ಇರ್ದೆ ಶಾರದೋತ್ಸವ ಸಂಪನ್ನ: ವೈಭವದ ಶೋಭಾಯಾತ್ರೆ

| Published : Oct 05 2025, 01:01 AM IST

ಸಾರಾಂಶ

ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಮಕ್ಕಳು, ಮಹಿಳೆಯರ ಜಾನಪದ ಶೈಲಿಯ ಕೋಲಾಟ ಕುಣಿತ ವಿಶೇಷ ಮೆರುಗು ನೀಡಿತ್ತು. ಅಲ್ಲದೆ ಇರ್ದೆ ಶ್ರೀ ವಿಷ್ಣು ಸಿಂಗಾರಿ ಮೇಳದವರಿಂದ ಚೆಂಡೆ ವಾದನ, ಇರ್ದೆ ಶಿವಾಜಿ ಯುವಸೇನೆಯಿಂದ ಆಕರ್ಷಕ ಟ್ಯಾಬ್ಲೋಗಳೊಂದಿಗೆ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ ಸಾಗಿತು.

ಕನ್ನಡಪ್ರಭ ವಾರ್ತೆ ಪುತ್ತೂರು

ತಾಲೂಕಿನ ಇರ್ದೆ ಶ್ರೀ ವಿಷ್ಣುಮೂರ್ತಿ ದೇವಾಲಯ ಹಾಗೂ ಶಾರದೋತ್ಸವ ಸಮಿತಿ ವತಿಯಿಂದ ನಡೆಸಲಾಗಿದ್ದ ೩೩ನೇ ವರ್ಷದ ಶಾರದೋತ್ಸವದ ಶೋಭಾಯಾತ್ರೆಯು ವಿವಿಧ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ನಡೆಯಿತು.ಕುಂಟಾರು ರವೀಶ ತಂತ್ರಿಯವರ ಮಾರ್ಗದರ್ಶನದಲ್ಲಿ ನಡೆದ ನವರಾತ್ರಿ ಉತ್ಸವವು ಸೆ.೨೨ರಂದ ಪ್ರಾರಂಭಗೊಂಡಿದ್ದು, ಅ.೨ರ ವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು.

ಅ.೨ರಂದು ಮಧ್ಯಾಹ್ನ ನಡೆದ ಸರಳ ಕಾರ್ಯಕ್ರಮದಲ್ಲಿ ದೇವಸ್ಥಾನದ ಎಲ್ಲ ಕಾರ್ಯಗಳಲ್ಲಿಯೂ ಸಹಕಾರ ನೀಡುತ್ತಿರುವ ಮಹೇಶ್ ಭಟ್ ಸುದನಡ್ಕ ಅವರನ್ನು ಸನ್ಮಾನಿಸಲಾಯಿತು. ಜನ್ಮಕ್ರಿಯೇಶನ್ ವತಿಯಿಂದ ನಿರ್ಮಾಣಗೊಂಡಿರುವ ‘ಇರ್ದೆ ಶ್ರೀ ವಿಷ್ಣುಮೂರ್ತಿ’ ತುಳು ಭಕ್ತಿಗೀತೆಯನ್ನು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟುಗುತ್ತು ಬಿಡುಗಡೆಗೊಳಿಸಿದರು. ಜನ್ಮ ಕ್ರಿಯೇಶನ್‌ನ ಡಾ.ಹರ್ಷ ಕುಮಾರ್ ರೈ ಉಪಸ್ಥಿತರಿದ್ದರು.

ಸಂಜೆ ಶಾರದಾ ಮಾತೆಗೆ ಮಹಾಪೂಜೆ, ಮಂತ್ರಾಕ್ಷತೆಯ ಬಳಿಕ ಶ್ರೀ ಶಾರದಾ ಮಾತೆಯ ಶೋಭಾಯಾತ್ರೆಯು ಪ್ರಾರಂಭಗೊಂಡಿತು. ಸಾಂಪ್ರದಾಯಿಕ ಶೈಲಿಯಲ್ಲಿ ನಡೆದ ಶೋಭಾಯಾತ್ರೆಯಲ್ಲಿ ಮಕ್ಕಳು, ಮಹಿಳೆಯರ ಜಾನಪದ ಶೈಲಿಯ ಕೋಲಾಟ ಕುಣಿತ ವಿಶೇಷ ಮೆರುಗು ನೀಡಿತ್ತು. ಅಲ್ಲದೆ ಇರ್ದೆ ಶ್ರೀ ವಿಷ್ಣು ಸಿಂಗಾರಿ ಮೇಳದವರಿಂದ ಚೆಂಡೆ ವಾದನ, ಇರ್ದೆ ಶಿವಾಜಿ ಯುವಸೇನೆಯಿಂದ ಆಕರ್ಷಕ ಟ್ಯಾಬ್ಲೋಗಳೊಂದಿಗೆ ಶಾರದಾ ಮಾತೆಯ ವೈಭವದ ಶೋಭಾಯಾತ್ರೆ ಸಾಗಿತು. ದೇವಾಲಯದಿಂದ ಹೊರಟ ಶೋಭಾಯಾತ್ರೆಯು ಇರ್ದೆ-ಜೋಡುಮಾರ್ಗ, ಪೇರಲ್ತಡ್ಕ, ಕದಿಕೆ ಚಾವಡಿ ಮಾರ್ಗವಾಗಿ ಸಂಚರಿಸಿ ಬೆಂದ್ರ್‌ ತೀರ್ಥದಲ್ಲಿ ಮಹಾಪೂಜೆ, ವಿಗ್ರಹದ ಜಲಸ್ಥಂಭನದ ಬಳಿಕ ಅನ್ನಸಂತರ್ಪಣೆಯೊಂದಿಗೆ ೩೩ನೇ ವರ್ಷದ ಶಾರದೋತ್ಸವವು ಸಂಪನ್ನಗೊಂಡಿತು.ಮಾಜಿ ಶಾಸಕ ಸಂಜೀವ ಮಠಂದೂರು, ಹಿಂದೂ ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ, ವೈದ್ಯ ಡಾ.ಸುರೇಶ್ ಪುತ್ತೂರಾಯ, ಇರ್ದೆ ವಿಷ್ಣಮೂರ್ತಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಠಲ ರೈ ಬಾಲ್ಯೊಟ್ಟುಗುತ್ತು, ಶಾರದೋತ್ಸವ ಸಮಿತಿ ಗೌರವಾಧ್ಯಕ್ಷ ಶೀನಪ್ಪ ನಾಯ್ಕ ಬದಂತಡ್ಕ, ಅಧ್ಯಕ್ಷ ಹರೀಶ ಉಪ್ಪಳಿಗೆ, ಪ್ರಧಾನ ಕಾರ್ಯದರ್ಶಿ ಸತೀಶ್ ಆಚಾರ್ಯ ಪೈಂತಿಮುಗೇರು, ಕೋಶಾಧಿಕಾರಿ ನಮಿತಾ ಬೈಲಾಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ರಾಧಾಕೃಷ್ಣ ರೈ ಬಾಲ್ಯೊಟ್ಟು ಗುತ್ತು, ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯರು, ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷರು, ಸದಸ್ಯರು, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಶಾರದೋತ್ಸವ ಸಮಿತಿ ಪದಾಧಿಕಾರಿಗಳು, ಸದಸ್ಯರು ಸೇರಿದಂತೆ ಸಾವಿರಾರು ಮಂದಿ ಭಕ್ತಾದಿಗಳು ಶಾರದೋತ್ಸವದಲ್ಲಿ ಭಾಗವಹಿಸಿದ್ದರು.