ ಅವರು ರಾಜ್ಯದ ನೂತನ ಸಿಎಂ ಆಗಿ ಬುಧವಾರ ಪದಗ್ರಹಣ ಮಾಡಿದ್ದಾರೆ. ಅವರೊಂದಿಗೆ 13 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಈ ಪೈಕಿ ಜಿಲ್ಲೆಯ ಒಬ್ಬರಿಗೂ ಅವಕಾಶ ಸಿಕ್ಕಿಲ್ಲ.

ಕಾಂಗ್ರೆಸ್ ಪಾಲಿಗೆ ಹಾವೇರಿ ಶಕ್ತಿ ನೀಡಿದ ಜಿಲ್ಲೆ. ಹಾನಗಲ್ಲ ಉಪಚುನಾವಣೆಯಿಂದಲೇ ಶುರುವಾದ ಕಾಂಗ್ರೆಸ್‌ ಜಯಭೇರಿ ಬಳಿಕ ಸಾರ್ವತ್ರಿಕ ಚುನಾವಣೆಯಲ್ಲೂ ಮುಂದುವರಿದಿತ್ತು. 5 ವಿಧಾನಸಭಾ ಕ್ಷೇತ್ರ ಗೆದ್ದು ಕಾಂಗ್ರೆಸ್‌ ಪಾಲಿಗೆ ಭರ್ಜರಿ ಶಕ್ತಿ ನೀಡಿತ್ತು. ಆ ಬಳಿಕ ಶಿಗ್ಗಾಂವಿ ಉಪಚುನಾವಣೆಯಲ್ಲಿ ಕೂಡ ಕಾಂಗ್ರೆಸ್‌ ಗೆದ್ದು ಇಡಿ ಜಿಲ್ಲೆ ಕೈವಶವಾಗಿತ್ತು. ಇಷ್ಟಾದರೂ ಜಿಲ್ಲೆಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಆದ್ದರಿಂದ ಸಹಜವಾಗಿಯೇ ಡಿಕೆಶಿ ಸಂಪುಟದಲ್ಲಿ ಜಿಲ್ಲೆಯ ಯಾರಿಗಾದರೂ ಒಬ್ಬರಿಗೆ ಅವಕಾಶ ಸಿಗಬಹುದು ಎಂಬ ಲೆಕ್ಕಾಚಾರವಿತ್ತು. ಒಬ್ಬರಿಗಾದರೂ ಮಂತ್ರಿ ಸ್ಥಾನ ನೀಡಿ ಎಂಬುದು ಎಲ್ಲ ಶಾಸಕರ ಹಕ್ಕೊತ್ತಾಯವೂ ಆಗಿತ್ತು. ಆದರೆ, ಮೊದಲ ಹಂತದಲ್ಲಿ ಯಾರಿಗೂ ಸಂಪುಟ ಸೇರಲು ಸಾಧ್ಯವಾಗಿಲ್ಲ.

2ನೇ ಹಂತದಲ್ಲಾದರೂ ಸಿಗುತ್ತಾ?: ಜಾತಿ, ಹಿರಿತನ, ವರ್ಚಸ್ಸು, ಸಾಮಾಜಿಕ ನ್ಯಾಯದ ಅಡಿಯಲ್ಲಿ ಶಾಸಕರು ಸಂಪುಟ ಸೇರಲು ಕಸರತ್ತು ನಡೆಸಿದ್ದರು. ರುದ್ರಪ್ಪ ಲಮಾಣಿ ಮತ್ತು ಬಸವರಾಜ ಶಿವಣ್ಣನವರ ಈ ಹಿಂದೆ ಸಚಿವರಾಗಿ ಕಾರ್ಯನಿರ್ವಹಿಸಿದ ಹಿರಿಯ ರಾಜಕಾರಣಿಗಳಾಗಿದ್ದಾರೆ. 2013ರ ಸಿದ್ದರಾಮಯ್ಯ ಸರ್ಕಾರದಲ್ಲಿ ರುದ್ರಪ್ಪ ಲಮಾಣಿ ಮುಜರಾಯಿ ಸಚಿವರಾಗಿದ್ದರು. ಬಸವರಾಜ ಶಿವಣ್ಣನವರ ಜನತಾ ಪಕ್ಷದ ಸರ್ಕಾರದಲ್ಲೇ ಸಚಿವರಾದವರು. ಬಂಜಾರ ಸಮುದಾಯದಿಂದ ಗೆದ್ದಿರುವ ಏಕೈಕ ಕೈ ಶಾಸಕರಾಗಿರುವ ರುದ್ರಪ್ಪ ಲಮಾಣಿ ಅವರಿಗೆ ವಿಧಾನಸಭೆ ಉಪಾಧ್ಯಕ್ಷ ಸ್ಥಾನ ನೀಡಲಾಗಿತ್ತು. ಮೊದಲ ಪಟ್ಟಿಯಲ್ಲೇ ರುದ್ರಪ್ಪ ಲಮಾಣಿ ಹೆಸರು ಇರಲಿದೆ ಎಂದು ಹೇಳಲಾಗುತ್ತಿತ್ತು. ಈಗ ಮುಂದಿನ ಪಟ್ಟಿಗಾಗಿ ಎದುರು ನೋಡುವ ಅನಿವಾರ್ಯತೆ ನಿರ್ಮಾಣವಾಗಿದೆ.


