ಸಾರಾಂಶ
ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿದ ಶಾಸಕ
ಕನ್ನಡಪ್ರಭ ವಾರ್ತೆ ಹಳಿಯಾಳಯಾರೂ ಎಷ್ಟೇ ಟೀಕಿಸಲಿ ಗ್ಯಾರಂಟಿ ಯೋಜನೆಗಳ ಸದುಪಯೋಗವನ್ನು ಸರ್ವರು ಪಕ್ಷಾತೀತವಾಗಿ ಪಡೆಯಲಾರಂಭಿಸಿದ್ದಾರೆ ಎಂದು ಶಾಸಕ ಆರ್.ವಿ.ದೇಶಪಾಂಡೆ ಹೇಳಿದರು.ಗುರುವಾರ ಪಟ್ಟಣದ ದುರ್ಗಾ ನಗರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಬಿಸಿಎಂ ಇಲಾಖೆಯ ವಿವಿಧ ಸಮುದಾಯಗಳ ಅಭಿವೃದ್ಧಿ ಯೋಜನೆಯಡಿಯಲ್ಲಿ ₹30 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ಸಮುದಾಯ ಭವನಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಇಂದು ಹಳಿಯಾಳ ತಾಲೂಕಿನಲ್ಲಿ 28.582 ಗ್ರಾಹಕರು ವಿದ್ಯುತ್ ಸಂಪರ್ಕ ಹೊಂದಿದ್ದು, ಅದರಲ್ಲಿ ಕೇವಲ 132 ಗ್ರಾಹಕರು ಮಾತ್ರ ವಿದ್ಯುತ್ ಬಿಲ್ ಪಾವತಿಸುತ್ತಿದ್ದಾರೆ. ಇಂದು ಗ್ಯಾರಂಟಿ ಯೋಜನೆಗಳಿಂದ ಬಡವರ, ಶೊಷಿತರ ಬದುಕು ಹಸನಾಗಿದೆ ಎಂಬ ಸತ್ಯವನ್ನು ಎಲ್ಲರೂ ಒಪ್ಪುತ್ತಾರೆ ಎಂದರು.ಚುನಾವಣಾ ಸಮಯದಲ್ಲಿ ನೀಡಿದ ವಾಗ್ದಾನದಂತೆ ನಮ್ಮ ಸರ್ಕಾರ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿತು. ದೇಶದಲ್ಲಿ ಗ್ಯಾರಂಟಿ ಯೋಜನೆಗಳನ್ನು ಮೊದಲ ಬಾರಿಗೆ ಜಾರಿಗೊಳಿಸಿದ್ದು ನಮ್ಮ ರಾಜ್ಯದಲ್ಲಿ ಅದೂ ನಮ್ಮ ಕಾಂಗ್ರೆಸ್ ಪಕ್ಷದಿಂದ. ಅಂದೂ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿದ್ದ ವಿರೋಧ ಪಕ್ಷಗಳು ಸಹ ಇಂದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಲಾರಂಭಿಸಿವೆ ಎಂದರು. ಮೂಲಭೂತ ಸೌಲಭ್ಯ:
ಕುಡಿಯುವ ನೀರು, ಆರೋಗ್ಯಕರ ಪರಿಸರ, ಕಾನೂನು ಸುವ್ಯವಸ್ಥೆ, ನಿಲುಗಡೆಯಿಲ್ಲದ ವಿದ್ಯುತ್ ಪೂರೈಕೆ, ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗಿರುವುದರಿಂದ ಹಳಿಯಾಳ ಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳಿರುವುದರಿಂದ ಹಳಿಯಾಳ ಇಂದು ಬೆಳೆಯಲಾರಂಭಿಸಿದೆ ಎಂದರು.ಐಟಿಐ, ಡಿಪ್ಲೋಮಾ, ಎಂಜಿನಿಯರಿಂಗ್, ಪದವಿ ಶಿಕ್ಷಣ ಸೌಲಭ್ಯವಿರುವುದಿಂದ ನೆರೆಯ ತಾಲೂಕು, ಜಿಲ್ಲೆಗಳಿಂದ ವಿದ್ಯಾರ್ಥಿಗಳು ಹಳಿಯಾಳ ಬರುತ್ತಿದ್ದು, ಇಂದು ಹಳಿಯಾಳ ಶೈಕ್ಷಣಿಕ ಕೇಂದ್ರವಾಗಿಯೂ ಗುರುತಿಸಲ್ಪಡುತ್ತಿದೆ ಎಂದರು.
