ಬಿಜೆಪಿ ಟಿಕೆಟ್ ವಂಚಿತರು ಕಾಂಗ್ರೆಸ್‌ಗೆ ಬಂದೇ ಬರುತ್ತಾರೆ

| Published : Mar 16 2024, 01:51 AM IST

ಸಾರಾಂಶ

ಬಿಜೆಪಿ ಲೋಕಸಭೆ ಟಿಕೆಟ್ ವಂಚಿತರು ಕಾಂಗ್ರೆಸ್ ಪಕ್ಷಕ್ಕೆ ಬಂದೇ ಬರುತ್ತಾರೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಬಾಂಬ್‌ ಸಿಡಿಸಿದರು.

ಕನ್ನಡಪ್ರಭ ವಾರ್ತೆ ಬಾಗಲಕೋಟೆ

ಬಿಜೆಪಿ ಲೋಕಸಭೆ ಟಿಕೆಟ್ ವಂಚಿತರು ಕಾಂಗ್ರೆಸ್ ಪಕ್ಷಕ್ಕೆ ಬಂದೇ ಬರುತ್ತಾರೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಬಾಂಬ್‌ ಸಿಡಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಸಾರಿ ಬಿಜೆಪಿಯಲ್ಲಿ ಸಾಕಷ್ಟು ಹಿನ್ನಡೆ ಆಗುತ್ತಿದೆ. ಮೈಸೂರಿನ ಇತಿಹಾಸ ನಿಮಗೂ ಗೊತ್ತಿದೆ. ಮೈಸೂರಿನಲ್ಲಿ ಬಿಜೆಪಿಯಿಂದ ಯದುವೀರ್ ಒಡೆಯರ್ ಅಭ್ಯರ್ಥಿ ಆಗಿರುವುದು ಕಾಂಗ್ರೆಸ್‌ಗೆ ಇನ್ನೂ ಸ್ವಲ್ಪ ಸಹಾಯವೇ ಆಗಬಹುದು ಎಂದರು.

ಮಹಾರಾಜರು ಸಾಮಾನ್ಯ ಜನರ ಜತೆಗೆ ಬೆರೆತಿಲ್ಲವೆಂದು ಸಂಸದ ಪ್ರತಾಪ್ ಸಿಂಹ ಹೇಳುತ್ತಿದ್ದಾರೆ. ಯದುವೀರ್ ಸಾಮಾನ್ಯ ಜನರಾಗಿ ಬರುತ್ತಿರುವುದನ್ನು ನಾನು ಸಂತೋಷದಿಂದ ಸ್ವೀಕರಿಸುತ್ತೇನೆ ಅಂತ ಪಾಪ ಪ್ರತಾಪ ಸಿಂಹ ಹೇಳಿದ್ದಾರೆ. ಯದುವೀರ್ ಸ್ಪರ್ಧೆಯಿಂದ ಮೈಸೂರು ಮಾತ್ರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಷ್ಠೆಯಾಗಲ್ಲ. ಇಡೀ ರಾಜ್ಯವೇ ಅವರಿಗೆ ಪ್ರತಿಷ್ಠೆ ಎಂದು ಹೇಳಿದರು.

ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಪೋಕ್ಸೋ ಪ್ರಕರಣಕ್ಕೆ ಪ್ರತಿಕ್ರಿಯಿಸಿದ ಅವರು, ಇದು ಒಂದು ಕಡೆ ದುರುದ್ದೇಶದಿಂದಲೂ ಆಗಿರಬಹುದು. ಆಕಸ್ಮಾತ್ ಸದುದ್ದೇಶದಿಂದ ಯಾರಾದ್ರೂ ನೋಡಿದ್ರೆ, ಆಗಿದ್ದರೆ ಕಾನೂನು ತನ್ನ ಕ್ರಮಕೈಗೊಳ್ಳುತ್ತದೆ. ಇದಕ್ಕೆ ಗೃಹಮಂತ್ರಿಗಳು ಪ್ರತಿಕ್ರಿಯಿಸಿದರೇ ಸೂಕ್ತ. ನನಗೆ ಆ ಬಗ್ಗೆ ಸರಿಯಾಗಿ ಗೊತ್ತಿಲ್ಲ ಎಂದರು.ಸಂಘರ್ಷದಿಂದ ಮಗಳಿಗೆ ಟಿಕೆಟ್‌ ಪಡೆಯಲ್ಲ: ಸಚಿವ ಶಿವಾನಂದ

ಬಾಗಲಕೋಟೆ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟನ್ನು ಸಾಮರಸ್ಯದಿಂದ ನೀಡಿದರೇ ಮಾತ್ರ ಮಗಳು ಸಂಯುಕ್ತ ಪಾಟೀಲರಿಗೆ ಪಡೆದುಕೊಳ್ಳುತ್ತೇವೆ. ಸಂಘರ್ಷದಿಂದ ಪಡೆಯಲ್ಲ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಸ್ಪಷ್ಟಪಡಿಸಿದರು.

ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿರಿಯರಾದ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಜಯಕುಮಾರ ಸರನಾಯಕ, ಕಳೆದ ಬಾರಿಯ ಅಭ್ಯರ್ಥಿ ವೀಣಾ ಕಾಶಪ್ಪನವರ, ಕಾಶಪ್ಪನವರ ಚುನಾವಣೆಯನ್ನು ನಾನೇ ಜವಾಬ್ದಾರಿ ತಗೊಂಡು ಮಾಡಿದ್ದೆ. ನಮ್ಮಲ್ಲಿ ಎಲ್ಲರೂ ಸಮರ್ಥರಿದ್ದಾರೆ. ಮಾ.17 ರಂದು ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಬಹುದು ಎಂದರು. ನಾನು ವಿಜಯಪುರ ಹಾಗೂ ಬಾಗಲಕೋಟೆ ಬೇರೆ ಅಂತ ತಿಳಿದುಕೊಂಡಿಲ್ಲ. ಈ ಜಿಲ್ಲೆ ಒಡೆಯುವ ಸಮಯದಲ್ಲಿ ನಾವು ಬೇಡ ಎಂದ್ವಿ. ಡಿಸಿಸಿ ಬ್ಯಾಂಕ್ ಒಡೆದು ಕೊಡಿ ಅಂದ್ರು ಕೊಟ್ಟಿ ಎಂದರು.