ಉತ್ತರ ಕರ್ನಾಟಕದಲ್ಲಿ ಕುರುಬ ಸಮಾಜದ ಹಿರಿಯ ಶಾಸಕರಾಗಿರುವ ಬಸವರಾಜ ಶಿವಣ್ಣನವರಗೆ ಮಂತ್ರಿ ಸ್ಥಾನ ನೀಡಬೇಕು ಎಂಬ ಒತ್ತಾಯ ಕೇಳಿಬಂದಿತ್ತು. ಸಿದ್ದರಾಮಯ್ಯ ಸಿಎಂ ಸ್ಥಾನದಿಂದ ಕೆಳಗೆ ಇಳಿದಿರುವುದರಿಂದ ಅದೇ ಸಮುದಾಯದ ಶಿವಣ್ಣನವರಗೆ ಅವಕಾಶ ಸಿಗಬಹುದು ಎನ್ನಲಾಗಿತ್ತು. ಆದರೆ, ಇವರೂ ಮುಂದೆ ಸಿಗಬಹುದು ಎಂಬ ವಿಶ್ವಾಸದಲ್ಲೇ ಇರುವಂತೆ ಮಾಡಿದೆ.

ವಿಧಾನ ಪರಿಷತ್‌ನಲ್ಲಿ ಸರ್ಕಾರ ಮುಖ್ಯ ಸಚೇತಕರೂ ಆಗಿರುವ ಸಲೀಂ ಅಹ್ಮದ್ ಕೂಡ ತಮ್ಮ ಬೇಡಿಕೆ ಮುಂದಿಟ್ಟು ಪ್ರಯತ್ನ ನಡೆಸಿದ್ದರು. ದೆಹಲಿ ಕೈ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರೂ ಅವರ ಪ್ರಯತ್ನ ಕೈಗೂಡಲಿಲ್ಲ. ಈಗ ಮುಂದಿನ ಸಂಪುಟ ವಿಸ್ತರಣೆವರೆಗೂ ಕಾಯಬೇಕಿದೆ. ಹಾನಗಲ್ಲ ಶಾಸಕ ಶ್ರೀನಿವಾಸ ಮಾನೆ ಕೂಡ ಸಚಿವ ಸ್ಥಾನದ ಮೇಲೆ ಕಣ್ಣಿಟ್ಟು ಪ್ರಯತ್ನ ನಡೆಸಿದ್ದರೂ ಅವಕಾಶ ಸಿಕ್ಕಿಲ್ಲ. ಆದ್ದರಿಂದ ಸಂಪುಟ ವಿಸ್ತರಣೆ ಸಂದರ್ಭದವರೆಗೂ ಕಾಯಲೇಬೇಕಿದೆ.

ಲಮಾಣಿ ಸಮುದಾಯದಿಂದ ಆಯ್ಕೆಯಾದ ಏಕೈಕ ಕಾಂಗ್ರೆಸ್ ಶಾಸಕ ನಾನು. ಸಚಿವ ಸ್ಥಾನಕ್ಕೆ ನಮ್ಮ ಸಮುದಾಯ ಪರಿಗಣನೆ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಅವಕಾಶ ಸಿಗುವ ವಿಶ್ವಾಸವಿದೆ ಎಂದು ಹಾವೇರಿ ಶಾಸಕ ರುದ್ರಪ್ಪ ಲಮಾಣಿ ಹೇಳಿದರು.

ನಾನು ನಾಲ್ಕು ಬಾರಿ ಶಾಸಕನಾಗಿದ್ದು, ಸಚಿವ ಸ್ಥಾನ ನೀಡುವಂತೆ ನಾಯಕರಲ್ಲಿ ಮನವಿ ಮಾಡಿದ್ದೆ. ಈಗ ಕೆಲವರಷ್ಟೇ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ. ಮುಂದೆ ಸಂಪುಟ ವಿಸ್ತರಣೆ ವೇಳೆ ಅವಕಾಶ ನೀಡುವುದಾಗಿ ನಾಯಕರು ಹೇಳಿದ್ದಾರೆ. ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ ಎಂದು ಬ್ಯಾಡಗಿ ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.