ತಾಲೂಕಿನ ಗ್ರಾಮಾಂತರ ಭಾಗದ ಹಾಗೂ ಪಟ್ಟಣದ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿ ಕೈಗೊಂಡ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಹಾಗೂ ಪಟ್ಟಣದ ನೀರಿನ ಸಮಸ್ಯೆಗೆ ಬಗೆಹರಿಸುವ ದಿಸೆಯಲ್ಲಿ ಕೈಗೊಂಡಿರುವ ಅಮೃತ್-2 ಯೋಜನೆಯ ಕಾರ್ಯ ಅಂತೀಮ ಹಂತಕ್ಕೆ ತಲುಪಿದ್ದು, ಅತೀ ಶೀಘ್ರದಲ್ಲಿ ಈ ಯೋಜನೆಗಳು ಕಾರ್ಯಾರಂಭಿಸಲಿವೆ ಎಂದರು.ಶಿಲಾನ್ಯಾಸ:
ತಾಲೂಕಿನ ಮದನಳ್ಳಿ ಗ್ರಾಮದಲ್ಲಿ ₹60 ಲಕ್ಷ ವೆಚ್ಚದಲ್ಲಿ ರಸ್ತೆ ಸುಧಾರಣಾ ಕಾಮಗಾರಿ, ₹15 ಲಕ್ಷ ವೆಚ್ಚದಲ್ಲಿ ಸಮುದಾಯ ಭವನ ನಿರ್ಮಾಣ, ಪರಿಶಿಷ್ಟ ಬಡಾವಣೆಗಳಲ್ಲಿ ರಸ್ತೆ ಸುಧಾರಣೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಿದರು.ಹಳಿಯಾಳ ಪುರಭವನದಲ್ಲಿ ಕಾರ್ಮಿಕ ಇಲಾಖೆಯಿಂದ ಕಿಟ್ ವಿತರಣೆ ಹಾಗೂ ಶಿಕ್ಷಣ ಇಲಾಖೆಯಿಂದ 85 ವಿಕಲಚೇನತರಿಗೆ ಸಾಧನ ಸಲಕರಣೆ ವಿತರಣೆಗೆ ಚಾಲನೆ ನೀಡಿದರು.
ಪುರಸಭಾ ಅಧ್ಯಕ್ಷೆ ದ್ರೌಪದಿ ಅಗಸರ, ಉಪಾಧ್ಯಕ್ಷೆ ಲಕ್ಷ್ಮೀ ವಡ್ಡರ, ಅನಿಲ ಚವ್ಹಾನ, ಸಂಗೀತಾ ವಾಟ್ಲೆಕರ, ಶಮೀಮಬಾನು ಜಂಬೂವಾಲೆ, ಶಂಕರ ಬೆಳಗಾಂವಕರ, ಬಿಸಿಎಮ್ ಇಲಾಖೆಯ ಜಿಲ್ಲಾ ಆದಿಕಾರಿ ಶಿವಕ್ಕ ಮಾದರ, ಹಳಿಯಾಳ ಬಿಸಿಎಮ್ ಅಧಿಕಾರಿ ಸುಜಾತಾ ಖಡತರೆ, ಪುರಸಭಾ ಮಾಜಿ ಅಧ್ಯಕ್ಷ ಉಮೇಶ ಬೊಳಶೆಟ್ಟಿ ಹಾಗೂ ಇತರರು ಇದ್ದರು.;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))